ಇಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತೆ ಅಧಿಕಾರಕ್ಕೇರಿದೆ. ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಎಲ್ಡಿಎಫ್ ಗೆಲುವು. ಅಸ್ಸಾಂನಲ್ಲಿ ಬಿಜೆಪಿ ಹಾಗೂ ಪದುಚೇರಿಯಲ್ಲಿ ಎನ್.ಆರ್.ಕಾಂಗ್ರೆಸ್ ಜತೆ ಚುನಾವಣಾ ಪೂರ್ವ ಮೈತ್ರಿ ಮೂಲಕ ಬಿಜೆಪಿ ಅಧಿಕಾರಕ್ಕೇರಿದೆ. ಹೀಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ನಟಿ ಹಾಗೂ ರಾಜಕಾರಣಿ ರಮ್ಯಾ ಪೋಲ್ ಒಂದನ್ನು ನಡೆಸಿದ್ದಾರೆ. ಮೋದಿ ರಿಸೈನ್ ಮಾಡಬೇಕು ಎಂದು ಶೇ.64 ಮಂದಿ ಬೆಂಬಲ ಸೂಚಿಸಿದ್ದಾರೆ.
ಕೊರೊನಾ ಎರಡನೇ ಅಲೆ ಮಿತಿಮೀರಿ ಹರಡುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ನೇರ ಕಾರಣ ಎಂಬುದು ಅನೇಕರ ಆರೋಪ. ಕೊರೊನಾ ಹರಡುತ್ತಿದ್ದ ಹೊರತಾಗಿಯೂ ಅನೇಕ ಕಡೆಗಳಲ್ಲಿ ಚುನಾವಣಾ ಸಮಾವೇಶಗಳು ನಡೆದವು. ದೇಶದ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ನೆಲಕಚ್ಚಿದ್ದು, ಇದಕ್ಕೆ ನೇರವಾಗಿ ಮೋದಿಯೇ ಕಾರಣ ಎನ್ನುವ ಆರೋಪ ಕೇಳಿ ಬರುತ್ತಿದೆ.
ದೇಶದಲ್ಲಿ ನಿತ್ಯ ನಾಲ್ಕು ಲಕ್ಷಕ್ಕೂ ಹೆಚ್ಚು ಕೊರೊನಾ ಕೇಸ್ಗಳು ಬರುತ್ತಿವೆ. ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ದೇಶದ ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಲೇ ಇವೆ. ಇದಕ್ಕೆ ನಟಿ ರಮ್ಯಾ ಕೂಡ ಹೊರತಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಾಕುತ್ತಿರುವ ಅವರು, ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಈಗ ಇನ್ಸ್ಟಾಗ್ರಾಂನಲ್ಲಿ ಪೋಲ್ ಒಂದನ್ನು ನಡೆಸಿದ್ದರು. ಈ ಪೋಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕೋ ಅಥವಾ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ರಿಸೈನ್ ಮಾಡಬೇಕೋ ಎಂದು ಕೇಳಿದ್ದರು. ಈ ಪೋಲ್ನಲ್ಲಿ 89,615 ಮಂದಿ ಭಾಗಿಯಾಗಿದ್ದಾರೆ. ಶೇ.64 ಮಂದಿ ಮೋದಿ ರಿಸೈನ್ ಮಾಡಬೇಕು ಎಂದು ಹೇಳಿದರೆ, ಉಳಿದ ಶೇ.36 ಜನರು ಹರ್ಷವರ್ಧನ್ ರಿಸೈನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ರಮ್ಯಾ ಕನ್ನಡ ಚಿತ್ರರಂಗದ ಬೇಡಿಕೆಯ ನಟಿ ಆಗಿದ್ದರು. ನಂತರ ಅವರು ಚಿತ್ರರಂಗ ತೊರೆದು ಕಾಂಗ್ರೆಸ್ ಸೇರಿದರು. ರಮ್ಯಾ ಕಾಂಗ್ರೆಸ್ನಿಂದ ಸಂಸದೆ ಕೂಡ ಆದರು. ಈಗ ಅವರು ರಾಜಕೀಯದಿಂದ ದೂರ ಉಳಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಅಗಿರುವ ಅವರು, ಮತ್ತೆ ನಟನೆಗೆ ಬರುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದರು.