ದರ್ಶನ್ ಹಾಗೂ ಸಂಗಡಿಗರ ಪಾರ್ಟಿ ಪ್ರಕರಣ: ಜೆಟ್ಲಾಗ್ ಪರವಾನಗಿ ರದ್ದು

|

Updated on: Jan 16, 2024 | 8:17 PM

Darshan: ದರ್ಶನ್ ಹಾಗೂ ಸಂಗಡಿಗರು ಅವಧಿ ಮೀರಿ ಪಾರ್ಟಿ ಮಾಡಿದ್ದರು ಎನ್ನಲಾಗುತ್ತಿರುವ ಜೆಟ್​ಲ್ಯಾಗ್​ ಪಬ್​ನ ಪರವಾನಗಿಯನ್ನು ನಿರ್ದಿಷ್ಟ ಅವಧಿಗೆ ರದ್ದು ಮಾಡಲಾಗಿದೆ.

ದರ್ಶನ್ ಹಾಗೂ ಸಂಗಡಿಗರ ಪಾರ್ಟಿ ಪ್ರಕರಣ: ಜೆಟ್ಲಾಗ್ ಪರವಾನಗಿ ರದ್ದು
Follow us on

ನಟ ದರ್ಶನ್ (Darshan) ಹಾಗೂ ಇತರೆ ಸಿನಿಮಾ ತಾರೆಯರು ನಿಯಮ ಮೀರಿ ತಡರಾತ್ರಿವರೆಗೆ ಬೆಂಗಳೂರಿನ ಜೆಟ್​ಲ್ಯಾಗ್ ಪಬ್​ನಲ್ಲಿ ಪಾರ್ಟಿ ಮಾಡಿರುವ ಬಗ್ಗೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದರ್ಶನ್ ಹಾಗೂ ಇತರರಿಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಇದೀಗ ದರ್ಶನ್ ಹಾಗೂ ಇತರರು ಅವಧಿ ಮೀರಿ ಪಾರ್ಟಿ ಮಾಡಲು ಅವಕಾಶ ಕೊಟ್ಟಿದ್ದ ಜೆಟ್​​ಲ್ಯಾಗ್​ ಪಬ್​ನ ಪರವಾನಗಿಯನ್ನು 25ದಿನಗಳ ಕಾಲ ರದ್ದು ಮಾಡಿ ಆದೇಶಿಸಲಾಗಿದೆ.

ದರ್ಶನ್, ಡಾಲಿ ಧನಂಜಯ್, ನೀನಾಸಂ ಸತೀಶ್, ರಾಕ್​ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಇನ್ನೂ ಹಲವರು ಜನವರಿ 3ರಂದು ಜೆಟ್​ಲ್ಯಾಗ್ ಪಬ್​ನಲ್ಲಿ ತಡರಾತ್ರಿ ವರೆಗೆ ಪಾರ್ಟಿ ಮಾಡಿದ್ದರು. ಈ ಬಗ್ಗೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ದರ್ಶನ್ ಸೇರಿದಂತೆ ಹಲವರಿಗೆ ನೊಟೀಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

‘ಕಾಟೇರ’ ಸಿನಿಮಾದ ಪ್ರಚಾರಕ್ಕೆ ದುಬೈಗೆ ತೆರಳಿದ್ದ ನಟ ದರ್ಶನ್, ಅಲ್ಲಿಂದ ಬಂದ ಬಳಿಕ ರಾಕ್​ಲೈನ್ ವೆಂಕಟೇಶ್, ಡಾಲಿ ಧನಂಜಯ್, ನೀನಾಸಂ ಸತೀಶ್, ಹರಿಕೃಷ್ಣ ಇತರರ ಜೊತೆ ಸೇರಿ ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಅಂದು ಮಾತನಾಡಿದ್ದ ದರ್ಶನ್ ಪರ ವಕೀಲರು, ಪೊಲೀಸರು ವಿನಾಕಾರಣ ದರ್ಶನ್​ಗೆ ತೊಂದರೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು ವೀರಾವೇಷದಿಂದ ಮಾತನಾಡಿ ಸವಾಲು ಎಸೆದಿದ್ದರು.

ಇದನ್ನೂ ಓದಿ:ಜೆಟ್​ ಲ್ಯಾಗ್ ಕೇಸ್; ವಿಚಾರಣೆ ವೇಳೆ ಆ ಒಂದು ಪ್ರಶ್ನೆಗೆ ಸಿಟ್ಟಾದ್ರಾ ದರ್ಶನ್?

ಜೆಟ್​ಲ್ಯಾಗ್ ಪಬ್​ ಅಬಕಾರಿ ನಿಯಮ ಮೀರಿರುವ ಕಾರಣ ಅದರ ಪರವಾನಗಿಯನ್ನು ಮುಂದಿನ 25 ದಿನಗಳ ಅವಧಿಗೆ ರದ್ದು ಮಾಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಮುಂದಿನ 25 ದಿನಗಳ ಕಾಲ ಜೆಟ್​ಲ್ಯಾಗ್​ ಪಬ್​ನಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಜೆಟ್​ಲ್ಯಾಗ್​ ಪಬ್​ನಲ್ಲಿ ಅಬಕಾರಿ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಎಫ್ಐಆರ್ ನಲ್ಲಿ ಉಲ್ಲೇಖ ಮಾಡಲಾಗಿತ್ತು. ಹಾಗಾಗಿ ಈಗ ಪರವಾನಗಿ ರದ್ದು ಮಾಡಲಾಗಿದೆ. ಮೂರು ಬಾರಿ ನಿಯಮ ಉಲ್ಲಂಘನೆ ಮಾಡಿದರೆ ಪರವಾನಗಿ ರದ್ದು ಮಾಡಲಾಗುತ್ತದೆ. ಮೊದಲ ಬಾರಿ ಜೆಟ್ಲಾಗ್ ವಿರುದ್ಧ ದೂರು ಬಂದಿರುವ ಕಾರಣ 25 ದಿನಗಳ ಕಾಲ ಪರವಾನಗಿ ರದ್ದು ಮಾಡಲಾಗಿದೆ.

ಈ ಪಬ್, ದರ್ಶನ್​, ರಾಕ್​ಲೈವ್ ವೆಂಕಟೇಶ್​ಗೆ ಆಪ್ತರಾಗಿರುವ ಸೌಂದರ್ಯ ಜಗದೀಶ್ ಅವರದ್ದೇ ಆಗಿದೆ ಎನ್ನಲಾಗುತ್ತಿದೆ. ಅವರ ಆಹ್ವಾನದ ಮೇರೆಗೆಯೇ ದರ್ಶನ್ ಹಾಗೂ ತಂಡ ಅಂದು ಪಬ್​ಗೆ ತೆರಳಿದ್ದರು ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ