ಕನ್ನಡದ ಕೋಟ್ಯಧಿಪತಿಯಿಂದ ಪುನೀತ್ಗೆ ಸಿಕ್ಕಿದ್ದ ಸಂಭಾವನೆ ಎಷ್ಟು? ಅದರಿಂದ ಅವರು ಮಾಡಿದ್ದೇನು?
ಪುನೀತ್ ರಾಜ್‌ಕುಮಾರ್ ಅವರು 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಿಂದ ಗಳಿಸಿದ 8 ಕೋಟಿ ಸಂಭಾವನೆಯನ್ನು ಶಕ್ತಿಧಾಮದ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟರು. ನಿರ್ದೇಶಕ ಭಗವಾನ್ ಈ ವಿಚಾರ ಬಹಿರಂಗಪಡಿಸಿದ್ದಾರೆ. ಅಪ್ಪು ಅವರ ಈ ಮಹತ್ವದ ನಿರ್ಧಾರದಿಂದ ಶಕ್ತಿಧಾಮದಲ್ಲಿ ಹೆಣ್ಣುಮಕ್ಕಳಿಗಾಗಿಯೇ ಶಾಲೆಯೊಂದು ನಿರ್ಮಾಣಗೊಂಡಿತು. ಈ ಶಾಲೆ ಶಕ್ತಿಧಾಮದ ಹಾಗೂ ಹೊರಗಿನ ಬಡ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುತ್ತಿದೆ.

ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ನಟನೆ, ಗಾಯನ, ಸಿನಿಮಾ ನಿರ್ಮಾಣ ಮಾತ್ರವಲ್ಲದೇ ಅವರು ನಿರೂಪಕನಾಗಿಯೂ ಜನಪ್ರಿಯತೆ ಪಡೆದುಕೊಂಡಿದ್ದು ಗೊತ್ತೇ ಇದೆ. ‘ಕನ್ನಡದ ಕೋಟ್ಯಧಿಪತಿ’ ಶೋನ ಅವರು ನಡೆಸಿಕೊಟ್ಟಿದ್ದರು. ಈ ಶೋ ನಡೆಸಿಕೊಟ್ಟಿದ್ದಕ್ಕೆ ಅವರಿಗೆ ಒಳ್ಳೆಯ ಸಂಭಾವನೆ ಸಿಕ್ಕಿತ್ತು. ಇದನ್ನು ಅವರು ಧರ್ಮದ ಕೆಲಸಕ್ಕೆ ಬಳಸಿಕೊಂಡಿದ್ದರು.
‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಿಂದ ಪುನೀತ್ ಅವರಿಗೆ ಸಿಕ್ಕಿದ್ದು ಬರೋಬ್ಬರಿ 8 ಕೋಟಿ ರೂಪಾಯಿ ಸಂಭಾವನೆ ಆಗಿತ್ತು. ಈ ಬಗ್ಗೆ ಭಗವಾನ್ ಹೇಳಿದ್ದರು. ಪುನೀತ್ ಅವರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದವರು. ಮೈಸೂರಿನಲ್ಲಿ ಶಕ್ತಿಧಾಮ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇತ್ತು. ತಮ್ಮ ಕೈಗೆ ಸಂಭಾವನೆ ರೂಪದಲ್ಲಿ ಬಂದ ಆ 8 ಕೋಟಿ ರೂಪಾಯಿಯನ್ನು ಮಕ್ಕಳ ಶಿಕ್ಷಣಕ್ಕಾಗಿ ಅಪ್ಪು ಮೀಸಲಿಟ್ಟರು.
ಡಾ. ರಾಜ್‌ಕುಮಾರ್ ಕುಟುಂಬದ ಜೊತೆ ನಿರ್ದೇಶಕ ದೊರೆ-ಭಗವಾನ್ ಅವರಿಗೆ ಮೊದಲಿನಿಂದಲೂ ಒಡನಾಟ ಇದೆ. ಪುನೀತ್ ರಾಜ್‌ಕುಮಾರ್ ಅವರನ್ನು ಹತ್ತಿರದಿಂದ ಕಂಡಂತಹ ವ್ಯಕ್ತಿಗಳಲ್ಲಿ ಅವರು ಕೂಡ ಪ್ರಮುಖರು. ಟಿವಿ9ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಭಗವಾನ್ ಅವರು ಕೆಲವು ಮುಖ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಕ್ತಿಧಾಮದ ಮಕ್ಕಳ ಶಿಕ್ಷಣಕ್ಕಾಗಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ 8 ಕೋಟಿ ರೂಪಾಯಿ ಸಂಭಾವನೆಯನ್ನು ಮೀಸಲಿಟ್ಟರು ಎಂಬ ವಿಚಾರವನ್ನು ಭಗವಾನ್ ತೆರೆದಿಟ್ಟಿದ್ದಾರೆ.
‘ಕನ್ನಡದ ಕೋಟ್ಯಧಿಪತಿ ಪುನೀತ್ ಅವರಿಗೆ 8 ಕೋಟಿ ರೂಪಾಯಿ ಸಂಭಾವನೆ ಬಂತು. ಅದನ್ನು ಶಕ್ತಿಧಾಮಕ್ಕೆ ಅವರು ಕೊಟ್ಟಿದ್ದರು. ಶಕ್ತಿಧಾಮದಲ್ಲಿ ನೂರಾರು ಮಕ್ಕಳು ಇದ್ದಾರೆ. ಎಲ್ಲರೂ ಬೇರೆ ಬೇರೆ ಶಾಲೆಗೆ ಹೋಗುತ್ತಾರೆ. ಮಕ್ಕಳಿಗಾಗಿ ಶಕ್ತಿಧಾಮದಲ್ಲಿಯೇ ಒಂದು ಶಾಲೆಯನ್ನು ಕಟ್ಟಿಸಬಹುದಲ್ಲ ಎಂಬ ಆಲೋಚನೆ ಪುನೀತ್ ಅವರದ್ದಾಗಿತ್ತು. ಹೀಗಾಗಿ, ನಂತರ ಶಾಲೆ ಆರಂಭಿಸಲಾಯಿತು’ ಎಂದು ಭಗವಾನ್ ಹೇಳಿದ್ದರು.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಸಿನಿಮಾ ‘ಮಿಲನ’ ಸುಂದರಿ ಪಾರ್ವತಿ ಮೆನನ್ ಈಗೇನು ಮಾಡುತ್ತಿದ್ದಾರೆ ಗೊತ್ತಾ?
‘ಶಕ್ತಿಧಾಮ’ದ ಶಾಲೆ ಕೇವಲ ಹೆಣ್ಣುಮಕ್ಕಳಿಗೆ ಮಾತ್ರ. ಶಕ್ತಿಧಾಮದ ಮಕ್ಕಳು ಈ ಶಾಲೆಯಲ್ಲೇ ಓದಬೇಕು ಎಂಬುದು ಪುನೀತ್ ಶರತ್ತಾಗಿತ್ತು. ಹೊರಗಡೆಯಿಂದ ಬರುವ ಬಡ ಹೆಣ್ಣುಮಕ್ಕಳಿಗೂ ಪ್ರವೇಶ ನೀಡಬೇಕು ಎಂದು ಪುನೀತ್ ತಿಳಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



