ತೀವ್ರ ಬೆನ್ನು ನೋವು ಇದ್ರೂ ಬಳ್ಳಾರಿಯಲ್ಲಿ ಚಿಕಿತ್ಸೆ ಬೇಡ ಎಂದ ದರ್ಶನ್: ಕಾರಣ ಏನು?
ಜೈಲು ವಾಸದ ಕಷ್ಟದ ಜೊತೆಗೆ ದರ್ಶನ್ಗೆ ಅನಾರೋಗ್ಯವೂ ಉಂಟಾಗಿದೆ. ಬೆನ್ನು ನೋವಿನ ಕಾರಣದಿಂದ ಅವರಿಗೆ ರಾತ್ರಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಿದ್ದರೂ ಸಹ ಬಳ್ಳಾರಿಯಲ್ಲಿ ಅವರು ಸ್ಕ್ಯಾನಿಂಗ್ ಮಾಡಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ತಕ್ಷಣ ಸ್ಕ್ಯಾನಿಂಗ್ ಮಾಡಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದರೂ ಕೂಡ ದರ್ಶನ್ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯಲು ಸಿದ್ಧರಿಲ್ಲ.
ನಟ ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿ ದಿನ ಕಳೆಯುತ್ತಿದ್ದು, ಅವರಿಗೆ ಆರೋಗ್ಯ ಸಮಸ್ಯೆ ಕೂಡ ಕಾಡುತ್ತಿದೆ. ಬೆನ್ನು ನೋವಿನಿಂದ ದರ್ಶನ್ ಬಳಲುತ್ತಿರುವ ವಿಷಯ ತಿಳಿದುಬಂದಿದೆ. ಈಗಾಗಲೇ ಬಳ್ಳಾರಿ ಜೈಲಿಗೆ ಬಂದ ವೈದ್ಯರು ದರ್ಶನ್ ಅವರ ಆರೋಗ್ಯ ತಪಾಸಣೆ ಮಾಡಿದ್ದಾರೆ. ದರ್ಶನ್ಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ. ಆದರೆ ಬಳ್ಳಾರಿಯಲ್ಲಿ ಸ್ಕ್ಯಾಕಿಂಗ್ ಮಾಡಿಸಲು ದರ್ಶನ್ ಒಪ್ಪುತ್ತಿಲ್ಲ ಎಂಬ ಮಾಹಿತಿ ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆಗಿರುವ ದರ್ಶನ್ ಜಾಮೀನು ಪಡೆದು ಬೆಂಗಳೂರಿಗೆ ಬರುವ ಆಲೋಚನೆಯಲ್ಲಿದ್ದಾರೆ.
ದರ್ಶನ್ ಅವರಿಗೆ ಬೆನ್ನು ನೋವು ಹಾಗೂ ಊತದ ಸಮಸ್ಯೆ ಉಂಟಾಗಿದೆ. ಇಂದು (ಅಕ್ಟೋಬರ್ 4) ಕೂಡ ವೈದ್ಯರು ಹೆಲ್ತ್ ಚೆಕ್ಅಪ್ ಮಾಡಿದ್ದಾರೆ. ಕೇಂದ್ರ ಕಾರಾಗೃಹದ ವೈದ್ಯರಿಂದ ಆರೋಗ್ಯ ತಪಾಸಣೆ ನಡೆದಿದೆ. ದರ್ಶನ್ ಅವರ ಎಲ್1, ಎಲ್ 2 ಪರಿಶೀಲನೆ ಮಾಡಲಾಗಿದೆ. ಊತ ಹಾಗೆ ಇದೆ, ಇನ್ನೂ ಉಲ್ಬಣವಾಗುವ ಸಾಧ್ಯತೆ ಇದೆ. ಆದ್ದರಿಂದ ತಕ್ಷಣ ಸ್ಕಾನಿಂಗ್ ಮಾಡುವ ಅವಶ್ಯಕತೆ ಇರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ಇಷ್ಟೆಲ್ಲ ಸಮಸ್ಯೆ ಇದ್ದರೂ ಕೂಡ ಬಳ್ಳಾರಿಯಲ್ಲಿ ಸ್ಕ್ಯಾನಿಂಗ್ ಹಾಗೂ ಇತರೆ ಚಿಕಿತ್ಸೆ ಪಡೆಯಲು ದರ್ಶನ್ ನಿರಾಕರಣೆ ಮಾಡಿದ್ದಾರೆ. ಬೆನ್ನು ನೋವಿನಿಂದ ರಾತ್ರಿ ಅವರು ಸರಿಯಾಗಿ ನಿದ್ರೆ ಮಾಡಿಲ್ಲ. ಗುರುವಾರ (ಅ.3) ವಿಮ್ಸ್ ವೈದ್ಯರಿಂದಲೂ ಬೆನ್ನುಮೂಳೆಯ ತಪಾಸಣೆ ಮಾಡಲಾಗಿತ್ತು. ಬಳಿಕ ಸ್ಕ್ಯಾನಿಂಗ್ ಮಾಡಿಸಲು ವೈದ್ಯರು ಸಲಹೆ ನೀಡಿದ್ದಾರೆ. ಆದರೆ ಬಳ್ಳಾರಿ ಬದಲು ಬೆಂಗಳೂರಿಗೆ ಹೋಗಿ ಸ್ಕ್ಯಾನಿಂಗ್ ಮಾಡಿಸುವ ಆಲೋಚನೆಯಲ್ಲಿ ದರ್ಶನ್ ಇದ್ದಾರೆ.
ಇದನ್ನೂ ಓದಿ: ‘ದುರ್ವರ್ತನೆ ಬೇಡ’; ಜೈಲಲ್ಲಿರುವ ಆರೋಪಿ ದರ್ಶನ್ಗೆ ಪತ್ರ ಬರೆದು ವಕೀಲರ ನೀತಿಪಾಠ
ಬಳ್ಳಾರಿಯಲ್ಲಿ ಸ್ಕ್ಯಾನಿಂಗ್ ಹಾಗೂ ಹೆಚ್ಚಿನ ಚಿಕಿತ್ಸೆಗೆ ದರ್ಶನ್ ನಿರಾಕರಿಸಿರುವ ಕಾರಣದಿಂದ ಸದ್ಯಕ್ಕೆ ವೈದ್ಯರು ನೋವು ನಿವಾರಕ ಮಾತ್ರೆಗಳನ್ನು ಮಾತ್ರ ನೀಡಿದ್ದಾರೆ. ವಿಮ್ಸ್ ವೈದ್ಯರು ನೀಡುವ ವರದಿಗಾಗಿ ಜೈಲಾಧಿಕಾರಿಗಳು ಕಾಯುತ್ತಿದ್ದಾರೆ. ಒಂದು ವೇಳೆ ಜಾಮೀನು ಸಿಕ್ಕು ಬಳ್ಳಾರಿ ಜೈಲಿನಿಂದ ಹೊರಬಂದರೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಬೇಕು ಎಂಬುದು ದರ್ಶನ್ ಉದ್ದೇಶ. ಹಾಗಾಗಿ ಸದ್ಯಕ್ಕೆ ಅವರು ಬಳ್ಳಾರಿಯಲ್ಲಿ ಚಿಕಿತ್ಸೆ ಬೇಡ ಎನ್ನುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.