‘ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ’: ಈ ಶೀರ್ಷಿಕೆಯಲ್ಲಿ ಸೆಟ್ಟೇರಿದೆ ಹೊಸ ಸಿನಿಮಾ

|

Updated on: Apr 05, 2024 | 7:15 PM

‘ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ’ ಎಂಬ ಟೈಟಲ್​ನಲ್ಲಿ ಸಿನಿಮಾ ಬರುತ್ತಿದೆ. ಡಾಲಿ ಧನಂಜಯ್​ ಹೇಳಿದ ಮಾತನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ನಿರ್ದೇಶಕ ಮಂಜು ಕವಿ ಅವರು ಈ ಸಿನಿಮಾದ ಕಥೆ ಬರೆದಿದ್ದಾರೆ. ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಸುಚೇಂದ್ರ ಪ್ರಸಾದ್, ಸಂಗೀತಾ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ’: ಈ ಶೀರ್ಷಿಕೆಯಲ್ಲಿ ಸೆಟ್ಟೇರಿದೆ ಹೊಸ ಸಿನಿಮಾ
‘ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ’ ಸಿನಿಮಾದ ಮುಹೂರ್ತ ಸಮಾರಂಭ
Follow us on

ಸಿನಿಮಾದ ಟೈಟಲ್​ ಆಕರ್ಷಕವಾಗಿದ್ದರೆ ಜನರನ್ನು ಸೆಳೆಯುವುದು ಸುಲಭ. ಅದಕ್ಕಾಗಿ ಡಿಫರೆಂಟ್​ ಶೀರ್ಷಿಕೆಗಳಿಗಾಗಿ ಸಿನಿಮಾ ಮಂದಿ ಹುಡುಕಾಟ ನಡೆಸುತ್ತಾರೆ. ‘ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ’ (Badavara Maklu Belibeku Kanrayya) ಎಂಬ ಶೀರ್ಷಿಕೆಯಲ್ಲಿ ಈಗ ಒಂದು ಸಿನಿಮಾ ಸೆಟ್ಟೇರಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ (Daali Dhananjay) ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ‘ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ’ ಎಂದು ಹೇಳಿದ್ದರು. ಅದೇ ಮಾತನ್ನು ಶೀರ್ಷಿಕೆಯಾಗಿ ಇಟ್ಟುಕೊಂಡು ಮಂಜು ಕವಿ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಶ್ರೀರಾಮ ಪ್ರೊಡಕ್ಷನ್ಸ್’ ಮೂಲಕ ಸಿ.ಎಸ್. ವೆಂಕಟೇಶ್ ಅವರು ‘ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚಿಗೆ ಈ ಸಿನಿಮಾದ ಮುಹೂರ್ತ ನಡೆಯಿತು. ಬೆಂಗಳೂರಿನ ರೇಣುಕಾಂಬ ಥಿಯೇಟರ್​ನಲ್ಲಿ ಮುಹೂರ್ತ ನೆರವೇರಿಸಲಾಯಿತು. ಬೆಂಗಳೂರು ಪೂರ್ವ ವಲಯ ಡಿಸಿಪಿ ದೇವರಾಜ್ ಅವರು ಆರಂಭ ಫಲಕ ತೋರುವ ಮೂಲಕ ಸಿನಿಮಾಗೆ ಚಾಲನೆ ನೀಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ. ಹರೀಶ್ ಸೇರಿದಂತೆ ಹಲವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಿನಿಮಾ ಸೆಟ್ಟೇರಿದ ಬಗ್ಗೆ ನಿರ್ಮಾಪಕ ಸಿ.ಎಸ್. ವೆಂಕಟೇಶ್ ಮಾತನಾಡಿದರು. ‘ನಾನು ಕೋಲಾರ ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೆ. ಸಿನಿಮಾ ಕ್ಷೇತ್ರದ ಸಾಕಷ್ಟು ಜನರು ನನಗೆ ಪರಿಚಯ. ಸಿನಿಮಾ ನಿರ್ಮಾಣ ಮಾಡುವಂತೆ ಎಷ್ಟೋ ಸ್ನೇಹಿತರು ಹೇಳುತ್ತಿದ್ದರು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಡಾಲಿ ಹೇಳಿದ ಮಾತೇ ಈ ಸಿನಿಮಾ ನಿರ್ಮಾಣಕ್ಕೆ ಸ್ಫೂರ್ತಿ. ನಿರ್ದೇಶಕ ಮಂಜು ಕವಿ ಅವರು ಸಿದ್ಧ ಮಾಡಿಕೊಂಡ ಕಥೆ ಬಹಳ ಚೆನ್ನಾಗಿದೆ. ನಾನೂ ಬಡತನದಿಂದಲೇ ಬಂದವನು. ಆದ್ದರಿಂದ ಈ ಕಥೆ ನನಗೆ ಇಷ್ಟವಾಯಿತು’ ಎಂದು ಅವರು ಹೇಳಿದರು.

ಇದನ್ನೂ ಓದಿ: ಸೆಟ್ಟೇರಿತು ಡಾಲಿ ನಿರ್ಮಾಣದ ಹೊಸ ಸಿನಿಮಾ ‘ಜೆಸಿ’; ಈ ಚಿತ್ರಕ್ಕೆ ಪ್ರಖ್ಯಾತ್​ ಹೀರೋ

ವಿಶೇಷ ಏನೆಂದರೆ, ಡಾಲಿ ಧನಂಜಯ್​ ಹೇಳಿದ ಮಾತನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ನಿರ್ದೇಶಕ ಮಂಜು ಕವಿ ಅವರು ಈ ಸಿನಿಮಾದ ಕಥೆ ಬರೆದಿದ್ದಾರೆ. ‘ಬಡವರ ಮನೆ ಮಕ್ಕಳಿಗೆ ಎಷ್ಟೇ ಪ್ರತಿಭೆ ಇದ್ದರೂ, ಚೆನ್ನಾಗಿ ಓದುವ ಹಂಬಲ ಇದ್ದರೂ ಅವರನ್ನು ಬೆಳೆಸಲು ಯಾರೂ ಮುಂದೆ ಬರಲ್ಲ. ಅವರ ಪ್ರತಿಭೆ ನಶಿಸುತ್ತದೆ. ಆ ರೀತಿ ಆಗಬಾರದು. ಪ್ರತಿಭೆ ಇರುವ ಬಡಮಕ್ಕಳ ಬೆಳೆಯಬೇಕು ಎಂಬುದೇ ಈ ಸಿನಿಮಾದ ಕಥಾಹಂದರ. ಈ ಸಿನಿಮಾದಲ್ಲಿ 4 ಹಾಡುಗಳಿವೆ. ನಾನೇ ಸಂಗೀತ ನಿರ್ದೇಶನ ಮಾಡುತ್ತಿದ್ದೇನೆ‌.‌ ತಂದೆ‌-ಮಗಳ ಬಾಂಧವ್ಯದ ಗೀತೆಯನ್ನು ಅನುರಾಧ ಭಟ್ ಹಾಡಿದ್ದಾರೆ. ವಿನು ಮನಸು ಅವರು ಹಿನ್ನೆಲೆ ಸಂಗೀತ ನೀಡುವುದರ ಜೊತೆ ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದಾರೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ: ಬಜೆಟ್​ನಲ್ಲಿ ಡಾಲಿ ಸಾಹಿತ್ಯ; ‘ಡೇರ್​ಡೆವಿಲ್​ ಮುಸ್ತಾಫಾ’ ಚಿತ್ರದ ಸಾಲು ಓದಿದ ಸಿಎಂ

ಬೆಂಗಳೂರು, ಮೈಸೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಸುಚೇಂದ್ರ ಪ್ರಸಾದ್ ಮತ್ತು ಸಂಗೀತಾ ಅವರು ಈ ಸಿನಿಮಾದ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಕ್ಕಳ ಪಾತ್ರಕ್ಕೆ ರಾಜವರ್ಧನ್, ಲಾವಣ್ಯ, ವೈಭವಿ ಬಣ್ಣ ಹಚ್ಚುತ್ತಿದ್ದಾರೆ. ಫ್ರೆಂಡ್ಸ್ ವಾಸು, ಚಂದ್ರಪ್ರಭ, ಮೂಗೂರು ಸುರೇಶ್, ಚೈತ್ರಾ ಕೊಟ್ಟೂರು, ಜಗದೀಶ್ ಕೊಪ್ಪ, ಚಿದಾನಂದ್, ಮಂಜು ಪಾವಗಡ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರೇಣುಕುಮಾರ್ ಅವರು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ವೆಂಕಿ ಯುಡಿವಿ ಅವರು ಸಂಕಲನ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.