ವಿಜಯಲಕ್ಷ್ಮಿ ದರ್ಶನ್ ನನ್ನ ಗೆಳತಿ, ಹಾಗೆಂದು ನಾನು ಸುಮ್ಮನಿರಲ್ಲ: ರಮ್ಯಾ

Darshan Thoogudeepa vs Ramya: ನಟಿ ರಮ್ಯಾ ಮತ್ತೊಮ್ಮೆ ದರ್ಶನ್ ಅಭಿಮಾನಿಗಳ ದುರ್ವರ್ತನೆ ಬಗ್ಗೆ ಕೆಂಡ ಕಾರಿದ್ದಾರೆ. ರಮ್ಯಾ ಇನ್​ಸ್ಟಾಗ್ರಾಂಗೆ ಅತ್ಯಂತ ಅಶ್ಲೀಲವಾಗಿ ದರ್ಶನ್ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಇದೀಗ ಟಿವಿ9 ಕನ್ನಡದ ಜೊತೆಗೆ ಮಾತನಾಡಿರುವ ರಮ್ಯಾ ವಿಜಯಲಕ್ಷ್ಮಿ ದರ್ಶನ್ ಬಗ್ಗೆಯೂ ಮಾತನಾಡಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ನನ್ನ ಗೆಳತಿ, ಹಾಗೆಂದು ನಾನು ಸುಮ್ಮನಿರಲ್ಲ: ರಮ್ಯಾ
Darshan Ramya

Updated on: Jul 27, 2025 | 10:42 PM

ಅಶ್ಲೀಲ ಕಮೆಂಟ್ ಮಾಡುವ ಸೋಷಿಯಲ್ ಮೀಡಿಯಾ ಕಾಮುಕರು, ಸಾಮಾಜಿಕ ಜಾಲತಾಣ ದುರಳರ ವಿರುದ್ಧ ನಟಿ ರಮ್ಯಾ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನ ಹೇಳಿಕೆಯನ್ನು ಆಧರಿಸಿ, ಸಾಮಾನ್ಯರಿಗೆ ನ್ಯಾಯ ಸಿಗುವಂತಾಗಲಿ ಎಂದು ರಮ್ಯಾ ಪೋಸ್ಟ್ ಹಂಚಿಕೊಂಡಿದ್ದರು. ದರ್ಶನ್ ಅಭಿಮಾನಿಗಳು ರಮ್ಯಾರ ಪೋಸ್ಟ್​ಗೆ ಅಶ್ಲೀಲವಾಗಿ ಕಮೆಂಟ್​ಗಳನ್ನು, ಕೆಲವರು ಬೆದರಿಕೆಗಳನ್ನು ಸಹ ಹಾಕಿದ್ದರು. ಅದಾದ ಬಳಿಕ ರಮ್ಯಾ, ದರ್ಶನ್ ಅಭಿಮಾನಿಗಳ ದುರ್ವರ್ತನೆಯನ್ನು ಖಂಡಿಸಿದ್ದರು. ಅದಕ್ಕೂ ಸಹ ದರ್ಶನ್ ಅಭಿಮಾನಿಗಳು ತಮ್ಮ ಅಶ್ಲೀಲ ಕಮೆಂಟುಗಳ ವರಸೆ ಮುಂದುವರೆಸಿದ್ದರು. ಇದೀಗ ನಟಿ ರಮ್ಯಾ ಕಾನೂನಿನ ಮೊರೆ ಹೋಗಿದ್ದಾರೆ.

ಟಿವಿ9 ಜೊತೆಗೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿರುವ ನಟಿ ರಮ್ಯಾ, ದರ್ಶನ್ ಅಭಿಮಾನಿಗಳ ಮನಸ್ಥಿತಿಯ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ‘ಸುಪ್ರೀಂಕೋರ್ಟ್ ವಿಚಾರಣೆಯನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯರಿಗೆ ನ್ಯಾಯ ಸಿಗಲಿ ಎಂದಿದ್ದೆ. ಅದಕ್ಕೆ ಅಶ್ಲೀಲ ಪದಗಳನ್ನು ಬಳಸಿ ಕಮೆಂಟ್ ಮಾಡಿದ್ದಾರೆ. ಇದು ಇವರಿಗೆ ಸಾಮಾನ್ಯ ಕಾರ್ಯದಂತಾಗಿಬಿಟ್ಟಿದೆ. ಸುದೀಪ್, ಯಶ್ ಅವರಿಗೂ ಬೈದಿದ್ದಾರೆ. ಯಶ್ ಅವರ ಪತ್ನಿ, ಮಕ್ಕಳ ಬಗ್ಗೆಯೂ ಮಾತನಾಡಿದ್ದಾರೆ. ಇದಕ್ಕೆ ಅಂತ್ಯ ಹಾಡಬೇಕಿದೆ. ತಪ್ಪು ನಡೆದಾಗ ಧ್ವನಿ ಎತ್ತಬಾರದಾ?’ ಎಂದು ರಮ್ಯಾ ಪ್ರಶ್ನೆ ಮಾಡಿದ್ದಾರೆ.

ದರ್ಶನ್ ಹಾಗೂ ನನ್ನ ನಡುವೆ ಯಾವುದೇ ಸಮಸ್ಯೆ ಇಲ್ಲ. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಮೊನ್ನೆ ಸಹ ಮದುವೆಯೊಂದರಲ್ಲಿ ಸಿಕ್ಕಿದ್ದರು, ನಾವು ಮಾತನಾಡಿದೆವು. ಆದರೆ ನಾನು ಬಕೆಟ್ ಹಿಡಿಯೋ ಪ್ರವೃತ್ತಿಯವಳಲ್ಲ, ನಾನು ಸದಾ ನ್ಯಾಯದ ಪರ ದನಿ ಎತ್ತಿದ್ದೇನೆ, ಮುಂದೆಯೂ ಹೀಗೆಯೇ ಇರಲಿದ್ದೇನೆ. ರಾಜಕಾರಣಿ ಆಗಲಿ, ನಟರಾಗಲಿ ತಪ್ಪು ತಪ್ಪೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲಿ ಎಂದಷ್ಟೆ ನಾನು ಹೇಳಿದ್ದೇನೆ. ಈ ವಿಷಯ ಮಾತ್ರವೇ ಅಲ್ಲ. ಅನ್ಯಾಯ ಆದಾಗ ಬೇರೆ ವಿಷಯಗಳ ಬಗ್ಗೆಯೂ ನಾನು ಮಾತನಾಡಿದ್ದೇನೆ’ ಎಂದಿದ್ದಾರೆ ನಟಿ ರಮ್ಯಾ.

ಇದನ್ನೂ ಓದಿ:ಮತ್ತೆ ದರ್ಶನ್ ಅಭಿಮಾನಿಗಳ ಮೇಲೆ ಆಕ್ರೋಶ ಹೊರಹಾಕಿದ ರಮ್ಯಾ

‘ಹೀಗೆ ಅಶ್ಲೀಲವಾಗಿ ಕಮೆಂಟ್ ಹಾಕುವ, ಟ್ರೋಲ್ ಹಾಕುವ ಇಂಥಹಾ ದುರುಳರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಇಂಥಹಾ ಮನಸ್ಥಿತಿಯವರಿಂದಲೇ​ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದ, ಆತ ಮಾಡಿದ್ದು ಕೆಟ್ಟದ್ದು ಎನ್ನುತ್ತೀರಲ್ಲ, ಈಗ ನೀವು ಮಾಡುತ್ತಿರುವುದು ಸರಿಯಾ? ಹಾಗಾದರೆ ನಿಮ್ಮನ್ನೂ ಕೊಲ್ಲಬೇಕಲ್ಲಾ? ಎಂದು ರಮ್ಯಾ, ದರ್ಶನ್ ಅಭಿಮಾನಿಗಳನ್ನು ಪ್ರಶ್ನೆ ಮಾಡಿದ್ದಾರೆ. ಮುಂದುವರೆದು, ಮಹಿಳೆಯರಿಗೆ ಇಷ್ಟು ಅಶ್ಲೀಲವಾಗಿ ಕಮೆಂಟ್ ಮಾಡುತ್ತಾರಾಲ್ಲ, ಇವರ ಮನೆಯಲ್ಲಿ ಯಾರೂ ಹೆಣ್ಣು ಮಕ್ಕಳೇ ಇಲ್ಲವಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇಂಥಹಾ ಮನಸ್ಥಿತಿಯವರಿಗೆ ಅಂತ್ಯ ಹಾಡಬೇಕು, ನಾಳೆ ಸೈಬರ್ ಕ್ರೈಂಗೆ ದೂರು ಕೊಡುವ ಆಲೋಚನೆ ಇದೆ. ಇಂಥಹವರನ್ನು ಧೈರ್ಯವಾಗಿ ಎದುರಿಸಲು ಹೆಣ್ಣು ಮಕ್ಕಳು ಹೆದರಿಕೊಳ್ಳುತ್ತಾರೆ. ನಮ್ಮ ವ್ಯಕ್ತಿತ್ವಕ್ಕೆ ಕುತ್ತು ಬರುತ್ತದೆ ಎಂದು ಸುಮ್ಮನಾಗುತ್ತಾರೆ. ಟ್ರೋಲ್ ಮಾಡುವವರನ್ನು ಸಹಿಸಿಕೊಳ್ಳುತ್ತಾರೆ. ಆದರೆ ಅದಕ್ಕೆ ಪ್ರತಿಕ್ರಿಯೆ ನೀಡಬೇಕು, ನಾವು ಒಟ್ಟಾಗಿ ಫೈಟ್ ಮಾಡಬೇಕಿದೆ. ಇಲ್ಲದೇ ಹೋದರೆ ಇಂಥಹವರ ಸಂಖ್ಯೆ ಹೆಚ್ಚಾಗಲಿದೆ’ ಎಂದಿದ್ದಾರೆ ರಮ್ಯಾ.

ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಬಗ್ಗೆ ಮಾತನಾಡಿದ ರಮ್ಯಾ, ‘ದರ್ಶನ್ ಅವರೊಟ್ಟಿಗೆ ನಟಿಸಿದ್ದೇನೆ. ಆದರೆ ಅವರ ಜೀವನದಲ್ಲಿ ಹೀಗೆಲ್ಲ ಆಯ್ತಲ್ಲ ಎಂದು ಬೇಸರ ಆಗುತ್ತೆ. ಅವರ ಜೀವನದಲ್ಲಿ ಹೀಗೆಲ್ಲ ಆಗುತ್ತೆ ಅಂದುಕೊಂಡಿರಲಿಲ್ಲ. ಆದೆ ತಪ್ಪು-ತಪ್ಪು ಅಷ್ಟೆ. ಒಬ್ಬ ಸೆಲೆಬ್ರಿಟಿ ಆಗಿ ಅವರು ಸಮಾಜಕ್ಕೆ ಮಾದರಿ ಆಗಬೇಕಿತ್ತು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಒಳ್ಳೆಯ ಮಹಿಳೆ ‘ದತ್ತ’ ಸಿನಿಮಾದಿಂದಲೂ ನಾವು ಗೆಳೆಯರು, ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಹನಿ ಕೇಕ್ ಪೋಸ್ಟ್ ಹಾಕಿದ್ದೆ. ಹನಿ ಕೇಕ್ ಕಳಿಸಲಾ ಎಂದು ಮೆಸೇಜ್ ಮಾಡಿದ್ದರು. ನನಗೆ ವಿಜಯಲಕ್ಷ್ಮಿ ಬಹಳ ಇಷ್ಟ, ಆದರೆ ನನಗೆ ಸತ್ಯವೇ ಮುಖ್ಯ. ನನಗೆ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಇದೆ. ನಾನು ನ್ಯಾಯದ ಪರವಾಗಿಯೇ ನಿಲ್ಲುತ್ತೀನಿ’ ಎಂದಿದ್ದಾರೆ ರಮ್ಯಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ