ಹಾಸ್ಯ ನಟ ಟೆನ್ನಿಸ್ ಕೃಷ್ಣ (Tennis Krishna) ಅವರು ತೆರೆಮೇಲೆ ಸಾಕಷ್ಟು ನಗಿಸಿದ್ದಾರೆ. ಹಲವು ಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ನಟನೆಯಿಂದ ದೂರ ಉಳಿದುಕೊಂಡಿರುವ ಅವರು ಈಗ ರಾಜಕೀಯಕ್ಕೆ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ. ಆಗಸ್ಟ್ 4ರದು ಅವರು ಆಪ್ ಪಕ್ಷಕ್ಕೆ (AAP Party) ಸೇರ್ಪಡೆ ಆಗುತ್ತಿದ್ದಾರೆ. ಮುಂಜಾನೆ 10.30ಕ್ಕೆ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಈ ವೇಳೆ ಅವರು ಅಧಿಕೃತವಾಗಿ ಆಪ್ ಪಕ್ಷ ಸೇರಿಕೊಳ್ಳಲಿದ್ದಾರೆ. ಅವರು ರಾಜಕೀಯದಲ್ಲಿ ಯಶಸ್ಸು ಕಾಣುತ್ತಾರಾ ಅನ್ನೋದು ಸದ್ಯದ ಕುತೂಹಲ.
2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೆ ಎಲ್ಲಾ ಪಕ್ಷಗಳು ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇತ್ತೀಚೆಗೆ ಪಂಜಾಬ್ ಚುನಾವಣೆಯಲ್ಲಿ ಗೆದ್ದು, ಸರ್ಕಾರ ರಚಿಸಿರುವ ಆಪ್ ಪಕ್ಷ ಈಗ ಕರ್ನಾಟಕದಲ್ಲೂ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಈ ಕಾರಣಕ್ಕೆ ಪಕ್ಷವನ್ನು ಇಲ್ಲಿ ಬಲಪಡಿಸುವ ಕಾರ್ಯ ಆಗುತ್ತಿದೆ. ಈಗ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದರಿಂದ ಕರ್ನಾಟಕದಲ್ಲಿ ಆಪ್ ಪಕ್ಷದ ಬಲ ಹೆಚ್ಚಲಿದೆ.
ಟೆನ್ನಿಸ್ ಕೃಷ್ಣ ಅವರು 90ರ ದಶಕದಿಂದಲೇ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. ದೊಡ್ಡಣ್ಣ ಸೇರಿ ಸಾಕಷ್ಟು ನಟರ ಜತೆ ಅವರು ತೆರೆ ಹಂಚಿಕೊಳ್ಳುವ ಮೂಲಕ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. 2012ರಿಂದ ಈಚೆಗೆ ಅವರಿಗೆ ಬೇಡಿಕೆ ಕಡಿಮೆ ಆಗಿದೆ. ಈ ಕಾರಣಕ್ಕೆ ಅವರು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದಾರೆ. ಈಗ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ವಿಷ್ಣು-ಅಂಬರೀಷ್ ಜೀವದ ಗೆಳೆಯರು: ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ
ಚಿತ್ರರಂಗಕ್ಕೂ ರಾಜಕೀಯಕ್ಕೂ ಈ ಮೊದಲಿನಿಂದಲೂ ಒಳ್ಳೆಯ ನಂಟಿದೆ. ಚಿತ್ರರಂಗದಲ್ಲಿ ಯಶಸ್ಸು ಕಂಡ ಬಳಿಕ ರಾಜಕೀಯದಲ್ಲಿ ಗೆಲುವು ಕಂಡ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಆ ಸಾಲಿಗೆ ಟೆನ್ನಿಸ್ ಕೃಷ್ಣ ಕೂಡ ಸೇರ್ಪಡೆ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.