ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಇಂದು (ಅಕ್ಟೋಬರ್ 04) ಬೆಂಗಳೂರು 57ನೇ ಸಿಸಿಹೆಚ್ ಕೋರ್ಟ್ನಲ್ಲಿ ನಡೆಯಿತು. ದರ್ಶನ್ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ಸುದೀರ್ಘ ವಾದ ಮಂಡಿಸಿದರು. ವಾದ ಮಂಡನೆಯಲ್ಲಿ ಪೊಲೀಸರ ತನಿಖೆಯಲ್ಲಿರುವ ವೈರುಧ್ಯಗಳನ್ನು ನ್ಯಾಯಾಲಯಕ್ಕೆ ತರುವ ಪ್ರಯತ್ನ ಮಾಡಿದರು. ಈ ತನಿಖೆಯಲ್ಲಿ ಸಾಕಷ್ಟು ಲೋಪಗಳಿದ್ದು, ತನಿಖಾಧಿಕಾರಿಗಳು ಹಲವು ಸಾಕ್ಷ್ಯಗಳನ್ನು ತಾವೇ ಸೃಷ್ಟಿಸಿದ್ದಾರೆ ಎಂಬ ಆರೋಪವನ್ನು ಸಹ ಮಾಡಿದರು. ಸಿವಿ ನಾಗೇಶ್ ಅವರು ಇಂದು ಮಾಡಿದ ಸುದೀರ್ಘ ವಾದದ ಮುಖ್ಯಾಂಶಗಳು ಇಲ್ಲಿವೆ.
ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅನ್ನು ಅಪರಾಧಿ ಎಂಬಂತೆ ಬಿಂಬಿಸಲಾಗಿದೆ. ಪ್ರಕರಣದ ಸಾಕ್ಷಿ ಹೇಳಿಕೆಗಳು, ಪಂಚನಾಮೆ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ರೇಣುಕಾ ಸ್ವಾಮಿ ಮೈಮೇಲಿದ್ದ ಗಾಯಗಳಲ್ಲಿ ಕೆಲವು ನಾಯಿ ಕಚ್ಚಿದ್ದರಿಂದ ಆಗಿದ್ದವು, ಅವನ್ನೂ ಸಹ ದರ್ಶನ್ ಹಾಗೂ ಸಹಚಚರಿಂದ ಆಗಿವೆ ಎಂದು ತೋರಿಸಲಾಗಿದೆ. ನ್ಯಾಯಾಲಯ ಮಾಧ್ಯಮಗಳ ವರದಿ ಆಧಾರದ ಮೇಲೆ ಈ ಪ್ರಕರಣವನ್ನು ನೋಡುವುದಿಲ್ಲ ಎಂದು ಭಾವಿಸಿದ್ದೇನೆ ಎಂದು ವಾದ ಆರಂಭ ಮಾಡಿದರು ಸಿವಿ ನಾಗೇಶ್.
ದರ್ಶನ್ ವಿರುದ್ಧ ಸಾಂದರ್ಭಿಕ, ಪ್ರತ್ಯಕ್ಷ ಸಾಕ್ಷಿಗಳನ್ನು ಹೆಸರಿಸಲಾಗಿದೆ, ಆದರೆ ಆ ಎಲ್ಲಾ ಸಾಕ್ಷಿಗಳು ಸೃಷ್ಟಿಸಿರುವ ಸಾಕ್ಷಿಗಳಾಗಿವೆ. 12.6.2024 ರಿಂದಲೇ ದಾಖಲೆ ಸೃಷ್ಟಿಸುವ ಕಾರ್ಯ ನಡೆದಿದೆ. ಮರದ ಕೊಂಬೆ, ನೈಲಾನ್ ಹಗ್ಗ, ನೀರಿನ ಬಾಟಲ್ ವಶಕ್ಕೆ ಪಡೆಯಲಾಗಿದೆ. ಆದರೆ ಜೂನ್ 9 ರಂದೇ ಇವೆಲ್ಲಾ ವಸ್ತುಗಳು ಪೊಲೀಸ್ ವಶದಲ್ಲಿದ್ದವು. ಈ ಬಗ್ಗೆ ತನಿಖಾಧಿಕಾರಿಯ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಪಿ ಹೇಳಿಕೆ ಮೇಲೆ 12.6.24 ರಂದು ರಿಕವರಿ ಮಾಡಲಾಗಿದೆ ಎಂದಿದ್ದಾರೆ ಆದರೆ ಜೂ.9 ರಂದೇ ಈ ವಸ್ತಗಳು ಪೊಲೀಸರ ವಶದಲ್ಲಿದ್ದವು, 12.6.24 ರಂದು ಕತ್ತಲೆಯಲ್ಲಿ ಪಂಚನಾಮೆ ಮಾಡಿ ರಿಕವರಿ ಎಂದಿದ್ದಾರೆ ಪೊಲೀಸರಿಗೆ ಬೆಳಗ್ಗೆ ಸಿಗದಿದ್ದು ಪಂಚನಾಮೆ ವೇಳೆ ಸಿಕ್ಕಿತಂತೆ’ ಎಂದು ಲೇವಡಿ ಮಾಡಿದರು ಸಿವಿ ನಾಗೇಶ್.
ಇದನ್ನೂ ಓದಿ:ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ
11.6.2024 ರಂದು ದರ್ಶನ್ ಹೇಳಿಕೆ ದಾಖಲಿಸಲಾಗಿದೆ. ದರ್ಶನ್ ಹೇಳಿಕೆಯಲ್ಲಿ ರೇಣುಕಾಸ್ವಾಮಿ ಕೊಲೆಮಾಡಿದ ಸ್ಥಳ ತೋರಿಸುತ್ತೇನೆ ಎಂದಿದೆ. ಆದರೆ ಅದೇ ದಿನ ಪೊಲೀಸರು ಸ್ಥಳಕ್ಕೆ ದರ್ಶನ್ ಅನ್ನು ಸ್ಥಳಕ್ಕೆ ಕರೆದೊಯ್ದಿಲ್ಲ. ಜೂನ್ 10 ರಂದೇ ಎ4 ಸ್ವ ಇಚ್ಚಾ ಹೇಳಿಕೆಯಲ್ಲಿ ಸ್ಥಳದ ವಿವರವಿದೆ. ಪಿಎಸ್ಐ ವಿನಯ್ ಹೇಳಿಕೆಯಲ್ಲಿ ಜೂ.8 ರಂದೇ ಮಾಹಿತಿ ಇತ್ತೆಂದಿದೆ. ಆರೋಪಿ ಪ್ರದೋಷ್ ಜೂ.8 ರ ಮಧ್ಯರಾತ್ರಿಯೇ ವಿನಯ್ ಗೆ ಕರೆ ಮಾಡಿದ್ದ. ಮೂವರು ಹಣದ ವಿಷಯಕ್ಕೆ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ವಿನಯ್ ಈ ವಿಷಯವನ್ನು ಸರ್ಕಲ್ ಇನ್ಸ್ ಪೆಕ್ಟರ್ ಗೆ ತಿಳಿಸಿದರು, ಇದಷ್ಟೇ ಅಲ್ಲ ಪ್ರತ್ಯಕ್ಷದರ್ಶಿ ಹೇಳಿಕೆ ಪ್ರಕಾರವೇ ಜೂ.9 ರಂದೇ ಪೊಲೀಸರು ಷೆಡ್ಗೆ ಬಂದಿದ್ದರು. ಜೂ.9 ರಂದೇ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ನಾಗೇಶ್ ವಾದ ಮಂಡಿಸಿದರು.
ಸೆ.164 ಹೇಳಿಕೆಯಲ್ಲಿ ಪ್ರತ್ಯಕ್ಷ ಸಾಕ್ಷಿ ಆಗಿರುವ ವಾಚ್ ಮ್ಯಾನ್ ಹಿಂದಿಯಲ್ಲಿ ನೀಡಿರುವ ಹೇಳಿಕೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಓದಿದ ನಾಗೇಶ್, ಒಂಬತ್ತನೇ ತಾರೀಖಿನಂದೇ ಪೊಲೀಸರು ಬಂದು ಸೀಜ್ ಮಾಡಿದ್ದಾರೆ, ಜೂನ್ 9ರಂದೇ ಪೊಲೀಸರು ಷೆಡ್ಗೆ ಹೋಗಿದ್ದರು. ವಸ್ತುಗಳನ್ನು ಸೀಜ್ ಮಾಡಿದ್ದರು, ಲಾಠಿ, ಮರದ ಕೊಂಬೆ, ನೈಲಾನ್ ಹಗ್ಗ ಎಲ್ಲವನ್ನೂ ವಶಕ್ಕೆ ಪಡೆದಿದ್ದರು, ಆದರೆ ಜೂ.12ರಂದು ದರ್ಶನ್ ಹೇಳಿಕೆ ಆಧಾರದಲ್ಲಿ ವಶಕ್ಕೆ ಎಂದು ಹೇಳಿರುವುದೇಕೆ? ಇದು ಸಾಕ್ಷ್ಯ ತಿರುಚುವಿಕೆ ಅಲ್ಲವೇ? ಸೀಜ್ ಮಾಡಿದ ಮೂರು ದಿನ ಪೊಲೀಸರು ಏನು ಮಾಡುತ್ತಿದ್ದರು? ಎಂದು ವಕೀಲ ಸಿ.ವಿ.ನಾಗೇಶ್ ಪ್ರಶ್ನೆ ಮಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ