ಹೀರೋಗಳು ಫಿಟ್ನೆಸ್ ಕಾಯ್ದುಕೊಳ್ಳೋಕೆ ಹೆಚ್ಚು ಒತ್ತು ನೀಡುತ್ತಾರೆ. ಈ ಕಾರಣಕ್ಕೆ ನಿತ್ಯ ಜಿಮ್ನಲ್ಲಿ ಬೆವರು ಹರಿಸುತ್ತಾರೆ. ಆಹಾರ ಕ್ರಮದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಆದರೆ, ಕೊವಿಡ್ ಬಂದ ನಂತರದಲ್ಲಿ ಅನೇಕರು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿದ್ದರಿಂದ ಫಿಟ್ನೆಸ್ ಕಳೆದುಕೊಂಡಿದ್ದಾರೆ. ಇದರಲ್ಲಿ ನಟ ಚಂದನ್ ಕುಮಾರ್ ಕೂಡ ಒಬ್ಬರು. ಆದರೆ, ಕೇವಲ ಎರಡೇ ತಿಂಗಳಲ್ಲಿ ಅವರ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಚಂದನ್ ಕುಮಾರ್ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಕೊವಿಡ್ ಎರಡನೇ ಅಲೆ ಬರುವುದಕ್ಕೂ ಕೆಲ ತಿಂಗಳ ಮೊದಲು ಅವರ ಮದುವೆ ನಿಗದಿ ಆದ ಕಾರಣ ನಟನೆಯಿಂದ ಒಂದು ಬ್ರೇಕ್ ತೆಗೆದುಕೊಂಡರು. ಈ ಕಾರಣಕ್ಕೆ ತೆಲುಗು ಧಾರಾವಾಹಿಯಿಂದ ಹೊರ ಬಂದರು. ಈ ಮಧ್ಯೆ ಕೊವಿಡ್ ಕಾಣಿಸಿಕೊಂಡಿತ್ತು. ಹೀಗಾಗಿ, ಚಂದನ್ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ, ಅವರಿಗೆ ಜಿಮ್ಗೆ ತೆರಳೋಕು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅವರ ದೇಹ ಶೇಪ್ ಕಳೆದುಕೊಂಡಿತ್ತು.
ಆದರೆ, ಚಂದನ್ ಕುಮಾರ್ ಕೈಕಟ್ಟಿ ಕೂತಿಲ್ಲ. ಸತತ ಎರಡು ತಿಂಗಳು ಜಿಮ್ನಲ್ಲಿ ಬೆವರು ಹರಿಸಿದ್ದಾರೆ. ಈ ಮೂಲಕ ಅವರ ಬಾಡಿಯನ್ನು ಕರಗಿಸಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಚಂದನ್ ಹಂಚಿಕೊಂಡಿದ್ದಾರೆ.
ಜೂನ್ 21ರ ಫೋಟೋದಲ್ಲಿ ಚಂದನ್ಗೆ ದೊಡ್ಡದಾದ ಹೊಟ್ಟೆ ಬಂದಿದೆ. ಆದರೆ ಆಗಸ್ಟ್ 26ರ ಫೋಟೋದಲ್ಲಿ ಅವರು ಸಖತ್ ಫಿಟ್ ಆಗಿದ್ದಾರೆ. ಈ ಫೋಟೋ ನೋಡಿದ ಫ್ಯಾನ್ಸ್ ಅಚ್ಚರಿ ಹೊರ ಹಾಕಿದ್ದಾರೆ. ಇನ್ನೂ ಕೆಲವರು ‘ನೀವೇ ನಮಗೆ ಸ್ಫೂರ್ತಿ’ ಎಂದು ಬರೆದುಕೊಂಡಿದ್ದಾರೆ. ಸದ್ಯ, ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ.
ಇದನ್ನೂ ಓದಿ: ಚಂದನ್ ಕುಮಾರ್ – ನಟಿ ಕವಿತಾ ಗೌಡ ಸಿಂಪಲ್ ಮದುವೆಯ ಫೋಟೋಗಳು ವೈರಲ್
ಮಾಸ್ಕ್ ಧರಿಸಿ ಹಸೆಮಣೆ ಏರಿದ ನಟ ಚಂದನ್ ಕುಮಾರ್, ನಟಿ ಕವಿತಾ ಗೌಡ…
Published On - 4:54 pm, Thu, 26 August 21