ಬಳ್ಳಾರಿ ಜೈಲಿನಲ್ಲಿರೋ ದರ್ಶನ್ಗೆ ಹೆಚ್ಚಿದ ಬೆನ್ನು ನೋವಿನ ಸಮಸ್ಯೆ; ಬೇಕಿದೆ ಶಸ್ತ್ರಚಿಕಿತ್ಸೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತ್ಯವಾಗಿದೆ. ಚಾರ್ಜ್ಶೀಟ್ ಸಲ್ಲಿಕೆ ಆದ ಬಳಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಯಿತು. ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಹೀಗಿರುವಾಗಲೇ ದರ್ಶನ್ಗೆ ಬೆನ್ನು ನೋವು ಹೆಚ್ಚಾಗಿದೆ. ಇದರಿಂದ ವಿಮ್ಸ್ ಆಸ್ಪತ್ರೆಯ ವೈದ್ಯರು ಜೈಲಿನಲ್ಲೇ ದರ್ಶನ್ ಆರೋಗ್ಯ ತಪಾಸಣೆ ನಡೆಸಿದ್ದಾರೆ.
ನಟ ದರ್ಶನ್ ಅವರಿಗೆ ಬಳ್ಳಾರಿ ಜೈಲಿನ ವಾತಾವರಣ ಹೊಂದುತ್ತಿಲ್ಲ. ಅವರು ನಿರಂತರವಾಗಿ ಸೊರಗುತ್ತಿದ್ದಾರೆ. ಜೈಲಿನ ಆವರಣದಲ್ಲಿ ಕಾಣಿಸಿಕೊಳ್ಳುವಾಗ ಫ್ಯಾನ್ಸ್ ಎದುರು ನಗುನಗುತ್ತಾ ಇರುವ ಅವರು ಒಳಗಿನಿಂದ ಸಾಕಷ್ಟು ನೋವು ಅನುಭವಿಸಿದ್ದಾರೆ ಎನ್ನಲಾಗಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್ನ ಆರೋಪಿ ದರ್ಶನ್ಗೆ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಬೆನ್ನು ನೋವು ಹೆಚ್ಚಾಗಿರುವುದರಿಂದ ವಿಮ್ಸ್ ಆಸ್ಪತ್ರೆಯ ವೈದ್ಯರು ಜೈಲಿನಲ್ಲೇ ದರ್ಶನ್ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಈಗಾಗಲೇ ಬೆನ್ನಿನ ಹಿಂಭಾಗದಲ್ಲಿ ಊತ ಬಂದಿರುವ ಸಾಧ್ಯತೆ ಇದೆ. ಅವರಿಗೆ ಸರ್ಜರಿ ಮಾಡಿಸಲೇಬೇಕಾದ ಅಗತ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ದರ್ಶನ್ಗೆ ಸ್ಕ್ಯಾನ್ ಮಾಡಿಸಲು ವೈದ್ಯರು ಸೂಚನೆ ನೀಡಿದ್ದಾರೆ.
ಆದರೆ, ದರ್ಶನ್ ಅವರು ಸ್ಕ್ಯಾನ್ ಮಾಡಿಸೋದಕ್ಕೆ ರೆಡಿ ಇಲ್ಲ. ‘ನಾನು ಬೆಂಗಳೂರಿಗೆ ಹೋದ್ಮೇಲೆ ಸ್ಕ್ಯಾನ್ ಮಾಡಿಸ್ತೀನಿ. ಸದ್ಯಕ್ಕೆ ನೋವು ನಿವಾರಕ ಮಾತ್ರೆ ಕೊಡಿ ಸಾಕು’ ಎಂದು ದರ್ಶನ್ ಕೋರಿಕೊಂಡಿದ್ದಾರೆ ಎಂದು ವರದಿ ಆಗಿದೆ.
ದರ್ಶನ್ ಅವರು ಈಗಾಗಲೇ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಶುಕ್ರವಾರ (ಅಕ್ಟೋಬರ್ 4) ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್ ಅವರು ಜಾಮೀನು ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆಯಲ್ಲಿ ಇದ್ದಾರೆ. ಈ ವಿಚಾರದಲ್ಲಿ ಕೋರ್ಟ್ ಯಾವ ರೀತಿಯ ಆದೇಶ ಹೊರಡಿಸುತ್ತದೆ ಎಂದು ಕಾದು ನೋಡಬೇಕಿದೆ.
ಜಾಮೀನು ಅರ್ಜಿ ವಿಚಾರಣೆ ಈಗಾಗಲೇ ಎರಡು ಬಾರಿ ಮುಂದಕ್ಕೆ ಹೋಗಿದೆ. ದರ್ಶನ್ ಪರ ವಕೀಲರು ವಾದ ಮಂಡನೆಗೆ ಹೆಚ್ಚಿನ ಸಮಯ ಕೇಳುತ್ತಿದ್ದಾರೆ. ಈ ಕಾರಣದಿಂದ ಅರ್ಜಿ ವಿಚಾರಣೆ ಮುಂದಕ್ಕೆ ಹೋಗುತ್ತಿದೆ.
ಇದನ್ನೂ ಓದಿ: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.4ಕ್ಕೆ ಮುಂದೂಡಿಕೆ; ದಾಸನಿಗೆ ಮತ್ತೆ ನಿರಾಸೆ
ಇತ್ತೀಚೆಗೆ ‘ಡೆವಿಲ್’ ಸಿನಿಮಾ ನಿರ್ಮಾಪಕರು ದರ್ಶನ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಸಿನಿಮಾಗೆ ಸಂಬಂಧಿಸಿದ ಕೆಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ. ದರ್ಶನ್ ಜೈಲಿನಲ್ಲಿ ಇರುವುದರಿಂದ ಸಿನಿಮಾದ ಕೆಲಸ ನಡೆಯುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.