ಕನ್ನಡ ಚಿತ್ರಗಳು ಡಿಜಿಟಲ್ ಮಾರುಕಟ್ಟೆಗೆ ತೆರೆದುಕೊಂಡು ಬಹಳ ಕಾಲವಾಯಿತು. ಹಾಗಿದ್ದರೂ, ಉಳಿದ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಉತ್ತಮ ಚಿತ್ರಗಳು ಒಟಿಟಿಗಳಲ್ಲಿರುವುದು ಕಡಿಮೆ. ಬಹಳಷ್ಟು ಚಿತ್ರಗಳಿದ್ದರೂ ಎಲ್ಲರೂ ಒಟಿಟಿ ಚಂದಾದಾರರಾಗಿರುವುದಿಲ್ಲ. ಹಾಗಿದ್ದಾಗ ಕನ್ನಡದ ಉತ್ತಮ ಚಲನಚಿತ್ರಗಳು ಉಚಿತವಾಗಿ ಲಭ್ಯವಿರುವ ವೇದಿಕೆ ಯಾವುದು ಎಂಬ ಪ್ರಶ್ನೆಗೆ ಮೊದಲ ಉತ್ತರ ಬರುವುದು ಯೂಟ್ಯೂಬ್. ಬಿಡುವಿನ ಸಮಯದಲ್ಲಿ ಯಾವ ಚಿತ್ರಗಳನ್ನು ನೋಡುವುದು ಎಂಬ ಗೊಂದಲವಿದೆಯೇ? ಇದನ್ನು ಓದಿ.
1. ‘ನಾನು ಅವನಲ್ಲ, ಅವಳು’: ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗ ಅದ್ಭುತ ನಟ ಸಂಚಾರಿ ವಿಜಯ್ರನ್ನು ಕಳೆದುಕೊಂಡಿತು. ತಮ್ಮ ಅಭಿನಯದಿಂದ ಪ್ರೇಕ್ಷಕರ ಹೃದಯದಲ್ಲಿ ಸದಾ ಜೀವಂತವಾಗಿರುವ ಅವರ ನಟನಾ ಕೌಶಲಕ್ಕೆ ಸಾಕ್ಷಿಯಾಗಬೇಕೆ? ಹಾಗಾದರೆ ‘ನಾನು ಅವನಲ್ಲ, ಅವಳು’ ಚಿತ್ರವನ್ನು ನೋಡಿ. ಮಂಗಳಮುಖಿಯರ ಜೀವನವನ್ನು ಇಷ್ಟು ವಿವರವಾಗಿ ಬಿಡಿಸಿಟ್ಟ ಮತ್ತೊಂದು ಚಿತ್ರ ಭಾರತದ ಚಿತ್ರರಂಗದ ಇತಿಹಾಸದಲ್ಲೇ ಬಂದಿಲ್ಲ. ಅಷ್ಟು ಅಚ್ಚುಕಟ್ಟು ಹಾಗೂ ಕಲೆಯ ಕಸುಬುಗಾರಿಕೆ ಚಿತ್ರದ ಪ್ರತೀ ದೃಶ್ಯದಲ್ಲೂ ಎದ್ದು ಕಾಣುತ್ತದೆ. ಈ ಚಿತ್ರವು ಯೂಟ್ಯೂಬ್ನಲ್ಲಿ ಮಾತ್ರ ಲಭ್ಯವಿದೆ. ಚಿತ್ರವನ್ನು ಬಿ.ಎಸ್.ಲಿಂಗದೇವರು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಹಲವು ರಾಷ್ಟ್ರಪ್ರಶಸ್ತಿಗಳು ಲಭಿಸಿದೆ.
2. ಫಣಿಯಮ್ಮ: ಎಂ.ಕೆ.ಇಂದಿರಾ ಅವರ ಕಾದಂಬರಿ ಆಧಾರಿತ ಪ್ರೇಮಾ ಕಾರಂತ ನಿರ್ದೇಶನದ ಈ ಚಿತ್ರ ಬಹಳಷ್ಟು ಕಾರಣಗಳಿಂದಾಗಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಮಲೆನಾಡಿನ ಹಿನ್ನೆಲೆಯಲ್ಲಿ ವಿಧವೆಯೊಬ್ಬಳ ಬದುಕನ್ನು ಈ ಕತೆಯು ಕಟ್ಟಿಕೊಡುತ್ತದೆ. ಕಾದಂಬರಿಯಾಗಿಯೂ, ಚಿತ್ರವಾಗಿಯೂ ಅಭಿಮಾನಿಗಳ ಮನಗೆದ್ದಿರುವ ಈ ಚಿತ್ರ ಇಲ್ಲಿ ಲಭ್ಯವಿದೆ.
3. ಬೂತಯ್ಯನ ಮಗ ಅಯ್ಯು: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆಯನ್ನಾಧರಿಸಿ ಸಿದ್ದಲಿಂಗಯ್ಯ ಅವರು ಅದೇ ಹೆಸರಿನ ಚಿತ್ರವನ್ನು ನಿರ್ದೇಶಿಸಿದ್ದರು. 1974ರಲ್ಲಿ ತೆರೆಕಂಡ ಈ ಚಿತ್ರ ಅದರ ಪ್ರಾದೇಶಿಕ ಸೊಗಡಿನಿಂದ ಮತ್ತು ಅಪ್ಪಟ ಕನ್ನಡ ನೆಲದ ಕಥಾ ಹಂದರದಿಂದ ಗಮನ ಸೆಳೆಯುತ್ತದೆ.
4. ಭೂಮಿ ತಾಯಿಯ ಚೊಚ್ಚಲಮಗ: 1998ರಲ್ಲಿ ತೆರೆಕಂಡ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮತ್ತು ರಮೇಶ್ ಅರವಿಂದ್ ಅಭಿನಯದ ಈ ಚಿತ್ರ ಪ್ರೀತಿ ಮತ್ತು ಸ್ನೇಹದ ಆಳವನ್ನು ಕುರಿತು ಚರ್ಚಿಸುತ್ತದೆ. ಈ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ್ದಾರೆ. ದ.ರಾ.ಬೇಂದ್ರೆಯವರ ಕವಿತೆಯ ಹೆಸರಿನಿಂದ ಈ ಚಿತ್ರಕ್ಕೆ ಶೀರ್ಷಿಕೆಯನ್ನು ಇಡಲಾಯಿತು.
5. ಹರಿವು: ಡಾ.ಆಶಾ ಬೆನಕಪ್ಪ ಅವರ ಅಂಕಣವೊಂದನ್ನು ಆಧರಿಸಿ ತಯಾರಾದ ಈ ಚಿತ್ರವನ್ನು ಮಂಸೋರೆ ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಸಂಚಾರಿ ವಿಜಯ್ ಇದರಲ್ಲಿ ಮುಖ್ಯಪಾತ್ರವನ್ನು ನಿಭಾಯಿಸಿದ್ದು, ಚಿತ್ರವು ತಂದೆ- ಮಗನ ಸಂಬಂಧವು ಕಾಲದ ಹರಿವಿನಲ್ಲಿ ಹೇಗೆ ವಿಘಟನೆಗೊಳ್ಳುತ್ತವೆ ಎಂಬುದನ್ನ ಚರ್ಚಿಸುತ್ತದೆ.
6. ಮಠ: ವರ್ತಮಾನದ ಧಾರ್ಮಿಕ ಸಮಸ್ಯೆಗಳನ್ನು ವಿಡಂಬನಾತ್ಮಕವಾಗಿ ಕಟ್ಟಿಕೊಡುವ ಚಿತ್ರ ಮಠ. ಇದನ್ನು ಗುರುಪ್ರಸಾದ್ ಅವರು ರಚಿಸಿ, ನಿರ್ದೇಶಿಸಿದ್ದಾರೆ. 1969ರಲ್ಲಿ ಕು.ರಾ.ಸೀತಾರಾಮ ಶಾಸ್ತ್ರಿಗಳು ರಚಿಸಿ, ಮನ್ನಾಡೇ ಹಾಡಿದ್ದ ‘ಜಯತೇ, ಜಯತೇ ಸತ್ಯಮೇವ ಜಯತೇ’ ಹಾಡನ್ನು ಚಿತ್ರದಲ್ಲಿ ಬಳಸಿಕೊಂಡು ತಾರ್ಕಿಕ ಅಂತ್ಯವನ್ನು ನೀಡಿರುವುದು ಚಿತ್ರದ ಹೈಲೈಟ್.
7. ಅನುರೂಪ: ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿರುವ ಈ ಚಿತ್ರವನ್ನು ಪಿ.ಲಂಕೇಶ್ ಅವರು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಇದಕ್ಕೆ ಸಂಗೀತವನ್ನು ನೀಡಿದ್ದು ರಾಜೀವ್ ತಾರಾನಾಥ್. ಅನಂತ್ ನಾಗ್, ಆರತಿ ಮೊದಲಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
8: ಕಥಾ ಸಂಗಮ (ಪುಟ್ಟಣ್ಣ ಕಣಗಾಲ್): 1976ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ಪ್ರಯೋಗಶೀಲ ಚಿತ್ರವಾದ ಇದು ಮೂರು ಕತೆಗಳನ್ನು ಆಧರಿಸಿ ರಚಿತವಾಗಿದೆ. ಗಿರಡ್ಡಿ ಗೋವಿಂದರಾಜರ ಹಂಗು, ವೀಣಾರ ಅತಿಥಿ ಮತ್ತು ಈಶ್ವರ ಚಂದ್ರರ ಮುನಿತಾಯಿ ಎಂಬ ಕತೆಗಳನ್ನು ಆಧರಿಸಿ ತಯಾರಾದ ಈ ಚಿತ್ರದಲ್ಲಿ ರಜನೀಕಾಂತ್, ಬಿ.ಸರೋಜಾ ದೇವಿ, ಆರತಿ ಸೇರಿದಂತೆ ಹಲವರು ನಟಿಸಿದ್ದಾರೆ.
9. ಚಿನ್ನಾರಿ ಮುತ್ತ: ಟಿ.ಎಸ್.ನಾಗಾಭರಣ ನಿರ್ದೇಶನದ, ವಿಜಯ್ ರಾಘವೇಂದ್ರ ಬಾಲ ಕಲಾವಿದರಾಗಿ ನಟಿಸಿದ ಈ ಚಿತ್ರ ಅಪಾರ ಜನಮೆಚ್ಚುಗೆ ಪಡೆದಿದೆ. ಈ ಚಿತ್ರಕ್ಕೆ ಸಂಗೀತವನ್ನು ನೀಡಿದವರು ಸಿ.ಅಶ್ವತ್ಥ್. ಅವಿನಾಶ್, ಸುಧಾರಾಣಿ, ದತ್ತಾತ್ರೇಯ ಸೇರಿದಂತೆ ಹಲವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
10. ಚೋಮನದುಡಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರ ಇದೇ ಹೆಸರಿನ ಕಾದಂಬರಿ ಆಧರಿಸಿರುವ ಈ ಚಿತ್ರಕ್ಕೆ ರಾಷ್ಟ್ರೀಯ ಸ್ವರ್ಣಕಮಲ ಪ್ರಶಸ್ತಿ ಲಭಿಸಿದೆ. ಬಿ.ವಿ.ಕಾರಂತ ಅವರು ನಿರ್ದೇಶಿಸಿರುವ ಈ ಚಿತ್ರವು ಜಾತಿ ವ್ಯವಸ್ಥೆ, ಬಡತನ ಮೊದಲಾದವುಗಳನ್ನು ಆಳವಾಗಿ ಚರ್ಚಿಸುತ್ತದೆ. ಎಂ.ವಿ.ವಾಸುದೇವ ರಾವ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
11. ಗುರು- ಶಿಷ್ಯರು: ದ್ವಾರಕೀಶ್ ನಿರ್ಮಾಣದ ಭಾರ್ಗವ ನಿರ್ದೇಶನದ ಈ ಚಿತ್ರದಲ್ಲಿ ವಿಷ್ಣುವರ್ಧನ್, ಮಂಜುಳಾ, ದ್ವಾರಕೀಶ್, ಜಯಮಾಲಿನಿ ನೊದಲಾದವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ತೆಲುಗಿನಿಂದ ರಿಮೇಕ್ ಆಗಿರುವುದಾದರೂ, ಕನ್ನಡದ ಪ್ರಾದೇಶಿಕತೆಗೆ ತಕ್ಕಂತೆ ಮಾರ್ಪಾಡು ಮಾಡಲಾಗಿದೆ. ಈ ಚಿತ್ರವು 1981ರಲ್ಲಿ ತೆರೆಕಂಡಿತ್ತು.
ಚಿತ್ರ ಈ ಲಿಂಕಿನಲ್ಲಿ ಲಭ್ಯವಿದೆ: ಗುರು- ಶಿಷ್ಯರು
12. ಕಸ್ತೂರಿ ನಿವಾಸ: ದೊರೆ- ಭಗವಾನ್ ನಿರ್ದೇಶನ ಹಾಗೂ ಡಾ.ರಾಜ್ಕುಮಾರ್ ಅಭಿನಯದಲ್ಲಿ ಮೂಡಿಬಂದ ಈ ಚಿತ್ರ ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಸಿನಿಮಾ. 1971ರಲ್ಲಿ ಬಿಡುಗಡೆಗೊಂಡ ಈ ಚಿತ್ರ ಸುಮಾರು 16 ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿತ್ತು. ಕಪ್ಪು ಬಿಳುಪಿನಲ್ಲಿ ತೆರೆ ಕಂಡಿದ್ದ ಈ ಚಿತ್ರವನ್ನು 2014ರಲ್ಲಿ ವರ್ಣಮಯಗೊಳಿಸಿ ಬಿಡುಗಡೆಗೊಳಿಸಲಾಗಿತ್ತು. ಆಗಲೂ ಚಿತ್ರಕ್ಕೆ ವೀಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಚಿತ್ರ ಈ ಲಿಂಕಿನಲ್ಲಿ ಲಭ್ಯವಿದೆ: ಕಸ್ತೂರಿ ನಿವಾಸ
13. ಗೌರಿ ಗಣೇಶ: ಫಣಿ ರಾಮಚಂದ್ರ ಅವರ ನಿರ್ದೇಶನದ ಈ ಚಿತ್ರಕ್ಕೆ ಅವರೇ ಕತೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಅನಂತ್ ನಾಗ್, ವಿನಯಾ ಪ್ರಸಾದ್, ರಮೇಶ್ ಭಟ್, ಮುಖ್ಯಮಂತ್ರಿ ಚಂದ್ರು ಮೊದಲಾದ ತಾರೆಗಳು ಇಲ್ಲಿ ತೆರೆಯನ್ನು ಹಂಚಿಕೊಂಡಿದ್ದಾರೆ. ಫಣಿ ರಾಮಚಂದ್ರ ಅವರು ಗಣೇಶ ಸೀರೀಸ್ನಲ್ಲಿ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದು, ಎಲ್ಲವೂ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಚಿತ್ರ ಈ ಲಿಂಕಿನಲ್ಲಿ ಲಭ್ಯವಿದೆ: ಗೌರಿ ಗಣೇಶ
14. ಒಂದಾನೊಂದು ಕಾಲದಲ್ಲಿ: ಗಿರೀಶ್ ಕಾರ್ನಾಡ್ ನಿರ್ದೇಶಿಸಿದ ಈ ಚಿತ್ರವು ಕನ್ನಡಕ್ಕೆ ಶಂಕರ್ ನಾಗ್ ಅವರನ್ನು ಪರಿಚಯಿಸಿತು. ಜಪಾನ್ನ ಖ್ಯಾತ ನಿರ್ದೇಶಕ ಅಕಿರ ಕುರಸೋವರ ಚಿತ್ರಗಳಿಂದ ಇದು ಪ್ರಭಾವಿತವಾಗಿದೆ ಎಂದು ಕಾರ್ನಾಡ್ ಹೇಳಿಕೊಂಡಿದ್ದರು. ಈ ಚಿತ್ರದಿಂದಲೇ ಗಾಯಕಿ ಕವಿತಾ ಕೃಷ್ಣಮೂರ್ತಿಯವರು ಚಿತ್ರರಂಗದಲ್ಲಿ ತಮ್ಮ ಗಾಯನ ಪಯಣವನ್ನು ಆರಂಭಿಸಿದ್ದರು. ಚಿತ್ರಕ್ಕೆ ಸಂಗೀತ ನೀಡಿದ್ದು ಭಾಸ್ಕರ್ ಚಂದಾವರ್ಕರ್.
ಚಿತ್ರ ಈ ಲಿಂಕಿನಲ್ಲಿ ಲಭ್ಯವಿದೆ: ಒಂದಾನೊಂದು ಕಾಲದಲ್ಲಿ
15. ದ್ವೀಪ: ದಕ್ಷಿಣ ಭಾರತದ ಖ್ಯಾತ ನಟಿ ದಿವಂಗತ ಸೌಂದರ್ಯಾ ಅವರು ನಟಿಸಿ, ನಿರ್ಮಿಸಿರುವ ಈ ಚಿತ್ರವು ರಾಷ್ಟ್ರಪ್ರಶಸ್ತಿಯನ್ನು ಪಡೆದಿದೆ. ನಾ.ಡಿಸೋಜ ಅವರ ಮೂಲ ಕತೆಯನ್ನಾಧರಿಸಿದ ಈ ಚಿತ್ರವನ್ನು ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ್ದಾರೆ. ಅಣೆಕಟ್ಟಿನ ನಿರ್ಮಾಣದಿಂದಾಗಿ ಭೂಮಿ ಕಳೆದುಕೊಳ್ಳುವ ಜನರ ಬದುಕಿನ ಕತೆಯನ್ನು ಚಿತ್ರವು ಕಟ್ಟಿಕೊಡುತ್ತದೆ.
ಚಿತ್ರ ಈ ಲಿಂಕಿನಲ್ಲಿ ಲಭ್ಯವಿದೆ: ದ್ವೀಪ
16. ವಂಶವೃಕ್ಷ: ಎಸ್.ಎಲ್.ಭೈರಪ್ಪನವರ ಇದೇ ಹೆಸರಿನ ಕಾದಂಬರಿ ಆಧಾರಿತ ಈ ಚಿತ್ರವನ್ನು ನಿರ್ದೇಶಿಸಿದವರು ಗಿರೀಶ್ ಕಾರ್ನಾಡ್ ಹಾಗೂ ಬಿ.ವಿ.ಕಾರಂತ. ಎಲ್.ವಿ.ಶಾರದಾ ಅವರು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ನಟ ವಿಷ್ಣುವರ್ಧನ್ ಅವರು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ತೆಲುಗಿಗೆ ‘ವಂಶವೃಕ್ಷಂ’ ಹೆಸರಿನಲ್ಲಿ ರಿಮೇಕ್ ಆದ ಈ ಚಿತ್ರದಲ್ಲಿ ಅನಿಲ್ ಕಪೂರ್ ನಟಿಸಿದ್ದಾರೆ.
ಚಿತ್ರ ಈ ಲಿಂಕಿನಲ್ಲಿ ಲಭ್ಯವಿದೆ: ವಂಶವೃಕ್ಷ
17. ಅಬಚೂರಿನ ಪೋಸ್ಟಾಫೀಸು: ಎನ್.ಲಕ್ಷ್ಮೀನಾರಾಯಣ್ ನಿರ್ದೇಶನದ ಈ ಚಿತ್ರವು ಪೂರ್ಣಚಂದ್ರ ತೇಜಸ್ವಿಯವರ ಇದೇ ಹೆಸರಿನ ಕೃತಿಯನ್ನಾಧರಿಸಿದ ಚಿತ್ರ. 1973ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ವಿಜಯ್ ಭಾಸ್ಕರ್ ಸಂಗೀತ ನೀಡಿದ್ದಾರೆ. ಔದ್ಯೋಗಿಕ ನೈತಿಕತೆಯ ಪ್ರಾಮುಖ್ಯತೆ ಚಿತ್ರದಲ್ಲಿ ಚರ್ಚಿತವಾಗಿದೆ.
ಚಿತ್ರ ಈ ಲಿಂಕಿನಲ್ಲಿ ಲಭ್ಯವಿದೆ: ಅಬಚೂರಿನ ಪೋಸ್ಟಾಫೀಸು
18. ಕಡ್ಡಿಪುಡಿ: ದುನಿಯಾ ಸೂರಿ ನಿರ್ದೇಶನದ ಈ ಚಿತ್ರಕ್ಕೆ ಸ್ವತಃ ಸೂರಿ ಹಾಗೂ ರಾಜೇಶ್ ನಟರಂಗ ಅವರು ಕತೆ, ಚಿತ್ರಕತೆಯನ್ನು ಬರೆದಿದ್ದಾರೆ. ಶಿವರಾಜ್ ಕುಮಾರ್, ರಾಧಿಕಾ ಪಂಡಿತ್ ಹಾಗೂ ಐಂದ್ರಿತಾ ರೇ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭೂಗತ ಜಗತ್ತನ್ನು ತ್ಯಜಿಸಿ ಸಾಮಾನ್ಯ ಬದುಕನ್ನು ಬದುಕಲು ಯತ್ನಿಸುವ ವ್ಯಕ್ತಿಯ ಕಥಾನಕವನ್ನು ಚಿತ್ರವು ಹೊಂದಿದೆ.
ಚಿತ್ರ ಈ ಲಿಂಕಿನಲ್ಲಿ ಲಭ್ಯವಿದೆ: ಕಡ್ಡಿಪುಡಿ
19. ಯಜಮಾನ: ಆರ್.ಶೇಷಾದ್ರಿ ಹಾಗೂ ರಾಧ ಭಾರತಿ ನಿರ್ದೇಶನದ ಈ ಚಿತ್ರವು ಕುಟುಂಬದ ಮೌಲ್ಯಗಳನ್ನು ಚರ್ಚಿಸುವ ಚಿತ್ರ. ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿದ್ದು ಅವರೊಂದಿಗೆ ಪ್ರೇಮಾ, ಶಶಿಕುಮಾರ್, ಅಭಿಜಿತ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ಹಾಡುಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.
ಚಿತ್ರ ಈ ಲಿಂಕಿನಲ್ಲಿ ಲಭ್ಯವಿದೆ: ಯಜಮಾನ
20. ಒಂದು ಮೊಟ್ಟೆಯ ಕತೆ: ಬೋಳು ತಲೆಯನ್ನು ಹೊಂದಿರುವವರ ಮಸ್ಯೆಗಳನ್ನು ಲಘು ಹಾಸ್ಯದ ಮುಖಾಂತರ ಬಿಡಿಸಿಡುವ ಈ ಚಿತ್ರವನ್ನು ರಾಜ್.ಬಿ.ಶೆಟ್ಟಿ ನಿರ್ದೇಶಿಸಿದ್ದಾರೆ. ಸ್ವತಃ ರಾಜ್.ಬಿ.ಶೆಟ್ಟಿಯವರೇ ಚಿತ್ರದಲ್ಲಿ ನಟಿಸಿದ್ದು, ಚಿತ್ರಕ್ಕೆ ಪೂರಕವಾಗಿ ಹಿನ್ನೆಲೆಯಲ್ಲಿ ಡಾ.ರಾಜ್ಕುಮಾರ್ ಅವರ ಹಾಡುಗಳನ್ನು ಬಳಸಿರುವುದು ವಿಶೇಷ.
ಚಿತ್ರ ಈ ಲಿಂಕಿನಲ್ಲಿ ಲಭ್ಯವಿದೆ: ಒಂದು ಮೊಟ್ಟೆಯ ಕತೆ
(ಸೂಚನೆ: ಈ ಪಟ್ಟಿಯಲ್ಲಿ ಯೂಟ್ಯೂಬ್ನಲ್ಲಿ ಅಧಿಕೃತವಾಗಿ ಲಭ್ಯವಿರುವ ಚಿತ್ರಗಳ ಪಟ್ಟಿ ಮತ್ತು ಲಿಂಕುಗಳನ್ನೇ ಕೊಡಲು ಪ್ರಯತ್ನಿಸಲಾಗಿದೆ ಹಾಗೂ ಸಾರ್ವಕಾಲಿಕ ಎನ್ನಬಹುದಾದ, ಮತ್ತೆ ಮತ್ತೆ ನೋಡಬಹುದಾದ ಆಯ್ದ ಇಪ್ಪತ್ತು ಚಿತ್ರಗಳನ್ನು ನೀಡಲಾಗಿದೆ. ಯಾವುದೇ ಅನುಕ್ರಮಣಿಕೆಯಲ್ಲಿ ಈ ಪಟ್ಟಿಯನ್ನು ನೀಡಲಾಗಿಲ್ಲ.)
(Best free Kannada Movies available in Youtube)