ಸ್ಟಾರ್ ನಟರ ಸಿನಿಮಾ ಎಂದರೆ ಮೊದಲ ನಿತ್ಯ ಸಾವಿರಾರು ಶೋಗಳು ಪ್ರದರ್ಶನ ಕಾಣುತ್ತವೆ. ಈಗ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಕೂಡ ಹೊಸ ದಾಖಲೆ ಬರೆಯೋಕೆ ಸಿದ್ಧವಾಗಿದೆ. ಮೊದಲ ದಿನವೇ ರಾಬರ್ಟ್ ಸಿನಿಮಾ ಕರ್ನಾಟಕ ಒಂದರಲ್ಲೇ ಭಾರೀ ದೊಡ್ಡ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿದೆ.
ದರ್ಶನ್ ಅವರನ್ನು ಬೆಳ್ಳಿಪರದೆ ಮೇಲೆ ನೋಡಿ ತುಂಬ ದಿನಗಳಾಗಿವೆ. 2019ರ ಡಿಸೆಂಬರ್ನಲ್ಲಿ ‘ಒಡೆಯ’ ಚಿತ್ರ ತೆರೆಕಂಡಿತ್ತು. ನಂತರ ಲಾಕ್ಡೌನ್ ಆರಂಭ ಆಗಿದ್ದರಿಂದ ‘ರಾಬರ್ಟ್’ ಆಗಮನ ತಡವಾಯಿತು. ಇದು ಕೂಡ ಸಿನಿಮಾ ಕ್ರೇಜ್ ಹೆಚ್ಚಲು ಒಂದು ಕಾರಣ. ಇನ್ನು, ಕೊರೊನಾ ಹೊಡೆತಕ್ಕೆ ಸಿಲುಕಿರುವ ಕನ್ನಡ ಚಿತ್ರರಂಗ ಈಗ ತಾನೇ ಚೇತರಿಸಿಕೊಳ್ಳುತ್ತಿದೆ. ಹೀಗಾಗಿ, ಎಲ್ಲಾ ನಟರ ಸಿನಿಮಾಗಳು ಒಂದೊಂದು ಗ್ಯಾಪ್ ತೆಗೆದುಕೊಂಡು ತೆರೆಕಾಣುತ್ತಿವೆ. ಇದು ಕೂಡ ರಾಬರ್ಟ್ಗೆ ಪ್ಲಸ್ ಪಾಯಿಂಟ್ ಆಗಿದೆ.
ಮೊದಲ ದಿನ ರಾಬರ್ಟ್ 700ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ 656 ಚಿತ್ರಮಂದಿರಗಳು ರಿಲೀಸ್ ಆಗೋದು ಖಚಿತವಾಗಿದ್ದು, ಇನ್ನೊಂದು 50 ಚಿತ್ರಮಂದಿರಗಳು ಹೆಚ್ಚುವರಿಯಾಗಿ ಸೇರ್ಪಡೆ ಆಗುವ ನಿರೀಕ್ಷೆ ಇದೆ. ಇನ್ನು, 90ಕ್ಕೂ ಅಧಿಕ ಮಲ್ಟಿಪ್ಲೆಕ್ಸ್ನಲ್ಲಿ ರಾಬರ್ಟ್ ಅಬ್ಬರಿಸಲಿದ್ದಾನೆ. ಇದೆಲ್ಲವನ್ನೂ ಲೆಕ್ಕ ಹಾಕಿದರೆ ಗುರುವಾರ ಒಂದೇ ದಿನ ರಾಬರ್ಟ್ 2000ಕ್ಕೂ ಅಧಿಕ ಶೋ ಪ್ರದರ್ಶನ ಕಾಣಲಿದೆ.
ಈ ಹಿಂದೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದ ‘ಚೌಕ’ ಸಿನಿಮಾದಲ್ಲಿ ದರ್ಶನ್ ಅವರು ರಾಬರ್ಟ್ ಎಂಬ ಅತಿಥಿ ಪಾತ್ರವನ್ನು ಮಾಡಿದ್ದರು. ಈಗ ಅದೇ ಪಾತ್ರವನ್ನು ಮುಖ್ಯವಾಗಿ ಇಟ್ಟುಕೊಂಡು ತರುಣ್ ಅವರು ಹೊಸ ಕಥೆ ಬರೆದು ‘ರಾಬರ್ಟ್’ ಸಿನಿಮಾ ಮಾಡಿದ್ದಾರೆ. ಆಶಾ ಭಟ್ ಸಿನಿಮಾದ ನಾಯಕಿ. ತೆಲುಗಿನ ಖಳ ಜಗಪತಿ ಬಾಬು ಈ ಸಿನಿಮಾದಲ್ಲಿ ಪ್ರಮುಖ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ವಿನೋದ್ ಪ್ರಭಾಕರ್, ರವಿಶಂಕರ್, ಸೋನಲ್ ಮಂಥೆರೋ, ಚಿಕ್ಕಣ್ಣ, ಅವಿನಾಶ್, ದೇವರಾಜ್, ಶಿವರಾಜ್ ಕೆ.ಆರ್. ಪೇಟೆ, ಐಶ್ವರ್ಯಾ ಪ್ರಸಾದ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Roberrt Movie: ದರ್ಶನ್ ಕಟೌಟ್ಗೆ ಹಾಲಿನ ಅಭಿಷೇಕ; ಶುರುವಾಯ್ತು ರಾಬರ್ಟ್ ಸಿನಿಮಾ ಜ್ವರ
Published On - 9:31 pm, Mon, 8 March 21