‘ಧೋನಿ’ ಹಿಂದಿ ಚಿತ್ರದ ಖ್ಯಾತಿಯ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗ್ತಿದೆ. ನಟನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡ ಅವರ ಮನೆಗೆಲಸದಾತ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗ್ತಿದೆ.
ಸುಶಾಂತ್ ಮನೆಯಲ್ಲಿ ಡೆತ್‌ನೋಟ್ ಸಿಕ್ಕಿಲ್ಲ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿವಾಸದಲ್ಲಿ ಮುಂಬೈ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಪಂಚನಾಮೆ ಮಾಡುತ್ತಿರುವ ಪೊಲೀಸರು ಮನೆ ಕೆಲಸದವನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ಸುಶಾಂತ್ ಮನೆಯಲ್ಲಿ ಡೆತ್‌ನೋಟ್ ಸಿಕ್ಕಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ
1986ರ ಜನವರಿ 21ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ್ದ 34 ವರ್ಷದ ಸುಶಾಂತ್ 2009ರಲ್ಲಿ ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ‘ಪವಿತ್ರ ರಿಷ್ತಾ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಖ್ಯಾತಿ ಪಡೆದ ಇವರು ನಂತರ ‘ಕಾಯ್ ಪೋಚೆ’ ಎಂಬ ಹಿಂದಿ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟರು. ತದನಂತರ 2016ರಲ್ಲಿ ಎಂ.ಎಸ್.ಧೋನಿ ಜೀವನಾಧಾರಿತ ಎಂ.ಎಸ್.ಧೋನಿ(ದಿ ಅನ್ಟೋಲ್ಡ್ ಸ್ಟೋರಿ) ಚಿತ್ರದಲ್ಲಿ ನಟಿಸುವ ಮೂಲಕ ಎಲ್ಲರ ಮನ್ನಣೆ ಪಡೆದಿದ್ದರು. ಈ ಚಿತ್ರದಲ್ಲಿ ತಮ್ಮ ನಟನೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ ಕೂಡ ಗೆದಿದ್ದರು.
Published On - 2:42 pm, Sun, 14 June 20