ಬಡ ಮಧ್ಯಮ ಕುಟುಂಬದ, ಕೃಷ ದೇಹಿ, ರೇಣುಕಾ ಸ್ವಾಮಿಯನ್ನು (Renuka Swamy) ಅಮಾನುಷವಾಗಿ ಹಲ್ಲೆ ಮಾಡಿ ಕೊಲ್ಲಲಾಗಿದೆ. ಕೊಲೆ ಪ್ರಕರಣದಲ್ಲಿ ದರ್ಶನ್ (Darshan), ಪವಿತ್ರಾ ಗೌಡ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿಸಿ, ಪಟ್ಟಣಗೆರೆ ಶೆಡ್ಗೆ ಕರೆತಂದು ಅಲ್ಲಿ ದರ್ಶನ್ ಮತ್ತು ಗ್ಯಾಂಗ್ ಹಲ್ಲೆ ಮಾಡಿದೆ ಎನ್ನಲಾಗುತ್ತಿದೆ. ಅಪರಾಧ ನಡೆದ ಸ್ಥಳ ಪಟ್ಟಣಗೆರೆ ಶೆಡ್ ಬಗ್ಗೆ ಈಗ ಹಲವು ವಿಷಯಗಳು ಹೊರಬರುತ್ತಿವೆ. ಆ ಶೆಡ್ಗೆ ರಕ್ತ ಹೊಸದೇನೂ ಅಲ್ಲ ಎನ್ನಲಾಗುತ್ತಿದೆ. ಮಾತ್ರವಲ್ಲ ದರ್ಶನ್ಗೂ ಸಹ ಹಿಂಸೆ ಹೊಸದಲ್ಲ ಎನ್ನುತ್ತಿದೆ ಪೊಲೀಸ್ ತನಿಖೆ.
ರೇಣುಕಾ ಸ್ವಾಮಿಯನ್ನು ಹೊಡೆದು ಕೊಲ್ಲಲಾದ ಪಟ್ಟಣಗೆರೆ ಶೆಡ್ ನಲ್ಲಿ ಪೊಲೀಸರು ಸುಮಾರು ಐದು ದಿನ ತನಿಖೆ ಹಾಗೂ ಮಹಜರು ಕಾರ್ಯ ಮಾಡಿದ್ದಾರೆ. ಆರೋಪಿಗಳನ್ನು ಕರೆದೊಯ್ದು ಎರಡು ದಿನಗಳ ಕಾಲ ಮಹಜರು ಮಾಡಲಾಗಿತ್ತು, ಅಲ್ಲದೆ ಪೊಲೀಸರು ಸಹ ಪ್ರತ್ಯೇಕವಾಗಿ ತೆರಳಿ ಸಾಕ್ಷ್ಯ ಸಂಗ್ರಹದ ಕೆಲಸ ಮಾಡಿದ್ದರು. ಶೆಡ್ನಲ್ಲಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದು, ಪೊಲೀಸರ ತನಿಖೆಯಿಂದ ಶೆಡ್ನಲ್ಲಿ ನಡೆದಿರುವ ಇನ್ನಷ್ಟು ಹಲ್ಲೆ ಪ್ರಕರಣಗಳ ಮಾಹಿತಿ ಹೊರಬಿದ್ದಿದೆ.
ಪಟ್ಟಣಗೆರೆ ಜಯಣ್ಣ ಎಂಬುವರಿಗೆ ಸೇರಿದ ಈ ಶೆಡ್ ಒಂದು ರೀತಿ ಸೆಟಲ್ಮೆಂಟ್ ಅಡ್ಡೆಯಾಗಿತ್ತು ಎನ್ನಲಾಗುತ್ತಿದೆ. ತಮಗಾಗದವರನ್ನು ಇದೇ ಶೆಡ್ಗೆ ಕರೆದುಕೊಂಡು ಬಂದು ಹಲ್ಲೆ ಮಾಡುವ ಕಾರ್ಯವನ್ನು ಕೆಲವು ರೌಡಿ ಆಸಾಮಿಗಳು ಮಾಡಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ನಟ ದರ್ಶನ್ಗೂ ಈ ಶೆಡ್ಗೂ ಹಳೆಯ ನಂಟಿದ್ದು, ದರ್ಶನ್ಗೆ ಸಂಬಂಧಿಸಿದ ಕೆಲವು ಸೆಟಲ್ಮೆಂಟ್ ವ್ಯವಹಾರಗಳು ಸಹ ಶೆಡ್ನಲ್ಲಿ ನಡೆದಿವೆಯಂತೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಕೇಸ್: ದರ್ಶನ್ ಸ್ವ-ಇಚ್ಛಾ ಹೇಳಿಕೆ, ಕೊಲೆಯಲ್ಲಿ ತನ್ನ ಪಾತ್ರ ವಿವರಿಸಿದ ನಟ
ದರ್ಶನ್ರ ಮೊಬೈಲ್ ಕರೆ ವಿವರಗಳ ತಪಾಸಣೆ ವೇಳೆ, ದರ್ಶನ್ಗೆ ಹಲವು ರೌಡಿಗಳ ಜೊತೆ ನಂಟಿರುವ ವಿಷಯವೂ ಬೆಳಕಿಗೆ ಬಂದಿದೆ. ಹಲವು ಜಿಲ್ಲೆಗಳಲ್ಲಿ ದರ್ಶನ್ಗೆ ರೌಡಿಗಳ ಪರಿಚಯ ಹಾಗೂ ಆಪ್ತ ಬಂಧ ಇದೆಯೆಂಬುದು ತಿಳಿದುಬಂದಿದೆ. ಅಲ್ಲದೆ ಈಗ ದರ್ಶನ್ ಜೊತೆಗೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಿನಯ್ ಎಂಬಾತ ರೌಡಿತನದಿಂದ ಪೊಲೀಸರಿಗೆ ಚಿರಪರಿಚಿತ. ಈ ಹಿಂದೆಯೂ ಸಹ ಕೆಲವರೊಟ್ಟಿಗೆ ಸೇರಿ ವ್ಯಕ್ತಿಯೊಬ್ಬರ ಮೇಲೆ ವಿನಯ್ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈಗ ದರ್ಶನ್ ಜೊತೆಗೆ ಆತನೂ ಸಹ ಜೈಲಿನಲ್ಲಿ ಬಂಧಿಯಾಗಿದ್ದಾನೆ.
ದರ್ಶನ್ರ ಈ ಹಿಂದಿನ ಕೆಲವು ಪ್ರಕರಣಗಳು ಹಾಗೂ ಸಾರ್ವಜನಿಕವಾಗಿ ಅವರು ನಡೆದುಕೊಳ್ಳುವ, ಮಾತನಾಡಿರುವ ರೀತಿ, ಈಗ ನಡೆದಿರುವ ಪ್ರಕರಣಗಳು, ಅವರ ಸ್ನೇಹಿತರು ಮತ್ತು ಆಪ್ತ ವಲಯ ಇದನ್ನೆಲ್ಲ ಗಮನಿಸಿ ದರ್ಶನ್ ಮೇಲೆ ರೌಡಿ ಶೀಟ್ ತೆರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಪೊಲೀಸರು ಶೀಘ್ರವೇ ನಿರ್ಣಯ ಪ್ರಕಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ