‘ಅವನಿರಬೇಕಿತ್ತು’ ಹೊಸಬರ ಪ್ರಯತ್ನ, ಹೊಸ ಹಾಡು ಬಿಡುಗಡೆ

|

Updated on: Mar 18, 2025 | 10:04 PM

Sandalwood news: ಮತ್ತೊಂದು ಹೊಸ ತಂಡ ಚಂದನವನದ ಅಂಗಳಕ್ಕೆ ಹೊಸ ಸಿನಿಮಾ ಹೊತ್ತು ತಂದಿದೆ. ಮೊದಲ ಬಾರಿ ಸಿನಿಮಾ ನಿರ್ದೇಶಿಸುತ್ತಿರುವ ಅಶೋಕ್ ಸಾಮ್ರಾಟ್ ನಿರ್ದೇಶನ ಮಾಡಿರುವ ‘ಅವನಿರಬೇಕಿತ್ತು’ ಸಿನಿಮಾದ ಹೊಸ ಹಾಡೊಂದು ಇದೀಗ ಬಿಡುಗಡೆ ಆಗಿದೆ. ಹಾಡು ಗಮನ ಸೆಳೆಯುತ್ತಿದೆ. ಸಿನಿಮಾದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ...

‘ಅವನಿರಬೇಕಿತ್ತು’ ಹೊಸಬರ ಪ್ರಯತ್ನ, ಹೊಸ ಹಾಡು ಬಿಡುಗಡೆ
Avanirabekithu
Follow us on

ಬಹುತೇಕ ಅನುಭವಿ ನಿರ್ದೇಶಕರು ಸಿದ್ಧ ಸೂತ್ರಗಳ ಬೆನ್ನು ಹತ್ತಿರುವಾಗ, ಕನ್ನಡದಲ್ಲಿ ಕತೆಯನ್ನು ನಂಬಿಕೊಂಡು, ಭಿನ್ನವಾದ ಸಿನಿಮಾ ನೀಡುವ ತುಡಿತ ಇರುವುದು ಹೊಸ ತಂಡಗಳಿಗೆ ಮಾತ್ರ. ಕೆಲವಾರು ಹೊಸ ತಂಡಗಳು ಕೆಲವು ಒಳ್ಳೆಯ ಸಿನಿಮಾಗಳನ್ನು ಇತ್ತೀಚೆಗಿನ ವರ್ಷಗಳಲ್ಲಿ ನೀಡಿವೆ. ಕೆಲವು ಹಿಟ್ ಆಗಿವೆ, ಕೆಲವು ಆಗಿಲ್ಲ. ಇದೀಗ ಮತ್ತೊಂದು ಹೊಸ ತಂಡವೊಂದು ಹೊಸ ಸಿನಿಮಾದೊಟ್ಟಿಗೆ ಚಂದನವನದ ಅಂಗಳಕ್ಕೆ ಬಂದಿದೆ. ಇದು ಹೊಸಬರ-ಅನುಭವಿಗಳ ಸಮತೋಲಿತ ತಂಡ. ಇವರು ತಂದಿರುವ ಸಿನಿಮಾದ ಹೆಸರು ‘ಅವನಿರಬೇಕಿತ್ತು’.

ಸಿನಿಮಾ ಅನ್ನು ಅಶೋಕ್ ಸಾಮ್ರಾಟ್ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಪ್ರಯತ್ನ. ಅವರ ಈ ಪ್ರಯತ್ನಕ್ಕೆ ಬಾಲ್ಯದ ಗೆಳೆಯ ಮುರಳಿ ಬಂಡವಾಳ ತೊಡಗಿಸಿದ್ದಾರೆ. ಇದೀಗ ಸಿನಿಮಾದ ‘ಓಹೋ ಹೃದಯ’ ಎಂಬ ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದೆ ‘ಅಂದಕಾಲತ್ತಿಲೇ, ಇಂದ ಕಾಲತ್ತಿಲೇ’ ಎಂಬ ಹಾಡು ಬಿಡುಗಡೆ ಮಾಡಿದ್ದರು. ಇದೀಗ ‘ಓಹೋ ಹೃದಯ’ ಎಂಬ ಮಧುರ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಅರ್ಪಾಜ್ ಉಳ್ಳಾಳ್ ಮತ್ತು ಅನುರಾಧ ಭಟ್ ಹಾಡಿದ್ದಾರೆ. ಸಂಗೀತ ಲೋಕಿ ತಪಸ್ಯ ಅವರದ್ದು.

ಈಗ ಬಿಡುಗಡೆ ಆಗಿರುವ ‘ಓಹೋ ಹೃದಯ’ ಹಾಡನ್ನು ರಾಜಸ್ತಾನ, ಲಡಾಕ್ ನಲ್ಲಿ ಕೇರಳದಲ್ಲಿ ಬಿರು ಬಿಸಿಸಿಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಾಡಿನ ಚಿತ್ರೀಕರಣಕ್ಕೆ ತೆರಳುವ ಮೊದಲು ಒಂದೂವರೆ ತಿಂಗಳು ತರಬೇತಿಯನ್ನು ಸಹ ಮಾಡಲಾಗಿತ್ತಂತೆ. ಛಾಯಾಗ್ರಾಹಕ ಪೃಥ್ವಿ ಮಾಲೂರು ಹಾಡನ್ನು ಸುಂದರವಾಗಿ ಚಿತ್ರೀಕರಿಸಿದ್ದಾರೆ ಎಂದರು ನಿರ್ದೇಶಕ ಅಶೋಕ್.

ಇದನ್ನೂ ಓದಿ:ದರ್ಶನ್ ಸಿನಿಮಾ ಹಾಡು ಹೇಳಿ ನಾನು ಫೇಮಸ್​ ಆದೆ: ನೇಪಾಳದ ಹುಡುಗ ಪ್ರೇಮ್ ತಾಪ

ಸಿನಿಮಾದಲ್ಲಿ ಭರತ್ ಎಂಬುವವರು ನಾಯಕ. ಇದು ನಾಯಕನಾಗಿ ಅವರ ಮೊದಲ ಸಿನಿಮಾ. ಸೌಮ್ಯಾ ನಾಯಕಿ. ಅವರಿಗೂ ಸಹ ನಾಯಕಿಯಾಗಿ ಇದು ಮೊದಲ ಸಿನಿಮಾ. ಆಡಿಷನ್ ನೀಡಿ ಈ ಸಿನಿಮಾಕ್ಕೆ ಆಯ್ಕೆ ಆಗಿದ್ದಾರಂತೆ ಅವರು. ಸಿನಿಮಾದಲ್ಲಿ ಲಕ್ಷ್ಮಿ ದೇವಮ್ಮ, ಪ್ರಶಾಂಸ್ ಸಿದ್ದಿ, ಮಂಜುನಾಥ್, ಕಿರಣ್ ಹೆಗಡೆ ನಟಿಸಿದ್ದಾರೆ. ತುಸು ಅನುಭವಿ ನಟರೆಂದರೆ ಇವರೆ. ಇನ್ಜುಳಿದಂತೆ ಎಲ್ಲರೂ ಹೊಸಬರು.

ಈ ಹಿಂದೆ ಬಿಡುಗಡೆ ಮಾಡಿರುವ ‘ಅಂದಕಾಲತ್ತಿಲೆ’ ಹಾಡು ಯೂಟ್ಯೂಬ್​ನಲ್ಲಿ ಒಂದು ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಕಂಡಿದೆ. ಇದೀಗ ‘ಓಹೋ ಹೃದಯ’ ಹಾಡು ಸಹ ಮಧುರವಾಗಿದ್ದು ಜನರ ಗಮನ ಸೆಳೆಯುತ್ತಿದೆ ಎಂಬುದು ಚಿತ್ರತಂಡ ಮಾತು. ಬಹುತೇಕ ಹೊಸಬರೇ ಮಾಡಿರುವ ಈ ಸಿನಿಮಾವನ್ನು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡುವ ಆಲೋಚನೆಯಲ್ಲಿ ಚಿತ್ರತಂಡ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:03 pm, Tue, 18 March 25