ಖ್ಯಾತ ನಿರ್ದೇಶಕರ ತರುಣ್ ಸುಧೀರ್ ಅವರಿಗೆ ‘ರಾಬರ್ಟ್’ ಸಿನಿಮಾ ಮೂಲಕ ದೊಡ್ಡ ಯಶಸ್ಸು ಸಿಕ್ಕಿದೆ. ಸ್ಯಾಂಡಲ್ವುಡ್ನಲ್ಲಿ ತಾವೊಬ್ಬ ಭರವಸೆಯ ನಿರ್ದೇಶಕ ಎಂಬುದನ್ನು ಅವರು ಈಗಾಗಲೇ ಸಾಬೀತುಪಡಿಸಿದ್ದಾರೆ. ರಾಬರ್ಟ್ ಚಿತ್ರದ ಗೆಲುವನ್ನು ಸಂಭ್ರಮಿಸಲು ಇಡೀ ತಂಡ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸೇರಿತ್ತು. ಅಲ್ಲಿಯೇ ತರುಣ್ ಮದುವೆ ವಿಚಾರ ಪ್ರಸ್ತಾಪ ಆಗಿದೆ!
ಹೌದು, ನಿರ್ದೇಶಕ ತರುಣ್ ಸುಧೀರ್ ಅವರ ಮದುವೆ ಬಗ್ಗೆ ರಾಬರ್ಟ್ ಸಕ್ಸಸ್ ಮೀಟ್ ವೇದಿಕೆಯಲ್ಲಿ ಚರ್ಚೆ ಆಗಿದೆ. ಅದಕ್ಕೆ ಕಾರಣ ಆಗಿದ್ದು ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಎಂಬುದು ವಿಶೇಷ. ಎಲ್ಲೆಡೆ ರಾಬರ್ಟ್ ಸಿನಿಮಾ ಧೂಳೆಬ್ಬಿಸಿದೆ. ಬಾಕ್ಸ್ ಆಫೀಸ್ನಲ್ಲಿ 60 ಕೋಟಿ ರೂ.ಗಿಂತಲೂ ಹೆಚ್ಚಿನ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ತರುಣ್ ಸುಧೀರ್ ಅವರು ವೇದಿಕೆ ಏರುತ್ತಿದ್ದಂತೆಯೇ ದರ್ಶನ್ ಒಂದು ಪ್ರಶ್ನೆ ಕೇಳಿಯೇ ಬಿಟ್ಟರು. ಮದುವೆ ಯಾವಾಗ ಅಂತ ತರುಣ್ಗೆ ಕೇಳಿ ಎಂದು ಕಾರ್ಯಕ್ರಮದ ನಿರೂಪಕಿಗೆ ದರ್ಶನ್ ಸೂಚಿಸಿದರು.
‘ದರ್ಶನ್ ಸರ್ ಹೇಳುತ್ತಿದ್ದಾರೆ ಎಂದರೆ ನಾನು ಈ ಪ್ರಶ್ನೆ ಕೇಳಲೇ ಬೇಕು. ಮದುವೆ ಯಾವಾಗ ಮಾಡಿಕೊಳ್ತೀರಿ’ ಎಂದು ತರುಣ್ಗೆ ನಿರೂಪಕಿ ಪ್ರಶ್ನೆ ಎಸೆದರು. ಕಿಂಚಿತ್ತೂ ನಿರೀಕ್ಷಿಸಿರದ ಇಂಥ ಸಂದರ್ಭದಲ್ಲಿ ತಮ್ಮ ಮದುವೆ ಬಗ್ಗೆ ಪ್ರಸ್ತಾಪ ಆಗಿದ್ದು ನೋಡಿ ತರುಣ್ ಒಂದು ಕ್ಷಣ ನಾಚಿ ನೀರಾದರು. ‘ಸುಮ್ಮನೆ ಇರಿ ಬಾಸ್’ ಎಂದು ಆತ್ಮೀಯತೆಯಿಂದ ದರ್ಶನ್ರನ್ನು ಸುಮ್ಮನಿರಿಸಲು ಪ್ರಯತ್ನಿಸಿದರು. ಆದರೂ ಹಠ ಬಿಡದೆ ದರ್ಶನ್ ಅದೇ ಪ್ರಶ್ನೆಯನ್ನು ಮತ್ತೆ ಕೇಳಿದರು. ‘ಇನ್ನೊಂದು ಸಿನಿಮಾ ಆದ ಮೇಲೆ ಬಾಸ್’ ಎಂದು ತರುಣ್ ನಾಚುತ್ತಲೇ ಉತ್ತರ ನೀಡಿದರು.
‘ಈ ಸಿನಿಮಾ ಇಷ್ಟು ದೊಡ್ಡ ಯಶಸ್ಸು ಆಗಲು ನನ್ನ ಹಿಂದೆ ದೊಡ್ಡದೊಂದು ಟೀಮ್ ಕೆಲಸ ಮಾಡಿದೆ. ಅವರನ್ನು ಬೇರೆ ಯಾವುದೇ ವೇದಿಕೆಯಲ್ಲೂ ಕರೆಸಿಕೊಳ್ಳಲು ಆಗಿರಲಿಲ್ಲ. ಆದರೆ ಈ ವೇದಿಕೆಗೆ ಅವರನ್ನು ಕರೆಯುತ್ತೇನೆ. 108 ದಿನಗಳ ಸವಾಲಿನ ಚಿತ್ರೀಕರಣಕ್ಕೆ ಈ ಟೀಮ್ ಸಾಥ್ ನೀಡಿತು. ನಮ್ಮೆಲ್ಲರಿಗೂ ದರ್ಶನ್ ಸರ್ ಸ್ಫೂರ್ತಿ ಆಗಿದ್ದರು. ನಾವೆಲ್ಲರೂ ದರ್ಶನ್ ಅಭಿಮಾನಿಗಳು’ ಎಂದು ತಮ್ಮ ಡೈರೆಕ್ಷನ್ ಟೀಮ್ ಪರಿಚಯಿಸಿದರು ತರುಣ್ ಸುಧೀರ್.
ಇದನ್ನೂ ಓದಿ: ಎಲ್ಲಾ ಪಾತ್ರಗಳನ್ನೂ ನಾನೇ ಮಾಡೋಕಾಗಲ್ಲ; ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀಗೆ ಅಂದಿದ್ಯಾಕೆ?