ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರೆಲ್ಲರಿಗೂ ಯಶಸ್ಸು ಸಿಗುವುದಿಲ್ಲ. ಬಣ್ಣದ ಲೋಕದಲ್ಲಿ ಕೇವಲ ಅಂದ ಇದ್ದರೆ ಸಾಕಾಗುವುದಿಲ್ಲ. ನಟನೆ ಉತ್ತಮವಾಗಿರಬೇಕು. ನ್ಯಾಚುರಲ್ ಆಗಿ ನಟಿಸುವ ಕಲೆ ಇರಬೇಕು. ಎಷ್ಟೇ ಪ್ರಯತ್ನ ಮಾಡಿದರೂ ಕೆಲವರಿಗೆ ಇದು ಸಿದ್ಧಿಸುವುದೇ ಇಲ್ಲ. ಆದರೆ, ನಟಿ ಶ್ರೀಲೀಲಾ (Sreeleela) ಆ ರೀತಿ ಅಲ್ಲ. ದಿನ ಕಳೆದಂತೆ ಅವರು ನಟನೆಯಲ್ಲಿ ಮಾಗುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಟಾಲಿವುಡ್ನಿಂದಲೂ ಹಲವು ಆಫರ್ಗಳು ಬರುತ್ತಿವೆ. ಸ್ಟಾರ್ ನಟರ ಜತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಗುತ್ತಿದೆ. ಈಗ ಅವರ ಬಳಿ ಇರುವ ವಿಶೇಷ ಕಲೆಯ ಗುಟ್ಟು ರಟ್ಟಾಗಿದೆ. ಅಳುವ ದೃಶ್ಯ ಮಾಡುವಾಗ ಶ್ರೀಲೀಲಾ ಸಹಜವಾಗಿಯೇ ಗಳಗಳನೆ ಅತ್ತು ಬಿಡುತ್ತಾರೆ!. ಈ ವಿಚಾರವನ್ನು ಅವರು ಸ್ಟಾರ್ ಸುವರ್ಣ (Star Suvarna) ವಾಹಿನಿಯ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ನಿಜಕ್ಕೂ ಅಚ್ಚರಿ ಹೊರ ಹಾಕಿದ್ದಾರೆ.
ಶ್ರೀಲೀಲಾ ಹಾಗೂ ಧನ್ವೀರ್ ನಟನೆಯ ‘ಬೈ ಟೂ ಲವ್’ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತಂಡ ಬ್ಯುಸಿ ಆಗಿದೆ. ಸ್ಟಾರ್ ಸುವರ್ಣ ವಾಹಿನಿಯ ‘ಗಾನ ಬಜಾನ 2’ ರಿಯಾಲಿಟಿ ಶೋಗೆ ಆಗಮಿಸಿತ್ತು ಈ ತಂಡ. ಈ ವೇದಿಕೆ ಮೇಲೆ ಶ್ರೀಲೀಲಾ ಹೇಳಿಕೊಂಡಿದ್ದಾರೆ. ‘ನಾನು ಸಿನಿಮಾದಲ್ಲಿ ಸಾಕಷ್ಟು ಅತ್ತಿದ್ದೇನೆ. ಈ ಸಿನಿಮಾ ವೈಯಕ್ತಿಕವಾಗಿ ಚಾಲೆಂಜಿಂಗ್ ಆಗಿತ್ತು’ ಎಂದಿದ್ದಾರೆ ಅವರು.
‘ಎಡಗಣ್ಣಲ್ಲಿ ಅಳಬೇಕು ಎಂದರೆ ಶ್ರೀಲೀಲಾ ಎಡಗಣ್ಣಿನಿಂದ ಮಾತ್ರ ನೀರು ಬರುತ್ತಿತ್ತು’ ಎಂದರು ‘ಬೈ ಟೂ ಲವ್’ ತಂಡದ ನಿರ್ದೇಶಕ ಹರಿ ಸಂತೋಷ್. ಎಲ್ಲರೂ ಈ ಬಗ್ಗೆ ಅಚ್ಚರಿ ಹೊರ ಹಾಕಿದರು. ‘ಮಹಾನಟಿ’ ಎಂದು ಖ್ಯಾತಿ ಪಡೆದಿದ್ದ ಸಾವಿತ್ರಿ ಅವರು ಇದೇ ರೀತಿಯ ಕಲೆಯನ್ನು ಹೊಂದಿದ್ದರು. ಇದು ಶ್ರೀಲೀಲಾಗೂ ಒಲಿದಿದೆ ಎಂಬ ವಿಚಾರ ಕೇಳಿ ಅವರನ್ನು ‘ಮಹಾನಟಿ’ ಎಂದು ಹೊಗಳಲಾಯಿತು.
ವೇದಿಕೆ ಮೇಲೆ ಸ್ಯಾಡ್ ಮ್ಯೂಸಿಕ್ ಹಾಕಲಾಯಿತು. ಮ್ಯೂಸಿಕ್ ಕೇಳುತ್ತಿದ್ದಂತೆ ಬಲಗಣ್ಣಲ್ಲಿ ಶ್ರೀಲೀಲಾ ಅಳೋಕೆ ಆರಂಭಿಸಿದರು. ಈ ವಿಚಾರ ನಿಜಕ್ಕೂ ಅಚ್ಚರಿ ತರಿಸಿತ್ತು. ಎಲ್ಲರೂ ಅವರನ್ನು ಮತ್ತೊಮ್ಮೆ ‘ಮಹಾನಟಿ’ ಎಂದು ಹೊಗಳಿದರು.
ಇದನ್ನೂ ಓದಿ: ಇಬ್ಬರು ಮಕ್ಕಳನ್ನು ದತ್ತು ಪಡೆದ ಶ್ರೀಲೀಲಾ; ನಟಿಯ ಮಾದರಿ ಕೆಲಸಕ್ಕೆ ಬಹುಪರಾಕ್
ಬೆಂಗಳೂರು ಮೆಟ್ರೋದಲ್ಲಿ ‘ಬೈ ಟೂ ಲವ್’ ತಂಡ; ಶ್ರೀಲೀಲಾ-ಧನ್ವೀರ್ ಮಸ್ತಿ
Published On - 6:00 am, Mon, 21 February 22