
ಚರಣ್ ರಾಜ್ ಅವರು ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ. ವಿಲನ್ ಪಾತ್ರ, ಪೊಲೀಸ್ ಪಾತ್ರದ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಅವರು ಅಂಬರೀಷ್ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಅಂಬರೀಷ್ ಕಾರಣದಿಂದಲೇ ಅವರು ಕಾರು ಖರೀದಿ ಮಾಡಬೇಕಾಯಿತು. ಈ ಬಗ್ಗೆ ‘ಕಲಾ ಮಾಧ್ಯಮ’ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಚರಣ್ ರಾಜ್ ವಿವರಿಸಿದ್ದಾರೆ. ಅಂಬರೀಷ್ ಅವರ ಕಾಳಜಿ ಇದರಲ್ಲಿ ಎದ್ದು ಕಾಣಿಸುತ್ತದೆ.
‘ಇದು 1985ರ ಕಾರು. ಈಗಲೂ ರನ್ನಿಂಗ್ ಅಲ್ಲಿದೆ. ಇದನ್ನು ತೆಗೆದುಕೊಳ್ಳಲು ಕಾರಣ ಅಂಬರೀಷ್. ನನ್ನ ಬಳಿ ಮೊದಲು ಹೆರಾಲ್ಡ್ ಕಾರು ಇತ್ತು. ನಾನು ಚಾಮುಂಡೇಶ್ವರಿ ಸ್ಟುಡಿಯೋಗೆ ಡಬ್ಬಿಂಗ್ಗೆ ಹೋಗ್ತಾ ಇದ್ದೆ. ಕಾರಿನ ಎಕ್ಸೆಲ್ ಕಟ್ ಆಯ್ತು. ಇದರಿಂದ ಸೌಂಡ್ ಬರ್ತಾ ಇತ್ತು. ನಾನು ಅಂಬರೀಷ್ ಕಾರು ನಿಲ್ಲಿಸೋ ಜಾಗದಲ್ಲಿ ನನ್ನ ಕಾರು ನಿಲ್ಲಿಸಿದ್ದೆ. ಮೆಕ್ಯಾನಿಕ್ ಬಂದು ಕಾರನ್ನು ರಿಪೇರಿ ಮಾಡುತ್ತಿದ್ದ’ ಎಂದಿದ್ದಾರೆ ಚರಣ್ ರಾಜ್.
‘ಅಂಬರೀಷಣ್ಣ ಬಂದರು. ಆ ಡಬ್ಬಾ ಕಾರು ಯಾರದ್ದು ಎಂದು ಕೇಳಿದರು. ಚರಣ್ ರಾಜ್ ಅವರದ್ದು ಎಂದು ಅಲ್ಲಿದ್ದವರು ಹೇಳಿದರು. ಡಬ್ಬಿಂಗ್ ಮಾಡ್ತಾ ಇದ್ದೆ. ಅಂಬೀ ಕರೆದರು. ನಾನು ಹೋದೆ. ಅಣ್ಣಾ ಎಂದು ನಮಸ್ಕರಿಸಿದೆ. ಅವರು ನನ್ನಮೇಲೆ ಸಿಟ್ಟಾದರು’ ಎಂದು ಅಂದು ನಡೆದ ಘಟನೆ ಹೇಳಿದ್ದಾರೆ.
‘ನಿನ್ನ ಗಾಡೀನಾ ಎಂದು ಕೇಳಿದರು. ಹೌದು ಎಂದೆ. ನೀನು ಕಲಾವಿದ. ಇಂತಹ ಡಬ್ಬಾ ಗಾಡಿ ತೆಗೆದುಕೊಂಡು ಹೋಗಿ ದಾರಿ ಮಧ್ಯೆ ಹಾಳಾದ್ರೆ ಏನು ಮಾಡ್ತೀಯಾ. ಫೈನಾನ್ಸರ್ ಜೊತೆ ಮಾತನಾಡಿದ್ರು. ಹಣ ಕೊಡಿಸೋ ವ್ಯವಸ್ಥೆ ಆಯಿತು. ಹಳೆ ಕಾರು ಮಾರಲೂ ವ್ಯವಸ್ಥೆ ಆಯಿತು’ ಎಂದು ಕಾರು ಖರೀದಿ ಮಾಡಿದ ಘಟನೆ ಹೇಳಿದರು.
ಇದನ್ನೂ ಓದಿ: ಮೂರು ಬಾರಿ ಸಾಯಲು ಹೋಗಿದ್ದ ಚರಣ್ ರಾಜ್; ತಪ್ಪಿದ್ದು ಹೇಗೆ?
‘ಇಎಂಐ ಕಡ್ತೀಯಾ ನಾನೇ ಕಟ್ಟಬೇಕಾ? ಈ ಕಾರಲ್ಲಿ ಮತ್ತೆ ಕಾಣಿಸಿಕೊಂಡ್ರೆ ಕಾರನ್ನು ಸುಟ್ಟು ಹಾಕ್ತೀನಿ. ಕಲಾವಿದರ ಮರ್ಯಾದೆ ಕಳೀತೀಯಲ್ಲೋ ಎಂದರು. ಹೊಸ ಕಾರು ಖರೀದಿ ಮಾಡಿದೆ. 81 ಸಾವಿರ ರೂಪಾಯಿ ಖರ್ಚಾಯಿತು. ಎರಡು ದಿನದಲ್ಲಿ ಕಾರು ಸಿಕ್ತು. ಅಂಬರೀಷ್ಗೆ ಕಾರು ತೋರಿಸಿದೆ. ಕಲಾವಿದರು ಯಾರ ಮುಂದೆಯೂ ಬಗ್ಗ ಬಾರದು. ಕಾರು ಚೆನ್ನಾಗಿರಬೇಕು. ನೋಡಿದವರು ಹೊಟ್ಟೆ ಉರಿದುಕೊಳ್ಳಬೇಕು’ ಎಂದರು ಅವರು. ‘ಈ ಕಾರು ಸಿಕ್ಕಮೇಲೆ ನನ್ನ ಅದೃಷ್ಟ ಬದಲಾಯಿತು. ಮದುವೆ ಆದೆ. ಹಿಟ್ ಚಿತ್ರ ಸಿಕ್ಕಿತು’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.