ನಟ ದರ್ಶನ್ (Darshan) ಅವರು ಪೊಲೀಸರ ಅತಿಥಿ ಆಗಿದ್ದಾರೆ. ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಕೇಸ್ನಲ್ಲಿ ಅವರನ್ನು ಬಂಧಿಸಲಾಗಿದೆ. ಪವಿತ್ರಾ ಗೌಡ ಅವರು ಎ1 ಆರೋಪಿ ಎನಿಸಿಕೊಂಡರೆ, ದರ್ಶನ್ ಎ2 ಆರೋಪಿ ಆಗಿದ್ದಾರೆ. ಸದ್ಯ ಅವರನ್ನು ಆರು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಒಂದೊಮ್ಮೆ ಆರೋಪ ಸಾಬೀತಾದರೆ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ದರ್ಶನ್ ಅವರು ಅರೆಸ್ಟ್ ಆಗಿರುವುದರಿಂದ ಸ್ಯಾಂಡಲ್ವುಡ್ ಸೈಲೆಂಟ್ ಆಗಿದೆ. ಬಹುತೇಕ ಸೆಲೆಬ್ರಿಟಿಗಳು ಈ ವಿಚಾರದಲ್ಲಿ ಮೌನ ತಾಳಿದ್ದಾರೆ. ಕೆಲವೇ ಕೆಲವು ಸೆಲೆಬ್ರಿಟಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಿಜಕ್ಕೂ ತಪ್ಪಾಗಿದ್ದರೆ ಶಿಕ್ಷೆ ಆಗಬೇಕು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಈ ರೀತಿ ಘಟನೆಗಳು ನಡೆದಾಗ ಕರ್ನಾಟಕ ಚಲನಚಿತ್ರ ಮಂಡಳಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಅನ್ನೋದು ಮುಖ್ಯವಾಗುತ್ತದೆ.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ಎಂ ಸುರೇಶ್ ಅವರು ಈ ಕೇಸ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ದರ್ಶನ್ ಅವರು ಚಿತ್ರರಂಗದ ಮಾನ-ಮರ್ಯಾದೆ ಕಳೆದಿರುವುದಾಗಿ ಅವರು ಹೇಳಿದ್ದಾರೆ ಎನ್ನಲಾಗುತ್ತಿದೆ. ಒಂದೊಮ್ಮೆ ಆರೋಪ ಸಾಬೀತಾದರೆ ಅವರ ಮೇಲೆ ನಿಷೇಧ ಹೇರುವುದಾಗಿಯೂ ಹೇಳಿದ್ದಾರೆ. ಜೊತೆಗೆ ಈ ವಿಚಾರದಲ್ಲಿ ಕಲಾವಿದರ ಸಂಘದವರು ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಕಲಾವಿದರ ಸಂಘದ ವಿಚಾರಕ್ಕೆ ಬರೋದಾದರೆ ಅದು ಸಂಪೂರ್ಣ ನಿಷ್ಕ್ರಿಯವೇ ಆಗಿ ಬಿಟ್ಟಿದೆ ಎನ್ನಬಹುದು. ಅಂಬರೀಷ್ ಅವರು ಈ ಸಂಘಕ್ಕೆ ಅಧ್ಯಕ್ಷರಾಗಿದ್ದರು. ಅವರು ಮೃತಪಟ್ಟ ಬಳಿಕ ಮತ್ತೊಬ್ಬರ ಆಯ್ಕೆ ಆಗಿಲ್ಲ. ಸಭೆಗಳು ಕೂಡ ನಡೆಯುತ್ತಿಲ್ಲ. ಹೀಗಿರುವಾಗ ಸಂಘದವರು ದರ್ಶನ್ನ ಬ್ಯಾನ್ ಮಾಡೋದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರ, ದರ್ಶನ್ ಮೇಲೆ ರೌಡಿಶೀಟರ್? ಗೃಹ ಸಚಿವರು ಹೇಳಿದ್ದೇನು ನೋಡಿ
ದರ್ಶನ್ ಸಿನಿಮಾಗಳಿಗೆ ಬೇಡಿಕೆ ಇದೆ. ಅವರು ಸಿನಿಮಾಗಳಿಂದ ಅನೇಕರಿಗೆ ಕೆಲಸ ಸಿಗುತ್ತಿದೆ. ಇವರನ್ನು ಬ್ಯಾನ್ ಮಾಡಬೇಕು ಎಂದಾಗ ಅದನ್ನು ಬೆಂಬಲಿಸೋರು ಕಡಿಮೆ ಎನ್ನುವ ಮಾತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.