ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆಯಾದರೆ ದರ್ಶನ್ ಬೆಂಗಳೂರಿಗೆ ಶಿಫ್ಟ್?
ನಟ ದರ್ಶನ್ ಅವರಿಗೆ ಬಳ್ಳಾರಿ ಜೈಲಿನ ವಾತಾವರಣ ಹೊಂದುತ್ತಿಲ್ಲ. ಅವರು ನಿರಂತರವಾಗಿ ಸೊರಗುತ್ತಿದ್ದಾರೆ. ಜೈಲಿನ ಆವರಣದಲ್ಲಿ ಕಾಣಿಸಿಕೊಳ್ಳುವಾಗ ಫ್ಯಾನ್ಸ್ ಎದುರು ನಗುನಗುತ್ತಾ ಇರುವ ಅವರು ಒಳಗಿನಿಂದ ಸಾಕಷ್ಟು ನೋವು ಅನುಭವಿಸಿದ್ದಾರೆ ಎನ್ನಲಾಗಿದೆ.
ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣಕ್ಕೆ ನಾಲ್ಕು ತಿಂಗಳು ತುಂಬುತ್ತಿದೆ. ದರ್ಶನ್ ಅವರಿಗೆ ಈವರೆಗೆ ಜಾಮೀನು ಸಿಕ್ಕಿಲ್ಲ. ಅವರ ಜಾಮೀನು ಅರ್ಜಿ ವಿಚಾರಣೆ ಇಂದು (ಸೆಪ್ಟೆಂಬರ್ 4) ನಡೆಯಲಿದೆ. ಇದರ ಜೊತೆಗೆ ಅವರ ನ್ಯಾಯಾಂಗ ಬಂಧನದ ಅವಧಿ ಕೂಡ ಇಂದಿಗೆ ಪೂರ್ಣಗೊಳ್ಳಲಿದೆ. ಒಂದೊಮ್ಮೆ ನ್ಯಾಯಾಂಗ ಬಂಧನ ವಿಸ್ತರಣೆಯಾದರೆ ದರ್ಶನ್ ಬೆಂಗಳೂರಿಗೆ ಶಿಫ್ಟ್ ಆಗೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ದರ್ಶನ್‌ಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿದೆ. ಬೆನ್ನಿನಲ್ಲಿ ಊತ ಇದ್ದು, ವಿಮ್ಸ್ ವೈದ್ಯರು ಸ್ಕ್ಯಾನಿಂಗ್ಗೆ ಸಲಹೆ ನೀಡಿದ್ದಾರೆ. ದರ್ಶನ್ ಅವರು ಬೆಂಗಳೂರಿನಲ್ಲೇ ತಪಾಸಣೆ ಮಾಡಿಸೋದಾಗಿ ಹಠ ಹಿಡಿದಿದ್ದಾರೆ. ಸದ್ಯಕ್ಕೆ ನೋವು ನಿವಾರಕ ಮಾತ್ರೆ ಕೊಡಿ ಸಾಕು ಎಂದು ದರ್ಶನ್ ಹೇಳುತ್ತಿದ್ದಾರೆ.
ಬೆನ್ನು ಊತ ಜಾಸ್ತಿಯಾದರೆ ತೊಂದರೆ ಆಗಬಹುದು ಎಂದು ವಿಮ್ಸ್ ವೈದ್ಯರು ಎಚ್ಚರಿಸಿದ್ದಾರೆ. ಆದರೆ, 4-5 ದಿನಗಳಲ್ಲಿ ಬೆಂಗಳೂರಿಗೆ ಹೋಗುತ್ತೇನೆ ಎಂದು ದರ್ಶನ್ ಭರವಸೆ ವ್ಯಕ್ತಪಡಿಸಿದ್ದು, ಸ್ಕ್ಯಾನಿಂಗ್ಗೆ ನಿರಾಕರಿಸಿದ್ದಾರೆ. ಇಂದು ಕೋರ್ಟ್ನಲ್ಲಿ ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಜಾಮೀನು ಸಿಗದೇ ಹೋದರೆ ಅವರು ಅನಾರೋಗ್ಯದ ಕಾರಣ ನೀಡಿ ತಮ್ಮನ್ನು ಶಿಫ್ಟ್ ಮಾಡುವಂತೆ ಕೋರಿಕೆ ಇಡಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬಳ್ಳಾರಿ ಜೈಲಿನಲ್ಲಿರೋ ದರ್ಶನ್‌ಗೆ ಹೆಚ್ಚಿದ ಬೆನ್ನು ನೋವಿನ ಸಮಸ್ಯೆ; ಬೇಕಿದೆ ಶಸ್ತ್ರಚಿಕಿತ್ಸೆ?
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಬರೋಬ್ಬರಿ 17 ಮಂದಿ ಅರೆಸ್ಟ್ ಆಗಿದ್ದು, ಈ ಪೈಕಿ ಮೂವರಿಗೆ ಜಾಮೀನು ಸಿಕ್ಕಿದೆ. ಉಳಿದವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ದರ್ಶನ್ ಹಾಗೂ ಪವಿತ್ರಾ ಸೇರಿದಂತೆ ಎಲ್ಲರೂ ಜಾಮೀನಿಗಾಗಿ ಚಾತಕಪಕ್ಷಿಯಂತೆ ಕಾದಿದ್ದಾರೆ. ವಾದಕ್ಕೆ ಹೆಚ್ಚಿನ ಸಮಯಾವಕಾಶ ಬೇಕು ಎಂದು ದರ್ಶನ್ ಪರ ವಕೀಲರೇ ಬೇಡಿಕೆ ಇಡುತ್ತಿರುವುದರಿಂದ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ ಹೋಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.