ರೇಣುಕಾ ಸ್ವಾಮಿ ಪ್ರಕರಣ: ಪ್ರಮುಖ ಸಾಕ್ಷಿ ಪತ್ತೆಗೆ ಅಗ್ನಿಶಾಮಕ ದಳದ ಸಹಾಯ
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಮುಖ ಸಾಕ್ಷ್ಯಗಳು ಪೊಲೀಸರ ವಶಕ್ಕೆ ಸಿಗಬೇಕಿದೆ. ಈ ಎರಡು ಸಾಕ್ಷ್ಯಗಳ ಹುಡುಕಾಟಕ್ಕಾಗಿ ಪೊಲೀಸರು ಶತಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಸಾಕ್ಷ್ಯಗಳ ಹುಡುಕಾಟಕ್ಕೆ ಅಗ್ನಿಶಾಮಕ ದಳದ ನೆರವನ್ನು ಸಹ ಪಡೆಯಲಿದ್ದಾರೆ.
![ರೇಣುಕಾ ಸ್ವಾಮಿ ಪ್ರಕರಣ: ಪ್ರಮುಖ ಸಾಕ್ಷಿ ಪತ್ತೆಗೆ ಅಗ್ನಿಶಾಮಕ ದಳದ ಸಹಾಯ](https://images.tv9kannada.com/wp-content/uploads/2024/06/darshan-pavi.jpg?w=1280)
ರೇಣುಕಾ ಸ್ವಾಮಿ (Renuka Swamy) ಪ್ರಕರಣದಲ್ಲಿ ಪೊಲೀಸರು ಚುರುಕಾಗಿ ತನಿಖೆ ನಡೆಸುತ್ತಿದ್ದಾರೆ. ಎಲ್ಲ ಕೋನಗಳಿಂದಲೂ ತನಿಖೆ ಜಾರಿಯಲ್ಲಿದ್ದು, ಈ ವರೆಗೂ 118 ವಸ್ತುಗಳನ್ನು ಪೊಲೀಸರು ವಿವಿಧ ಸ್ಥಳಗಳಿಂದ ವಶಪಡಿಸಿಕೊಂಡಿದ್ದಾರೆ. ಬೆಂಗಳೂರು, ಮೈಸೂರು, ಚಿತ್ರದುರ್ಗಗಳಲ್ಲಿ ಸ್ಥಳ ಮಹಜರು ಮಾಡಿದ್ದಾರೆ. ಆರೋಪಿಗಳನ್ನು ಮಾತ್ರವೇ ಅಲ್ಲದೆ ಅವರಿಗೆ ಸಂಬಂಧಿಸಿದವರ ವಿಚಾರಣೆಯೂ ಚಾಲ್ತಿಯಲ್ಲಿದೆ. ಆದರೆ ಪೊಲೀಸರಿಗೆ ಮಹತ್ತರವಾದ ಸಾಕ್ಷ್ಯವೊಂದು ಇನ್ನೂ ಕೈಗೆ ದೊರೆತಿಲ್ಲ. ಹೌದು, ಪೊಲೀಸರಿಗೆ ರೇಣುಕಾ ಸ್ವಾಮಿಯ ಮೊಬೈಲ್ ಫೋನ್ ದೊರೆತಿಲ್ಲ. ಇದಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ಇದೀಗ ಅಗ್ನಿಶಾಮಕ ಇಲಾಖೆಯ ನೆರವನ್ನು ಪೊಲೀಸರು ಪಡೆಯುತ್ತಿದ್ದಾರೆ.
ಈ ಪೊಲೀಸರಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ರೇಣುಕಾ ಸ್ವಾಮಿಯ ಶವವನ್ನು ಸುಮನಹಳ್ಳಿ ಮೋರಿಗೆ ಎಸೆದಾಗಲೇ ಪ್ರಕರಣದ ಏ5 ಆರೋಪಿ ರಘು ರೇಣುಕಾ ಸ್ವಾಮಿಯ ಮೊಬೈಲ್ ಫೋನ್ ಅನ್ನು ಅದೇ ಮೋರಿಗೆ ಎಸೆದಿದ್ದಾನೆ. ರಾಘು ಮೊಬೈಲ್ ಅನ್ನು ಮತ್ತೊಬ್ಬ ಆರೋಪಿ ಪ್ರದೋಶ್ ಅದೇ ಮೋರಿಗೆ ಎಸೆದಿದ್ದಾನೆ. ಈ ಮೊಬೈಲ್ ಫೋನ್ಗಳು ಇನ್ನೂ ಪೊಲೀಸರ ಕೈಗೆ ದೊರಕಿಲ್ಲ. ಇದಕ್ಕಾಗಿ ಹುಡುಕಾಟ ಜಾರಿನಲ್ಲಿದೆ. ಬಿಬಿಎಂಪಿ ಸಿಬ್ಬಂದಿಯ ನೆರವಿನಿಂದ ಸುಮನಹಳ್ಳಿ ಮೋರಿಯಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಆದರೆ ಈವರೆಗೆ ಫೋನ್ ಲಭ್ಯವಾಗಿಲ್ಲ.
ಇದನ್ನೂ ಓದಿ:ರೇಣುಕಾ ಸ್ವಾಮಿ ಕೊಲೆ: ಸ್ವ-ಇಚ್ಛಾ ಹೇಳಿಕೆ ದಾಖಲಿಸಿದ ದರ್ಶನ್
ಇದೀಗ ಫೋನ್ ಹುಡುಕಾಟಕ್ಕಾಗಿ ಪೊಲೀಸರು ಅಗ್ನಿಶಾಮಕ ದಳದ ನೆರವು ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಪ್ರಸ್ತುತ ಬಿಬಿಎಂಪಿ ಸ್ವಚ್ಛತಾ ಕಾರ್ಮಿಕರ ನೆರವು ಪಡೆದು ಮೊಬೈಲ್ ಫೋನ್ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈಗ ಅಗ್ನಿಶಾಮಕ ದಳದ ನೆರವು ಪಡೆದು ಮೋರಿಯನ್ನು ಜಾಲಾಡಲಾಗುತ್ತಿದೆ. ಈ ಎರಡು ಮೊಬೈಲ್ ಫೋನ್ಗಳು ಪ್ರಕರಣದ ತನಿಖೆಯಲ್ಲಿ ಮಹತ್ವದ ಪಾತ್ರವಹಿಸಲಿದ್ದು, ಇವುಗಳ ಸಂಗ್ರಹ ಪೊಲೀಸರಿಗೆ ಅತ್ಯಂತ ಮಹತ್ವದ್ದಾಗಿದೆ.
ರೇಣುಕಾ ಸ್ವಾಮಿ ಮೊಬೈಲ್ನಲ್ಲಿ ಪವಿತ್ರಾ ಗೌಡಗೆ ಕಳಿಸಿದ ಚಿತ್ರ, ಸಂದೇಶ ಹಾಗೂ ಅಪಹರಣದ ದಿನ ಆತನಿಗೆ ಬಂದ ಕರೆಗಳು ಇತ್ಯಾದಿ ಮಾಹಿತಿಗಳು ಇದ್ದರೆ, ಆರೋಪಿ ರಘು ಮೊಬೈಲ್ನಲ್ಲಿ ರೇಣುಕಾ ಸ್ವಾಮಿ ಮೇಲೆ ಮಾಡಿದ ಹಲ್ಲೆಯ ವಿಡಿಯೋ ಇದೆ ಎನ್ನಲಾಗುತ್ತಿದೆ. ರೇಣುಕಾ ಸ್ವಾಮಿ ಮೇಲೆ ದರ್ಶನ್ ಹಾಗೂ ಗ್ಯಾಂಗ್ ಮಾಡಿದ ಹಲ್ಲೆಯನ್ನು ಮೊಬೈಲ್ನಲ್ಲಿ ರಘು ರೆಕಾರ್ಡ್ ಮಾಡಿಕೊಂಡಿದ್ದ ಎನ್ನಲಾಗುತ್ತಿದ್ದು, ಅದೇ ಕಾರಣಕ್ಕೆ ಆತನ ಮೊಬೈಲ್ ಅನ್ನು ಪ್ರದೋಶ್ ಮೋರಿಗೆ ಎಸದಿದ್ದ. ಒಂದೊಮ್ಮೆ ರಘುವಿನ ಮೊಬೈಲ್ ಪೊಲೀಸರಿಗೆ ದೊರೆತಲ್ಲಿ ಅದು ಪ್ರಕರಣಕ್ಕೆ ದೊಡ್ಡ ತಿರುವನ್ನು ನೀಡಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ