
ಮಾಜಿ ಸಂಸದೆ, ಜನಪ್ರಿಯ ನಟಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಅವರಿಗೆ ಅಶ್ಲೀಲ ಕಮೆಂಟ್ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿತ್ತು. ಈಗ 7 ಆರೋಪಿಗಳಿಗೆ ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಕೆ. ಪ್ರಮೋದ್, ಮಂಜುನಾಥ್, ರಾಜೇಶ್ ಸಿ.ವೈ, ಓಬಣ್ಣ ಟಿ, ಗಂಗಾಧರ್ ಕೆ.ಎಂ, ಚಿನ್ಮಯ್ ಶೆಟ್ಟಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಮತ್ತೊಬ್ಬ ಆರೋಪಿ ವಿಕಾಸ್ ಬಿ.ಎ.ಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಈಗಾಗಲೇ ಆರೋಪಪಟ್ಟಿ ದಾಖಲಾಗಿರುವ ಹಿನ್ನೆಲೆಯಲ್ಲಿ ನ್ಯಾ. ಶಿವಶಂಕರ್ ಅಮರಣ್ಣವರ್ ಅವರಿದ್ದ ಪೀಠದಿಂದ ಜಾಮೀನು (Bail) ಮಂಜೂರಾಗಿದೆ. ಒಂದು ಲಕ್ಷ ಬಾಂಡ್, ಒಬ್ಬರ ಶ್ಯೂರಿಟಿ ಒದಗಿಸುವಂತೆ ಷರತ್ತು ಹಾಕಲಾಗಿದೆ.
ನಟಿ ರಮ್ಯಾ ಅವರು ನಟನೆಯಿಂದ ದೂರ ಇದ್ದಾರೆ. ಹಾಗಿದ್ದರೂ ಚಿತ್ರರಂಗದ ನಂಟು ಉಳಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಸಕ್ರಿಯರಾಗಿದ್ದಾರೆ. ಸಮಾಜದ ಅನೇಕ ಆಗು-ಹೋಗುಗಳ ಬಗ್ಗೆ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ನಟ ದರ್ಶನ್ ಪ್ರಕರಣದ ಬಗ್ಗೆಯೂ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದರು. ಆಗ ದರ್ಶನ್ ಅಭಿಮಾನಿಗಳು ರಮ್ಯಾಗೆ ಅಶ್ಲೀಲವಾಗಿ ಕಮೆಂಟ್ ಮಾಡಿದ್ದರು.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಹಾಗೂ ಇತರರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ್ದು ಸೂಕ್ತವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಆಗ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಮೂಡುತ್ತಿದೆ ಎಂದು ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದು ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿತ್ತು.
ರಮ್ಯಾ ಅವರ ಪೋಸ್ಟ್ ನೋಡಿದ ದರ್ಶನ್ ಅಭಿಮಾನಿಗಳು ಇನ್ಸ್ಟಾಗ್ರಾಮ್ನಲ್ಲಿ ಅಸಭ್ಯವಾಗಿ, ಅಶ್ಲೀಲವಾಗಿ ಮೆಸೇಜ್ ಮಾಡಲು ಆರಂಭಿಸಿದ್ದರು. ಅಂಥವರ ಮೆಸೇಜ್ಗಳ ಸ್ಕ್ರೀನ್ ಶಾಟ್ಗಳನ್ನು ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಅಲ್ಲದೇ ತಮಗೆ ಅಸಭ್ಯ, ಅಶ್ಲೀಲ ಕಮೆಂಟ್ ಮಾಡಿದವರ ವಿರುದ್ಧ ದೂರು ನೀಡಿದರು.
ಇದನ್ನೂ ಓದಿ: ರಮ್ಯಾ ಬಗ್ಗೆ ಅವಹೇಳನಾಕಾರಿ ಪೋಸ್ಟ್: ಆರೋಪಿಗಳ ಮೊಬೈಲ್ FSLಗೆ ರವಾನೆ
40ಕ್ಕೂ ಅಧಿಕ ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ರಮ್ಯಾ ಅವರು ದೂರು ಸಲ್ಲಿಸಿದ್ದರು. ಆ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದರು. ಆ ಪೈಕಿ ಕೆಲವರನ್ನು ಬಂಧಿಸಲಾಯಿತು. ಈಗ 7 ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ರಮ್ಯಾ ದೂರು ನೀಡಿದ ಬಳಿಕ ಅವರ ಪೋಸ್ಟ್ಗಳಿಗೆ ಅಶ್ಲೀಲವಾಗಿ ಕಮೆಂಟ್ ಮಾಡುವವರ ಸಂಖ್ಯೆ ಕಡಿಮೆ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.