ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಭಜರಂಗಿ 2’ ಇಂದು ಬಿಡುಗಡೆಯಾಗಿದೆ. ಮುಂಜಾನೆ 5 ಗಂಟೆಗೆ ಫ್ಯಾನ್ಸ್ ಶೋ ನಡೆದಿದ್ದು, ಚಿತ್ರಮಂದಿರಗಳು ಹೌಸ್ಫುಲ್ ಆಗಿದ್ದವು. ಚಿತ್ರದ ಮೊದಲಾರ್ಧ ಸಖತ್ ಸರ್ಪ್ರೈಸಿಂಗ್ ಆಗಿದೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು. ಚಿತ್ರ ನೋಡಿ ಹೊರಬಂದ ಅಭಿಮಾನಿಗಳು ಸಿನಿಮಾ ಮನರಂಜನಾತ್ಮಕವಾಗಿದೆ ಎಂದಿದ್ದಾರೆ. ಚಿತ್ರಕ್ಕೆ ಒಟ್ಟಾರೆ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಈ ನಡುವೆ ಅಭಿಮಾನಿಗಳು ಸಂಭ್ರಮದಿಂದ ನೆಚ್ಚಿನ ನಟನ ಚಿತ್ರವನ್ನು ಸ್ವಾಗತಿದ್ದಾರೆ. ಜಗತ್ತಿನಾದ್ಯಂತ 1,000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ‘ಭಜರಂಗಿ 2’ ಬಿಡುಗಡೆಯ ಸಂಭ್ರಮದ ಸಂಪೂರ್ಣ ವಿವರ ಇಲ್ಲಿ ಲಭ್ಯವಿದೆ.
ಚಿತ್ರವನ್ನು ‘ಜಯಣ್ಣ ಫಿಲ್ಮ್ಸ್’ ಬ್ಯಾನರ್ನಲ್ಲಿ ನಿರ್ಮಿಸಲಾಗಿದ್ದು, ಎ.ಹರ್ಷ ನಿರ್ದೇಶಿಸಿದ್ದಾರೆ. ಶಿವರಾಜ್ ಕುಮಾರ್ ಹಾಗೂ ಹರ್ಷ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ ಇದಾಗಿದೆ. ಹಿರಿಯ ನಟಿ ಶ್ರುತಿ, ಭಜರಂಗಿ ಲೋಕಿ, ಭಾವನಾ ಮೆನನ್, ಶಿವರಾಜ್ ಕೆ.ಆರ್. ಪೇಟೆ, ಚೆಲುವ ರಾಜು ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.
ಫ್ಯಾನ್ಸ್ ಶೋ ನೋಡಿದ ವೀಕ್ಷಕರು, ಚಿತ್ರದ ವಿಎಫ್ಎಕ್ಸ್ ಹಾಗೂ ಕತೆಯನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಚಿತ್ರ ನೂರು ದಿನಗಳು ಪೂರೈಸೋದು ಪಕ್ಕಾ ಎಂದು ಅಭಿಮಾನಿಗಳು ಉದ್ಗರಿಸಿದ್ಧಾರೆ. ಹಲವು ಅಭಿಮಾನಿಗಳು ಇದು ಹಾಲಿವುಡ್ ಮಾದರಿಯ ಚಿತ್ರ ಎಂದು ಸಂತಸಗೊಂಡಿದ್ದಾರೆ. ಒಟ್ಟಿನಲ್ಲಿ ಇದೊಂದು ಪಕ್ಕಾ ಅಭಿಮಾನಿಗಳಿಗೆ ಹೇಳಿಮಾಡಿಸಿದ ಚಿತ್ರ ಎಂದು ಮೊದಲ ಶೋ ನೋಡಿದ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಗದಗದಲ್ಲೂ ಭಜರಂಗಿ 2 ಬಿಡುಗಡೆ ಸಂಭ್ರಮ ಕಳೆಗಟ್ಟಿದೆ. ನಗರದ ವೆಂಕಟೇಶ ಚಿತ್ರಮಂದಿರಲ್ಲಿ ಶಿವರಾಜ್ ಕುಮಾರ್ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ, ಲಿಂಬೆ ಹಣ್ಣಿನ ಹಾರ ಹಾಕಿ, ಹೂವು ಹಾಕಿ ಸಂಭ್ರಮಾಚರಣೆ ಮಾಡಲಾಗಿದೆ. ವೆಂಕಟೇಶ ಚಿತ್ರಮಂದಿರದಲ್ಲಿ ಮೊದಲ ಶೋ 12ಕ್ಕೆ ಆರಂಭವಾಗಿದೆ.
ಕೊಪ್ಪಳದ ಲಕ್ಷ್ಮಿ ಚಿತ್ರಮಂದಿರದಲ್ಲಿಯೂ ಶಿವಣ್ಣ ಅಭಿಮಾನಿಗಳಿಂದ ಚಿತ್ರಕ್ಕೆ ಭರ್ಜರಿ ಬೆಂಬಲ ವ್ಯಕ್ತವಾಗಿದ್ದು, ಅಭಿಮಾನಿಗಳಿಂದ ಕಟೌಟ್ಗೆ ಹಾಲಿನ ಅಭಿಷೇಕ ನಡೆಸಲಾಗಿದೆ. ಟಿಕೇಟ್ ಪಡೆಯಲು ನೂಕು ನುಗ್ಗಲು ಉಂಟಾಗಿದ್ದು, ಅಭಿಮಾನಿಗಳು 11 ಗಂಟೆಯ ಶೋ ವೀಕ್ಷಿಸುತ್ತಿದ್ದಾರೆ.
ಹಾವೇರಿ ನಗರದ ಮಾಗಾವಿ ಚಿತ್ರಮಂದಿರದಲ್ಲಿ ಭಜರಂಗಿ 2 ಉತ್ತಮ ಆರಂಭ ಕಂಡಿದೆ. ಇವತ್ತು ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಬಲೂನ್ಗಳನ್ನ ಕಟ್ಟಿ ಚಿತ್ರಮಂದಿರಕ್ಕೆ ಅಲಂಕಾರ ಮಾಡಲಾಗಿತ್ತು. ಬೃಹತ್ ಆಕಾರದ ಶಿವರಾಜಕುಮಾರ್ ಕಟೌಟ್ ನಿಲ್ಲಿಸಿ, ಅಭಿಮಾನಿಗಳು ಮಾಲಾರ್ಪಣೆ ಮಾಡಿದ್ದಾರೆ. ಸರದಿಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಅಭಿಮಾನಿಗಳು ಚಿತ್ರ ವೀಕ್ಷಣೆಗೆ ತೆರಳಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಭವಾನಿ ಚಿತ್ರ ಮಂದಿರದಲ್ಲಿ ಸಿನಿಮಾದ ಟಿಕೆಟ್ ಪಡೆಯಲು ಜನ ಮುಗಿಬಿದ್ದಿದ್ದಾರೆ. ಒಂದೂವರೆ ವರ್ಷದ ಬಳಿಕ ಶಿವರಾಜ್ ಕುಮಾರ್ ಚಿತ್ರ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.
ಶಿವಮೊಗ್ಗದ ಲಕ್ಷ್ಮಿ ಚಿತ್ರಮಂದಿರದಲ್ಲಿ ಭಜರಂಗಿ 2 ಚಿತ್ರವನ್ನು ಅಭಿಮಾನಿಗಳು ಪೋಸ್ಟರ್ಗೆ ಹಾಲಿನ ಅಭಿಷೇಕ ಹಾಗೂ ಪಟಾಕಿ ಸಿಡಿಸಿ ಸ್ವಾಗತಿಸಿದ್ದಾರೆ. ಮೊದಲ ಶೋಗೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೊಡ್ಡ ಪರದೆ ಮುಂದೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.
ಹುಬ್ಬಳ್ಳಿ: ಬಹುನಿರೀಕ್ಷಿತ ಭಜರಂಗಿ 2 ಚಲನಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಶಿವರಾಜಕುಮಾರ್ ಅಭಿಮಾನಿಗಳಿಂದ ವಿಭಿನ್ನವಾಗಿ ಚಲನಚಿತ್ರಕ್ಕೆ ಸ್ವಾಗತ ಕೋರಲಾಗಿದೆ. ಜೈರಾಜವಂಶ ಅಭಿಮಾನಿಗಳಿಂದ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ಸಾವಿರಾರು ರೂಪಾಯಿ ಮೌಲ್ಯದ ಪುಸ್ತಕ ವಿತರಣೆ ಮಾಡಲಾಗಿದೆ. ಕನಸು ಎಂಬ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರಕ್ಕೆ ಪುಸ್ತಕಗಳನ್ನು ವಿತರಿಸಲಾಗಿದ್ದು, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ದೃಷ್ಠಿಯಿಂದ ವಿಭಿನ್ನ ಪ್ರಯತ್ನ ನಡೆಸಲಾಗಿದೆ. ಇದೀಗ ಈ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ.
ಚಿಕ್ಕಬಳ್ಳಾಪುರ: ವಾಣಿ ಚಿತ್ರಮಂದಿರದಲ್ಲಿ ‘ಭಜರಂಗಿ 2’ ಚಿತ್ರ ವೀಕ್ಷಣೆಯ ವೇಳೆ ವೀಕ್ಷಕರು ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡದೆ ಚಿತ್ರ ವೀಕ್ಷಣೆಗೆ ಆಗಮಿಸಿದ್ದಾರೆ. ಕೊರೊನಾ ನಿಯಮ ಪಾಲಿಸದ ಪ್ರೇಕ್ಷಕರ ನಡೆ ಆತಂಕಕ್ಕೆ ಕಾರಣವಾಗಿದೆ.
‘ಭಜರಂಗಿ 2’ ಸಿನಿಮಾದ ಬಗ್ಗೆ ಸ್ಯಾಂಡಲ್ವುಡ್ ನಿರ್ದೇಶಕ ಬಹದ್ದೂರ್ ಚೇತನ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ಸಾಕಷ್ಟು ಚರ್ಚೆಯಾಗುತ್ತಿರುವ ‘ಜೇಮ್ಸ್’ ಚಿತ್ರದ ಟೀಸರ್ ಕುರಿತು ಮಾಹಿತಿ ಹೊರಹಾಕಿದ್ದಾರೆ. ಕ್ರಿಸ್ಮಸ್ನಲ್ಲಿ ಖಂಡಿತವಾಗಿ ಟೀಸರ್ ಬಿಡುಗಡೆ ಆಗಲಿದೆ ಎಂದು ಅವರು ಹೇಳಿದ್ದಾರೆ.
ಮೈಸೂರು:ಇಂದು ರಾಜ್ಯಾದ್ಯಂತ ಭಜರಂಗಿ2 ಚಿತ್ರ ರಿಲೀಸ್ ಹಿನ್ನೆಲೆಯಲ್ಲಿ ಮೈಸೂರಿನ ವುಡ್ ಲ್ಯಾಂಡ್ ಚಿತ್ರಮಂದಿರದಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ. ಡೊಳ್ಳಿನ ಸದ್ದಿಗೆ ಕುಣಿದು ಕುಪ್ಪಳಿಸಿದ ಅಭಿಮಾನಿಗಳು, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಕಟೌಟ್ ನಿರ್ಮಿಸಿ ಹೂವಿನ ಹಾಕಿದ್ದಾರೆ. ಪಟಾಕಿ ಸಿಡಿಸಿ, ಕಟೌಟ್ ಗೆ ಹಾಲಿನ ಅಭಿಷೇಕ ಹಾಗೂ ಈಡುಗಾಯಿ ಒಡೆದು ಹಬ್ಬದ ರೀತಿಯಲ್ಲಿ ಬಿಡುಗಡೆಯನ್ನು ಸಂಭ್ರಮಿಸುತ್ತಿದ್ದಾರೆ.
ಬೆಂಗಳೂರು: ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ‘ಭಜರಂಗಿ 2’ ಶತದಿನೋತ್ಸವ ಆಚರಿಸಲೆಂದು ಮಾಗಡಿ ರಸ್ತೆಯ ಎಂಸಿ ಬಡವಾಣೆಯ ಮುತ್ತಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ದೇವಸ್ಥಾನಕ್ಕೆ ಶಿವಣ್ಣ ಆಗಮಿಸಿದ್ದು, ತಮಟೆ ಮುಖಾಂತರ ಗ್ರ್ಯಾಂಡ್ ವೆಲ್ ಕಂ ಮಾಡಲಾಗಿದೆ.
ಅನುಪಮಾ ಥಿಯೇಟರ್ ಮುಂದೆ ಭಜರಂಗಿ 2 ಸಂಭ್ರಮ ಮನೆಮಾಡಿದ್ದು, ಸಂಭ್ರಮದಿಂದ ಚಿತ್ರವನ್ನು ಸ್ವಾಗತಿಸಲು ಅಭಿಮಾನಿಗಳು ತಯಾರಿ ನಡೆಸಿದ್ದಾರೆ. ಈಗಾಗಲೇ ಎರಡು ಷೋ ಹೌಸ್ ಫುಲ್ ಬೋರ್ಡ್ ಹಾಕಲಾಗಿದೆ. ಶಿವರಾಜ್ ಕುಮಾರ್ ಕಟೌಟ್ ಗೆ ದೊಡ್ಡದಾದ ಹೂವಿನ ಹಾರ ಹಾಕಿ ಫ್ಯಾನ್ಸ್ ಸಂಭ್ರಮಿಸಿದ್ಧಾರೆ. ಆದರೆ ಚಿತ್ರಕ್ಕೆ ಟಿಕೇಟ್ ಕೊಡ್ತಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಬ್ಲಾಕ್ ಟಿಕೇಟ್ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. 400 ರೂ ಹೊರಗಡೆ ಟಿಕೇಟ್ ಮಾರಾಟ ಆಗುತ್ತಿದೆ. ಆದರೆ ಚಿತ್ರಮಂದಿರದ ಎದುರು ಹೌಸ್ಫುಲ್ ಬೋರ್ಡ್ ಇದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಂಡ್ಯ, ತುಮಕೂರುನಿಂದ ಅಭಿಮಾನಿಗಳು ಆಗಮಿಸಿದ್ದು, ಮುಂಜಾನೆ 6 ಗಂಟೆಯಿಂದ ಟಿಕೇಟ್ಗಾಗಿ ಕಾಯುತ್ತಿದ್ದಾರೆ.
ಚಿಕ್ಕಬಳ್ಳಾಪುರ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಭಜರಂಗಿ2 ಚಲನಚಿತ್ರ ಇಂದು ರಾಜ್ಯದ್ಯಂತ ತೆರೆಕಾಣಲಿದ್ದು ಚಿಕ್ಕಬಳ್ಳಾಪುರ ನಗರದ ವಾಣಿ ಚಿತ್ರ ಮಂದಿರಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರದರ್ಶನ ಆರಂಭವಾಗಲಿದೆ. ಇದರಿಂದ ಸಂತಸಗೊಂಡಿರುವ ಶಿವರಾಜ್ ಕುಮಾರ್ ಅಭಿಮಾನಿಗಳು, ತಮ್ಮ ಮೆಚ್ಚಿನ ನಟನ ದೊಡ್ಡ ದೊಡ್ಟ ಕಟೌಟು ನಿರ್ಮಿಸಿ ದೊಡ್ಡ ದೊಡ್ಡ ಸುಗಂಧರಾಜ ಹೂವಿನ ಹಾರ ತುರಾಯಿ ಹಾಕಿ ಚಲನಚಿತ್ರ ಮಂದಿರಕ್ಕೆ ಅಲಂಕರಿಸಿ ಚಿತ್ರ ವೀಕ್ಷಿಸಲು ಕಾದು ಕುಳಿತಿದ್ದಾರೆ.
ಚಿಕ್ಕಬಳ್ಳಾಪುರದ ವಾಣಿ ಚಿತ್ರ ಮಂದಿರ, ಶಿಡ್ಲಘಟ್ಟದ ಮಯೂರ ಚಿತ್ರಮಂದಿರ, ಚಿಂತಾಮಣಿಯ ಅಂಜನಿ ಚಿತ್ರಮಂದಿರ, ಗೌರಿಬಿದನೂರಿನ ಅಭಿಲಾಷ್ ಚಿತ್ರಮಂದಿರದಲ್ಲಿ ‘ಭಜರಂಗಿ 2’ ಪ್ರದರ್ಶನ ಕಾಣಲಿದೆ.
ಚಾಮರಾಜನಗರದ ಸಿಂಹ ಮೂವೀ ಪ್ಯಾರಡೈಸ್ ನಲ್ಲಿ ಭಜರಂಗಿ ಚಿತ್ರ ಬಿಡುಗಡೆಗೊಂಡಿದ್ದು, ಮೊದಲ ಶೋ ವೀಕ್ಷಿಸಿ ಹೊರಬಂದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ಧಾರೆ. ಸಿನಿಮಾ ನೋಡಿ ಹೊರ ಬಂದವರಿಗೆ ತಿಂಡಿ ವಿತರಣೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
ಕೊಪ್ಪಳ ಜಿಲ್ಲೆ ಗಂಗಾವತಿಯ ಶಿವ ಚಿತ್ರಮಂದಿರದಲ್ಲಿ ಚಿತ್ರದ ಟಿಕೆಟ್ ಪಡೆಯಲು ನೂಕು ನುಗ್ಗಲು ಉಂಟಾಗಿದೆ. ಮುಗಿಬಿದ್ದು ಟಿಕೇಟ್ ಖರೀದಿಸಿದ ಅಭಿಮಾನಿಗಳು ಮೊದಲ ಶೋಗೆ ತೆರಳಿದ್ದಾರೆ.
ಗಾಂಧೀನಗರ ಭಜರಂಗಿ 2 ಚಿತ್ರದ ಬಿಡುಗಡೆಗೆ ಹಬ್ಬದ ರೀತಿಯಲ್ಲಿ ಸಿಂಗಾರಗೊಂಡಿದೆ. ಅನುಪಮಾ ಚಿತ್ರಮಂದಿರದಲ್ಲಿ ಚಿತ್ರತಣಡ ಭರ್ಜರಿಯಾಗಿ ಸಿದ್ದತೆ ಮಾಡಿಕೊಳ್ಳುತ್ತಿದೆ. ಬ್ಯಾನರ್ ಬಂಟ್ಟಿಂಗ್ಸ್ ಕಟ್ಟಿ ಚಿತ್ರಮಂದಿರವನ್ನು ಸಿಂಗಾರ ಮಾಡಲಾಗುತ್ತಿದೆ. 80 ಅಡಿ ಕಟೌಟ್ ನಲ್ಲಿ ಡಾ. ಶಿವರಾಜ್ ಕುಮಾರ್ ಮಿಂಚುತ್ತಿದ್ದಾರೆ. ಚಿತ್ರ ನೋಡಲು ಥಿಯೇಟರ್ ಬಳಿ ಅಭಿಮಾನಿಗಳು ಕಾಯುತ್ತಿದ್ದು, ಬೆಳಿಗ್ಗೆ 10.15 ಕ್ಕೆ ಮೊದಲ ಷೋ ಆರಂಭವಾಗಲಿದೆ. ಮೊದಲು ಮತ್ತು ಎರಡನೇ ಷೋಗೆ ಈಗಾಗಲೇ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ಇಂದು ನಾಲ್ಕು ಪ್ರದರ್ಶನವಿದೆ.
ಮಂಡ್ಯ: ಮಂಡ್ಯದ ಸಂಜಯ ಚಿತ್ರಮಂದಿರದಲ್ಲಿ ಚಿತ್ರದ ಮೊದಲ ಶೋ ಬೆಳಗ್ಗೆ 7.30 ಕ್ಕೆ ಆರಂಭವಾಗಿದೆ. ಮೊದಲ ಶೋ ಹೌಸ್ ಫುಲ್ ಆಗಿದ್ದು, ಅಭಿಮಾನಿಗಳು ತಮ್ಮನೆಚ್ಚಿನ ನಟನ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ.
ನಟ ಶಿವರಾಜ್‌ಕುಮಾರ್ ಭಜರಂಗಿ 2 ಚಿತ್ರ ರಿಲೀಸ್ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ನಟ ಶಿವರಾಜ್‌ಕುಮಾರ್ ಭೇಟಿ ನೀಡುತ್ತಿದ್ದಾರೆ. ಸಿದ್ದೇಶ್ವರ, ಶ್ರೀನಿವಾಸ ಚಿತ್ರಮಂದಿರಕ್ಕೆ ಶಿವಣ್ಣ ಭೇಟಿ ನೀಡಿದ್ದು, ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತ ಕೋರಿದ್ದಾರೆ.
ಕೋಟೆನಾಡಿನಲ್ಲಿ ಭಜರಂಗಿ2 ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದುರ್ಗದ ಪ್ರಸನ್ನ ಥೇಟರ್ ಬಳಿ ಅಭಿಮಾನಿಗಳ ಜಮಾಯಿಸಿದ್ದು, ಟಿಕೆಟ್ ಪಡೆಯಲು ಕಾದು ನಿಂತಿದ್ದಾರೆ. ಶಿವಣ್ಣ ಕಟೌಟ್ಗೆ ಹಾಲಿನ ಅಭಿಷೇಕ, ಪುಷ್ಪವೃಷ್ಠಿ ನಡೆಸಿ, ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮ ಆಚರಿಸಿದ್ದಾರೆ.
ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರಲ್ಲಿ 5 ಗಂಟೆಗೆ ಫ್ಯಾನ್ಸ್ ಶೋ ಶುರುವಾಗಿದ್ದು, ಸಿನಿಮಾ ನೋಡಲು ಚಿತ್ರದುರ್ಗ, ಕನಕಪುರದಿಂದ ಅಭಿಮಾನಿಗಳು ಆಗಮಿಸಿದ್ದಾರೆ. ಪಟಾಕಿ ಸಿಡಿಸಿ , ಕುಂಬಳಕಾಯಿ ಹೊಡೆದು ಹಾಲಿನ ಅಭಿಷೇಕ ಮಾಡಿ ಫ್ಯಾನ್ಸ್ ಸಂಭ್ರಮಾಚರಣೆ ನಡೆಸಿದ್ದಾರೆ. ಬಿಗ್ ಸ್ಕ್ರಿನ್ ಮೇಲೆ ಒಂದೂವರೆ ವರ್ಷದ ಬಳಿಕ ಶಿವಣ್ಣನ ದರ್ಶನ ಕಂಡು ಫ್ಯಾನ್ಸ್ ಪುಳಕಗೊಂಡಿದ್ದು, ನಮಗೆ ಇವತ್ತೇ ದೀಪಾವಳಿ ಎಂದು ಸಂಭ್ರಮಾಚರಣೆ ನಡೆಸಿದ್ದಾರೆ.
ದಾವಣಗೆರೆ ನಗರದ ವಸಂತಾ ಚಿತ್ರಮಂದಿರಲ್ಲಿ ಬೆಳಗ್ಗೆ 6ರಿಂದಲೇ ಭಜರಂಗಿ 2 ಪ್ರದರ್ಶನ ಆರಂಭವಾಗಿದೆ. ಚಿತ್ರ ನೋಡಲು ಅಭಿಮಾನಿಗಳು ಗುಂಪು ಗುಂಪಾಗಿ ಆಗಮಿಸಿದ್ದಾರೆ.
ಬೆಳಿಗ್ಗೆ ಫ್ಯಾನ್ಸ್ ಶೋಗೆ ಶಿವರಾಜ್ ಕುಮಾರ್, ವಸಿಷ್ಠ ಸಿಂಹ ಆಗಮಿಸೋ ಸಾಧ್ಯತೆ ಇದೆ. ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಚಿತ್ರತಂಡ ಸಂಭ್ರಮಿಸಲಿದೆ. ಗಾಂಧಿನಗರದ ಅನುಪಮ ಚಿತ್ರಂಮದಿರದಲ್ಲಿ 10 ಘಂಟೆಗೆ ಶೋ ಆರಂಭ ಆಗಲಿದೆ.
ಹಲವು ಚಿತ್ರಮಂದಿರಗಳಲ್ಲಿ ನಟ ಶಿವರಾಜ್‌ಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾದ ಫ್ಯಾನ್ಸ್ ಶೋ ಮುಂಜಾನೆ 5 ಗಂಟೆಯಿಂದಲೇ ಆರಂಭವಾಗಿದೆ. ಥಿಯೇಟರ್‌ಗಳ ಮುಂದೆ ಇಂದೇ ದೀಪಾವಳಿ ಎನ್ನುವಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಭಜರಂಗಿ 2’ ರಿಲೀಸ್ ಆಗಿದೆ.
Published On - 6:42 am, Fri, 29 October 21