
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನಡೆಯುವ ವೇಳೆ ವಿಚಿತ್ರ ಘಟನೆಯೊಂದು ನಡೆದಿದ್ದು, ಸ್ಪರ್ಧಿ ಗಾನವಿ ಅವರ ವರ್ತನೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಟಾಸ್ಕ್ ಆಡುವ ಸಂದರ್ಭದಲ್ಲಿ ಆದ ಸಣ್ಣ ಎಡವಟ್ಟಿನಿಂದ ಪೆಟ್ಟು ತಿಂದವರಂತೆ ಕಂಡುಬಂದ ಗಾನವಿ, ಏಕಾಏಕಿ ಪ್ರಜ್ಞೆ ತಪ್ಪಿ ಕೋಮಾಕ್ಕೆ ಹೋದವರಂತೆ ವರ್ತಿಸಿದ್ದಾರೆ. ಕೆಲವು ಹೊತ್ತು ತಮಗೆ ಎಚ್ಚರವೇ ಇರಲಿಲ್ಲ ಎಂಬಂತೆ ಮೌನವಾಗಿದ್ದ ಅವರು, ಮನೆಯವರಲ್ಲಿ ಆತಂಕ ಮೂಡಿಸುವಂತೆ ನಡೆದುಕೊಂಡಿದ್ದಾರೆ.
ಸ್ವಲ್ಪ ಸಮಯದ ನಂತರ ಎಚ್ಚರಗೊಂಡವರಂತೆ ವರ್ತಿಸಿದ ಗಾನವಿ, ‘ನಾನೆಲ್ಲಿದ್ದೇನೆ? ನನಗೆ ಏನಾಯ್ತು? ನಾನು ಒಳಗಿಂದ ಹೊರಗೆ ಹೇಗೆ ಬಂದೆ?’ ಎಂದೆಲ್ಲ ಪ್ರಶ್ನಿಸಿದ್ದಾರೆ. ತಮಗೆ ಏನೂ ನೆನಪಿಲ್ಲ ಎಂಬಂತೆ ಹಾಗೂ ಎಲ್ಲವನ್ನೂ ಮರೆತು ಹೋಯಿತು ಎಂಬ ರೀತಿಯಲ್ಲಿ ಅವರು ನೀಡಿದ ಪ್ರತಿಕ್ರಿಯೆ ನೋಡಿ ಸಹಸ್ಪರ್ಧಿಗಳು ಕೂಡ ಒಂದು ಕ್ಷಣ ಗೊಂದಲಕ್ಕೀಡಾಗಿದ್ದಾರೆ.
ಆದರೆ ಗಾನವಿ ಅವರ ಈ ಅಚ್ಚರಿಯ ವರ್ತನೆ ಕೇವಲ ಬಿಗ್ ಬಾಸ್ ಮನೆಯ ಸದಸ್ಯರಿಗೆ ಮಾತ್ರವಲ್ಲದೆ, ಹೊರಗಿನ ವೀಕ್ಷಕರಿಗೂ ಇದು ಕೇವಲ ಒಂದು ಡ್ರಾಮಾ ಎಂದು ಅನಿಸಿದೆ. ಗಂಭೀರವಾದ ಪೆಟ್ಟು ಬೀಳದಿದ್ದರೂ ಈ ರೀತಿ ಮೂರ್ಚೆ ಹೋದವರಂತೆ ನಟಿಸಿದ್ದು ಏಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದ್ದು, ಗಾನವಿ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲೂ ತರಹೇವಾರಿ ಕಾಮೆಂಟ್‌ಗಳು ವ್ಯಕ್ತವಾಗುತ್ತಿವೆ.
ಈ ಘಟನೆಯ ಬೆನ್ನಲ್ಲೇ ಸಿಕ್ಕ ಅವಕಾಶವನ್ನು ಸೌಂದರ್ಯಾ ಶೆಟ್ಟಿ ಸರಿಯಾಗಿ ಬಳಸಿಕೊಂಡಿದ್ದು, ಗಾನವಿ ಅವರ ನಡೆಗೆ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಗಾನವಿ ಅವರಿಗೆ ‘ನೀವು ಕೋಮಾದಲ್ಲಿ ಇದ್ರಿ’ ಎಂದು ನೇರವಾಗಿ ಟೀಕಿಸುವ ಮೂಲಕ ಸೌಂದರ್ಯಾ ಕಾಲೆಳೆದಿದ್ದಾರೆ. ಈ ಮೂಲಕ ಗಾನವಿ ಅವರ ನಾಟಕವನ್ನು ಬಯಲಿಗೆಳೆಯುವ ಪ್ರಯತ್ನವನ್ನು ಸೌಂದರ್ಯಾ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಮಂಜನ ಎಂಟ್ರಿ ಬಳಿಕ ಮನೆಯಲ್ಲಿ ಮತ್ತೆ ಮಾತಿನ ಚಕಮಕಿ
ಕೊನೆಗೆ ಗಾನವಿ ಯಾಕೆ ಈ ರೀತಿ ವರ್ತಿಸುತ್ತಾರೆ ಎಂಬ ಅಸಲಿ ಕಥೆಯನ್ನು ಸೌಂದರ್ಯಾ ಬಿಚ್ಚಿಟ್ಟಿದ್ದಾರೆ. ಟಾಸ್ಕ್‌ನಲ್ಲಿ ಅವಳ ಬಳಿ ಆಡಲು ಸಾಧ್ಯವಾಗದೇ ಇದ್ದಾಗ ಮತ್ತು ಸೋಲುವ ಭಯ ಎದುರಾದಾಗ ಗಾನವಿ ಈ ರೀತಿಯ ನಾಟಕ ಆಡುತ್ತಾಳೆ ಎಂದು ಸೌಂದರ್ಯಾ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಈ ಕೋಮಾ ಡ್ರಾಮಾ ವಿಚಾರ ಬಿಗ್ ಬಾಸ್ ಮನೆಯಲ್ಲಿ ಹೊಸ ಕಿಚ್ಚು ಹಚ್ಚಿದ್ದು, ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.