ಚಂದನವನಕ್ಕೆ ಕಾಲಿಡುವ ಹೊಸ ಹೀರೋಗಳ ಸಾಲಿಗೆ ಭಾರ್ಗವ್ ಕೃಷ್ಣ ಅವರು ಸೇರ್ಪಡೆ ಆಗಿದ್ದಾರೆ. ‘ಓಂ ಶಿವಂ’ ಸಿನಿಮಾದಲ್ಲಿ ಅವರು ಹೀರೋ ಆಗಿದ್ದಾರೆ. ಇದು ಅವರು ನಟಿಸಿರುವ ಮೊದಲ ಸಿನಿಮಾ. ಇತ್ತೀಚೆಗೆ ‘ಓಂ ಶಿವಂ’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್ ಮಾಡಲಾಯಿತು. ಭಾರ್ಗವ್ ಕೃಷ್ಣ ಅವರ ಕುಟುಂಬದ ಹಿರಿಯರು ಈ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷ. ಅಜ್ಜಿ-ತಾತ ಬಂದು ಮೊಮ್ಮಗನ ಮೊದಲ ಸಿನಿಮಾಗೆ ವಿಶ್ ಮಾಡಿದ್ದಾರೆ. ಭಾರ್ಗವ್ ಕೃಷ್ಣ ಅವರ ತಂದೆ ಕೃಷ್ಣ ಕೆ.ಎನ್. ಅವರೇ ‘ಓಂ ಶಿವಂ’ ಸಿನಿಮಾವನ್ನು ನಿರ್ಮಿಸಿದ್ದಾರೆ.
ಹಾಡಿನ ಬಿಡುಗಡೆ ನಂತರ ಸಿನಿಮಾ ಬಗ್ಗೆ ನಿರ್ಮಾಪಕ ಕೃಷ್ಣ ಮಾತಾಡಿದರು. ‘ಆಲ್ವಿನ್ ಅವರು ಉತ್ತಮವಾದ ಕಥೆ ರೆಡಿ ಮಾಡಿಕೊಂಡು ಬಂದು ವಿವರಿಸಿದರು. ಕಥೆ ಚೆನ್ನಾಗಿದ್ದರಿಂದ ಹೀರೋನ ಹುಡುಕಿ, ಸಿನಿಮಾದ ಕೆಲಸ ಶುರು ಮಾಡೋಣ ಅಂತ ಹೇಳಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ ಆಲ್ವಿನ್ ಅವರು, ಭಾರ್ಗವ್ ಈ ಕಥೆಗೆ ಸರಿ ಹೊಂದುತ್ತಾರೆ ಅವರೇ ನಮ್ಮ ಸಿನಿಮಾದ ಹೀರೋ ಅಂದರು. ಈಗ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಮುಂದಿನ ತಿಂಗಳಲ್ಲಿ ರಿಲೀಸ್ ಮಾಡುವ ಗುರಿ ಇದೆ’ ಎಂದು ಕೃಷ್ಣ ಹೇಳಿದ್ದಾರೆ.
ಈ ಮೊದಲು ‘ರಾಜ್ ಬಹದ್ದೂರ್’ ಸಿನಿಮಾ ಮಾಡಿದ್ದ ಅಲ್ವಿನ್ ಅವರು ಈಗ ‘ಓಂ ಶಿವಂ’ ಚಿತ್ರಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದು ಅವರ ಎರಡನೇ ಸಿನಿಮಾ. ‘ಇದು ಲವ್ ಜಾನರ್ನ ಸಿನಮಾ. ಆದರೆ ಇದರಲ್ಲಿ ಲವ್ ಮಾತ್ರವಲ್ಲದೇ ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳೂ ಇವೆ. ನಮ್ಮ ಸಿನಿಮಾಗೆ 21 ವಯಸ್ಸಿನ ನಾಯಕ ಬೇಕಿತ್ತು. ಭಾರ್ಗವ್ ಅವರಿಗೂ ಅದೇ ವಯಸ್ಸು. ಆದ್ದರಿಂದ ಅವರನ್ನೇ ಈ ಸಿನಿಮಾದ ಹೀರೋ ಆಗಿ ಆಯ್ಕೆ ಮಾಡಿದೆವು’ ಎಂದಿದ್ದಾರೆ ನಿರ್ದೇಶಕರು.
ಇದನ್ನೂ ಓದಿ: ‘ಫಾರೆಸ್ಟ್’ ಹೊಕ್ಕ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು; ‘ಬ್ರಹ್ಮಚಾರಿ’ಯ ಹೊಸ ಸಿನಿಮಾ
‘ಚೊಚ್ಚಲ ಪ್ರಯತ್ನದಲ್ಲೇ ಭಾರ್ಗವ್ ಅವರು ಉತ್ತಮವಾಗಿ ನಟಿಸಿದ್ದಾರೆ. 4 ಹಾಡುಗಳು, ಅದ್ದೂರಿ ಸಾಹಸ ದೃಶ್ಯಗಳು ನಮ್ಮ ಸಿನಿಮಾದಲ್ಲಿವೆ’ ಎಂದು ಅಲ್ವಿನ್ ಹೇಳಿದ್ದಾರೆ. ‘ಮೊದಲು ನನ್ನ ತಂದೆಗೆ ನಾನು ಧನ್ಯವಾದ ಹೇಳುತ್ತೇನೆ. ಮೊದಲ ಸಿನಿಮಾ ಆದ್ದರಿಂದ ಸಾಕಷ್ಟು ತಯಾರಿಯೊಂದಿಗೆ ಬಂದಿದ್ದೇನೆ’ ಎಂದಿದ್ದಾರೆ ಭಾರ್ಗವ್ ಕೃಷ್ಣ. ಅವರಿಗೆ ಜೋಡಿಯಾಗಿ ವಿರಾಣಿಕಾ ಶೆಟ್ಟಿ ನಟಿಸಿದ್ದಾರೆ. ವಿಜಯ್ ಯಾರ್ಡ್ಲೆ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವೀರೇಶ್ ಅವರ ಛಾಯಾಗ್ರಾಹಣ, ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.