ಬೆಂಗಳೂರು (Bengaluru) ನಿರ್ಮಾತೃ, ನಾಡಪ್ರಭು ಕೆಂಪೇಗೌಡ (Kempegowda) ಸಿನಿಮಾ ಸೆಟ್ಟೇರಲು ಸಜ್ಜಾಗಿದ್ದು, ಡಾಲಿ ಧನಂಜಯ್ ನಾಡಪ್ರಭು ಕೆಂಪೇಗೌಡರ ಪಾತ್ರದಲ್ಲಿ ನಟಿಸಲಿದ್ದಾರೆ. ಕೆಂಪೇಗೌಡರ ಕುರಿತಾಗಿ ಸಿನಿಮಾ ಮಾಡುವ ಪ್ರಯತ್ನ ಈ ಹಿಂದೆಯೂ ಆಗಿದ್ದು, ಆ ಸಿನಿಮಾದಲ್ಲಿ ದರ್ಶನ್ ನಟಿಸಬೇಕಾ? ಸುದೀಪ್ ನಟಿಸಬೇಕಾ? ಎಂಬ ಚರ್ಚೆಗಳು ಸಹ ನಡೆದಿದ್ದವು, ಆದರೆ ಈಗ ಡಾಲಿ ಧನಂಜಯ್ ಕೆಂಪೇಗೌಡರ ಪಾತ್ರದಲ್ಲಿ ಮಿಂಚಲಿದ್ದಾರೆ. ಈಗಾಗಲೇ ಪೋಸ್ಟರ್ ಬಿಡುಗಡೆ ಆಗಿದ್ದು, ಗಿರಿಜಾ ಮೀಸೆ, ತಿಲಕ ಇಟ್ಟು, ಧನಂಜಯ್ ಖಡಕ್ ಆಗಿ ಕಾಣುತ್ತಿದ್ದಾರೆ.
ಈ ಸಿನಿಮಾವನ್ನು ಹಿರಿಯ, ಅನುಭವಿ ನಿರ್ದೇಶಕ ಟಿಎಸ್ ನಾಗಾಭರಣ ನಿರ್ದೇಶನ ಮಾಡಲಿದ್ದಾರೆ. ಸಿನಿಮಾ, ಸಾಹಿತ್ಯ ಎರಡರಲ್ಲೂ ಉತ್ತಮ ಕೃಷಿ ಹೊಂದಿರುವ ನಾಗಾಭರಣ ಕೆಂಪೇಗೌಡರ ಕತೆಯನ್ನು ಪರಿಣಾಮಕಾರಿಯಾಗಿ ತೆರೆಯ ಮೇಲೆ ತರುತ್ತಾರೆ ಎಂಬ ನಂಬಿಕೆ ಸಿನಿಮಾ ಪ್ರೇಮಿಗಳದ್ದು. ಸಿನಿಮಾಕ್ಕೆ ಎಂಎನ್ ಶಿವರುದ್ರಪ್ಪ, ಶುಭಂ ಗುಂಡಾಲ ನಿರ್ಮಾಣ ಮಾಡುತ್ತಿದ್ದಾರೆ.
ನಾಗಾಭರಣ ಅವರಿಗೆ ಐತಿಹಾಸಿಕ ಸಿನಿಮಾಗಳು ಹೊಸವಲ್ಲ. ಕೆಲ ಅತ್ಯುತ್ತಮ ಪೀರಿಯಡ್ ಸಿನಿಮಾಗಳನ್ನು ನಾಗಾಭರಣ ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ‘ಸಂತ ಶಿಷುನಾಳ ಶರೀಫ, ‘ನೀಲ’, ‘ಕಲ್ಲರಳಿ ಹೂವಾಗಿ’ ಇನ್ನೂ ಕೆಲವು ಪೀರಿಯಡ್ ಸಿನಿಮಾಗಳನ್ನು ನಾಗಾಭರಣ ನಿರ್ದೇಶಿಸಿದ್ದಾರೆ. ಈಗ ಕೆಂಪೇಗೌಡರ ಕತೆಯನ್ನು ಸಿನಿಮಾ ಮಾಡಲಿದ್ದಾರೆ.
ಇದನ್ನೂ ಓದಿ:ಕೆಂಪೇಗೌಡರ ಬಗ್ಗೆ ಮಾಡ್ತಿರೋ ಸಿನಿಮಾಗೆ ತಡೆ ತಂದ ನಾಗಾಭರಣ
ಈ ಹಿಂದೆ ದಿನೇಶ್ ಬಾಬು ಅವರು ನಾಡಪ್ರಭು ಕೆಂಪೇಗೌಡರ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ‘ಧರ್ಮಬೀರು ನಾಡಪ್ರಭು ಕೆಂಪೇಗೌಡ’ ಸಿನಿಮಾ ಟೈಟಲ್ ಘೋಷಿಸಿದ್ದರು. ಆದರೆ ಅದಕ್ಕೆ ನಾಗಾಭರಣ ನ್ಯಾಯಾಲಯದ ಮೂಲಕ ತಡೆ ತಂದರು. ತಾವು ಸಿನಿಮಾ ಕೆಂಪೇಗೌಡರ ಕುರಿತಾದ ಸಿನಿಮಾ ಮಾಡುವ ಪ್ರಯತ್ನದಲ್ಲಿ, ಅದಕ್ಕಾಗಿ ಟೈಟಲ್ ರಿಜಿಸ್ಟ್ರೇಷನ್ ಸಹ ಮಾಡಿಸಿದ್ದರು. ಹಾಗಾಗಿ ದಿನೇಶ್ರ ಸಿನಿಮಾದ ವಿರುದ್ಧ ಅರ್ಜಿ ಸಲ್ಲಿಸಿ ಸ್ಟೇ ತಂದಿದ್ದರು.
ಈಗ ಬರಲಿರುವ ‘ನಾಡಪ್ರಭು ಕೆಂಪೇಗೌಡ’ ಸಿನಿಮಾಕ್ಕೆ ನಾಗಾಭರಣ ಅವರೇ ಚಿತ್ರಕತೆ ಬರೆದಿದ್ದು, ಸಾಹಿತಿ ಪ್ರತಿಭಾ ನಂದಕುಮಾರ್ ಅವರು ಬರವಣಿಗೆಯಲ್ಲಿ ಸಹಾಯ ಮಾಡಲಿದ್ದಾರೆ. ನಾಗಾಭರಣ ಅವರ ಪುತ್ರ ನಿರ್ದೇಶಕ ಪನ್ನಗಾಭರಣ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ. ಸಂಗೀತವನ್ನು ವಾಸುಕಿ ವೈಭವ್ ನೀಡಲಿದ್ದಾರೆ. ಶಶಿಧರ ಅಡಪ ಅವರು ಸಿನಿಮಾದ ಸೆಟ್ ನಿರ್ಮಾಣ ಇನ್ನಿತರೆಗಳನ್ನು ನೋಡಿಕೊಳ್ಳಲಿದ್ದಾರೆ.
ಡಾಲಿ ಧನಂಜಯ್ಗೆ ಸಹ ಪೀರಿಯಡ್ ಸಿನಿಮಾಗಳು ಹೊಸತಲ್ಲ. ಈ ಹಿಂದೆ ಅಲ್ಲಮನ ಕುರಿತಾದ ಸಿನಿಮಾದಲ್ಲಿ ಧನಂಜಯ್ ನಟಿಸಿದ್ದರು. ಈಗ ಕೆಂಪೇಗೌಡ ಆಗಲಿದ್ದಾರೆ. ಈ ಪಾತ್ರ ಐತಿಹಾಸಿಕವಾಗಿ ಮಾತ್ರವೇ ಅಲ್ಲದೆ ಬೇರೆ ಕೆಲವು ಕಾರಣಗಳಿಗೂ ಮಹತ್ವದ್ದಾಗಿದ್ದು, ಧನಂಜಯ್ ಈ ಪಾತ್ರಕ್ಕಾಗಿ ವಿಶೇಷ ತಯಾರಿ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ