ರೇಣುಕಾ ಸ್ವಾಮಿ (Renuka Swamy) ಕೊಲೆ ಆರೋಪದಲ್ಲಿ ದರ್ಶನ್ (Darshan) ಬಂಧನವಾಗಿದೆ. ದರ್ಶನ್ ವಿರುದ್ಧ ಪೊಲೀಸರು ಕಲೆಹಾಕಿರುವ ಸಾಕ್ಷ್ಯಗಳನ್ನು ಪರಿಶೀಲಿಸಿದರೆ ದರ್ಶನ್ಗೆ ಸುಲಭಕ್ಕೆ ಜಾಮೀನು ಸಿಗುವುದು ಅನುಮಾನ. ಅಲ್ಲದೆ ಪ್ರಕರಣದಲ್ಲಿ ದರ್ಶನ್ಗೆ ಶಿಕ್ಷೆ ಆಗುವ ಸಾಧ್ಯತೆಯೂ ಹೆಚ್ಚಿಗಿದೆ. ದರ್ಶನ್ ಅಭಿಮಾನಿಗಳು ಸಹಜವಾಗಿಯೇ ಆತಂಕದಲ್ಲಿದ್ದಾರೆ. ಆದರೆ ಕೆಲವು ಸಿನಿಮಾ ನಿರ್ಮಾಪಕರು ಸಹ ಈ ಪ್ರಕರಣದಿಂದಾಗಿ ತೀವ್ರ ಆತಂಕದಲ್ಲಿದ್ದಾರೆ.
ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಅವರನ್ನು ನಂಬಿ ಕೋಟ್ಯಂತರ ರೂಪಾಯಿ ಬಂಡವಾಳವನ್ನು ಸಿನಿಮಾ ನಿರ್ಮಾಪಕರು ಹಾಕಿದ್ದಾರೆ. ಈಗ ದರ್ಶನ್ ಜೈಲು ಪಾಲಾಗಿದ್ದರಿಂದ ನಿರ್ಮಾಪಕರು ಆತಂಕಕ್ಕೆ ಒಳಗಾಗಿದ್ದಾರೆ. ದರ್ಶನ್ ಪ್ರಸ್ತುತ ‘ಡೆವಿಲ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಚಿತ್ರೀಕರಣ ಅರ್ಧ ಮುಗಿದಿದೆ. ಈ ಮಧ್ಯೆ ದರ್ಶನ್ ಬಂಧನವಾಗಿದ್ದು, ಪಾಪ ‘ಡೆವಿಲ್’ ನಿರ್ಮಾಪಕರಿಗೆ ದಿಕ್ಕು ತೋಚದಂತಾಗಿದೆ.
‘ಡೆವಿಲ್’ ಸಿನಿಮಾದ ಬಳಿಕ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ದರ್ಶನ್ ನಟಿಸಬೇಕಿತ್ತು. ಆ ಸಿನಿಮಾಕ್ಕೆ ಕೆವಿಎನ್ ಬಂಡವಾಳ ಹೂಡುವ ನಿರೀಕ್ಷೆ ಇತ್ತು. ಆ ಸಿನಿಮಾಕ್ಕಾಗಿ ಪ್ರೇಮ್ ಈಗಾಗಲೇ ಸಿದ್ಧತೆ ಆರಂಭಿಸಿದ್ದರು. ಆದರೆ ಈಗ ಅದೂ ಸಹ ತಟಸ್ಥವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:ದರ್ಶನ್ ಫೋಟೋ ಹಿಡಿದು ಪೊಲೀಸ್ ಠಾಣೆ ಎದುರು ಕಾದು ಕುಳಿತ ಅಭಿಮಾನಿ; ಫ್ಯಾನ್ಸ್ಗೆ ಬುದ್ಧಿ ಹೇಳೋದ್ಯಾರು?
ಇನ್ನು ನಿರ್ಮಾಪಕ ಸೂರಪ್ಪ ಬಾಬು ಜೊತೆಗೂ ಒಂದು ಸಿನಿಮಾಕ್ಕಾಗಿ ದರ್ಶನ್ ಎಸ್ ಹೇಳಿದ್ದರು. ಸೂರಪ್ಪ ಬಾಬು ಸಹ ದರ್ಶನ್ ಜೊತೆ ಸಿನಿಮಾ ಮಾಡಲು ಹಣಕಾಸಿನ ಹೊಂದಾಣಿಕೆಯಲ್ಲಿ ತೊಡಗಿದ್ದರು ಎನ್ನಲಾಗುತ್ತಿದೆ. ಈಗ ಈ ಸಿನಿಮಾ ಸಹ ಬಂದ್ ಆಗಲಿದೆ.
ಅದಾದ ಬಳಿಕ ‘ಕಾಟೇರ’ ಸಿನಿಮಾದ ತಂಡದೊಂದಿಗೆ ಮತ್ತೊಂದು ಸಿನಿಮಾ ಮಾಡಲಿದ್ದರು ದರ್ಶನ್. ರಾಕ್ಲೈನ್ ನಿರ್ಮಾಣ, ತರುಣ್ ಸುಧೀರ್ ನಿರ್ದೇಶನದಲ್ಲಿ ಹೊಸ ಸಿನಿಮಾವನ್ನು ದರ್ಶನ್ ಕೈಗೆತ್ತಿಕೊಳ್ಳಲಿದ್ದರು. ಆದರೆ ಈ ಸಿನಿಮಾದ ಯಾವುದೇ ಕೆಲಸಗಳು ಪ್ರಾರಂಭವಾಗಿರಲಿಲ್ಲ. ಆದರೆ ಈ ಸಿನಿಮಾ ಇನ್ನಷ್ಟು ತಡವಾಗುವುದು ಖಾಯಂ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ