
ಎಲ್ಲವೂ ಅಂದಕೊಂಡಂತೆ ನಡೆದಿದ್ದರೆ ಕಳೆದ ವರ್ಷವೇ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಕೊರೊನಾ ವೈರಸ್ ಸೋಂಕಿನ ಕಾರಣದಿಂದಾಗಿ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿತ್ತು. ಈಗ ಡಿ-ಬಾಸ್ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ ಆಗಿದ್ದು, ಶಿವರಾತ್ರಿಗೆ ರಾಬರ್ಟ್ ದರ್ಶನ ನೀಡಲಿದ್ದಾನೆ.
ಸದ್ಯ, ಥಿಯೇಟರ್ಗೆ ಜನರು ಅಷ್ಟಾಗಿ ಬರುತ್ತಿಲ್ಲ. ಹೀಗಾಗಿ, ಸಾಕಷ್ಟು ಸಿನಿಮಾ ನಿರ್ಮಾಪಕರು ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಈ ಮಧ್ಯೆ ರಾಬರ್ಟ್ ಚಿತ್ರ ಕೂಡ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ದರ್ಶನ್ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ ಸಿನಿಮಾ ಸ್ವಾಗತಿಸಬೇಕು ಎಂದು ಯೋಜನೆ ಹಾಕಿಕೊಂಡಿದ್ದ ಅಭಿಮಾನಿಗಳಿಗೆ ಈ ಸುದ್ದಿ ತುಂಬಾನೇ ಬೇಸರ ಮೂಡಿಸಿತ್ತು. ಈಗ ಚಿತ್ರ ತಂಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.
ಇಂದು ಮುಂಜಾನೆ 11 ಗಂಟೆಗೆ ದರ್ಶನ್ ಫೇಸ್ಬುಕ್ ಲೈವ್ ಬಂದಿದ್ದರು. ಈ ವೇಳೆ ದರ್ಶನ್ ಸಿನಿಮಾ ರಿಲೀಸ್ ದಿನಾಂಕ ಘೋಷಣೆ ಮಾಡಿದ್ದಾರೆ. ಮಾರ್ಚ್ 11ರಂದು ನಾವು ಚಿತ್ರಮಂದಿರಕ್ಕೆ ಬರುತ್ತೇವೆ ಎಂದು ದರ್ಶನ್ ಹೇಳಿದ್ದಾರೆ.
ಸಿನಿಮಾ ತೆರೆಗೆ ಬರೋಕೆ ಇನ್ನೂ ಎರಡು ತಿಂಗಳು ಬಾಕಿ ಇದೆ. ಕೊರೊನಾ ವೈರಸ್ ಅಬ್ಬರ ನಿಧಾನವಾಗಿ ಕಡಿಮೆ ಆಗುತ್ತಿದೆ. ಹೀಗಾಗಿ, ಮಾರ್ಚ್ ವೇಳೆಗೆ ಚಿತ್ರಮಂದಿರದಲ್ಲಿ ಪೂರ್ತಿಯಾಗಿ ಪ್ರೇಕ್ಷಕರನ್ನು ಕೂರಿಸಲು ಅವಕಾಶ ನೀಡಿದರೂ ಆಶ್ಚರ್ಯವಿಲ್ಲ. ಹಾಗಾದಲ್ಲಿ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.
ದೂರದ ಊರುಗಳಿಂದ ನನ್ನ ಹುಟ್ಟುಹಬ್ಬಕ್ಕೆಂದೇ ಬೆಂಗಳೂರಿಗೆ ಆಗಮಿಸಬೇಡಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ