
ಬೆಂಗಳೂರಿನಲ್ಲಿ ಕನ್ನಡ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಯುವತಿಯೊಬ್ಬರಿಗೆ ಮಾಜಿ ಪ್ರಿಯಕರನಿಂದ ಜೀವ ಬೆದರಿಕೆ ಹಾಗೂ ಅಶ್ಲೀಲವಾಗಿ ನಿಂದಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಯುವತಿಯ ಕಾರಿನ ಗ್ಲಾಸ್ ಒಡೆದು ಹಲ್ಲೆ ನಡೆಸಿ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಯುವತಿ ಕನ್ನಡ ಚಿತ್ರರಂಗದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ಶರತ್ ಕುಮಾರ್ ಎಂಬುವವರನ್ನು ಈ ಹಿಂದೆ ಪ್ರೀತಿಸುತ್ತಿದ್ದರು. ಪ್ರೀತಿಯಲ್ಲಿದ್ದ ಸಂದರ್ಭದಲ್ಲಿ ಶರತ್ ಕುಮಾರ್ ಅವರು ಯುವತಿಯ ಬಳಿ ಸುಮಾರು 2 ಲಕ್ಷ ರೂಪಾಯಿ ಹಣವನ್ನು ಕೈಸಾಲವಾಗಿ ಪಡೆದುಕೊಂಡಿದ್ದರು. ಆದರೆ, ವೈಯಕ್ತಿಕ ಕಾರಣಗಳಿಂದಾಗಿ ನಂತರ ಇಬ್ಬರ ನಡುವೆ ಬ್ರೇಕ್ ಅಪ್ ಆಗಿದ್ದು, ಆ ಬಳಿಕ ಶರತ್ ಯುವತಿಯ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದರು.
ಕಳೆದ ನವೆಂಬರ್ 4ರಂದು ಆರೋಪಿ ಶರತ್ ಕುಮಾರ್ ಅನಿರೀಕ್ಷಿತವಾಗಿ ಯುವತಿಯ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ತಾನು ನೀಡಿದ್ದ ಹಣವನ್ನು ವಾಪಸ್ ಕೊಡುವಂತೆ ಸಂತ್ರಸ್ತ ಯುವತಿ ಕೇಳಿದ್ದಾರೆ. ಹಣ ಕೇಳಿದ್ದಕ್ಕೆ ಸಿಟ್ಟಾದ ಆರೋಪಿ ಶರತ್, ಯುವತಿಗೆ ರಸ್ತೆಯಲ್ಲೇ ಅಶ್ಲೀಲ ಪದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಾತುಕತೆ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಆರೋಪಿ, ಯುವತಿ ಪ್ರಯಾಣಿಸುತ್ತಿದ್ದ ಕಾರಿನ ಗ್ಲಾಸ್ ಅನ್ನು ಒಡೆದುಹಾಕಿ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ, ಯುವತಿಯ ಬಳಿ ಇದ್ದ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡಿ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ‘ವಾರಣಾಸಿ’ ಸಿನಿಮಾ ಅಬ್ಬರ; 3,500 ಜೂನಿಯರ್ ಆರ್ಟಿಸ್ಟ್‌ಗಳ ಜತೆ ಮಹೇಶ್ ಬಾಬು ಮಹಾಯುದ್ಧ
ಜೀವ ಬೆದರಿಕೆಯಿಂದ ಆತಂಕಗೊಂಡ ಸಂತ್ರಸ್ತ ಯುವತಿ, ತಕ್ಷಣವೇ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತಲೆಮರೆಸಿಕೊಂಡಿರುವ ಆರೋಪಿ ಶರತ್ ಕುಮಾರ್ ಬಂಧನಕ್ಕಾಗಿ ತೀವ್ರ ತನಿಖೆ ಕೈಗೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.