ದರ್ಶನ್ ಮತ್ತೆ ಜೈಲಿಗೆ: ಬೇಸರವಾಯ್ತು ಎಂದ ನಟಿ ರಮ್ಯಾ

Darshan Thoogudeepa: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇನ್ನೂ ಕೆಲ ಆರೋಪಿಗಳು ಮತ್ತೆ ಜೈಲು ಸೇರಿದ್ದಾರೆ. ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್​​ನಲ್ಲಿ ಆರಂಭವಾದಾಗಿನಿಂದಲೂ ಆ ಬಗ್ಗೆ ಮಾತನಾಡುತ್ತಿದ್ದ ನಟಿ ರಮ್ಯಾ, ದರ್ಶನ್ ಜಾಮೀನು ರದ್ದಾದ ಬಳಿಕ ಸುಪ್ರೀಂಕೋರ್ಟ್​ನ ತೀರ್ಪಿನ ಬಗ್ಗೆ ದೀರ್ಘ ಆಡಿಯೋ ಸಂದೇಶ ಹಂಚಿಕೊಂಡಿದ್ದಾರೆ.

ದರ್ಶನ್ ಮತ್ತೆ ಜೈಲಿಗೆ: ಬೇಸರವಾಯ್ತು ಎಂದ ನಟಿ ರಮ್ಯಾ
Darshan Ramya

Updated on: Aug 16, 2025 | 3:43 PM

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಕಳೆದ ಬಾರಿಗಿಂತಲೂ ಈ ಬಾರಿಯ ಜೈಲು ವಾಸ ಹೆಚ್ಚು ಸುದೀರ್ಘವಾಗಿರಲಿದೆ ಎನ್ನಲಾಗುತ್ತಿದೆ. ದರ್ಶನ್ ಜೈಲು ಸೇರುವ ಕೆಲ ದಿನಗಳ ಹಿಂದಷ್ಟೆ ನಟಿ ರಮ್ಯಾ, ದರ್ಶನ್ ಪ್ರಕರಣದ ಬಗ್ಗೆ ಆಡಿದ್ದ ಮಾತಿನಿಂದಾಗಿ ದರ್ಶನ್ ಅಭಿಮಾನಿಗಳಿಂದ ತೀವ್ರ ನಿಂದನೆ ಎದುರಿಸಬೇಕಾಯ್ತು. ದರ್ಶನ್ ಅಭಿಮಾನಿಗಳ ವಿರುದ್ಧ ದೂರು ನೀಡಿದ್ದರು ನಟಿ. ಅದರ ಬೆನ್ನಲ್ಲೆ ಕೆಲವರ ಬಂಧನವೂ ಆಯ್ತು. ಇದೀಗ ರಮ್ಯಾ ಎಣಿಸಿದ್ದಂತೆ ಮತ್ತೆ ದರ್ಶನ್ ಬಂಧನವಾಗಿದೆ. ಆದರೆ ಇದು ರಮ್ಯಾಗೆ ಖುಷಿ ತಂದಿಲ್ಲವಂತೆ ಬದಲಿಗೆ ಬೇಸರವೇ ಆಗಿದೆಯಂತೆ.

ದರ್ಶನ್ ಜಾಮೀನು ರದ್ದಾದ ಬಗ್ಗೆ ದೀರ್ಘವಾದ ಆಡಿಯೋ ಸಂದೇಶವನ್ನು ರಮ್ಯಾ ಹಂಚಿಕೊಂಡಿದ್ದು, ಸುಪ್ರೀಂ ಕೋರ್ಟ್​​ ತೀರ್ಪು ಬಂದಾಗ ನನಗೆ ಮಿಶ್ರ ಪ್ರತಿಕ್ರಿಯೆ ಉಂಟಾಯ್ತು, ಮೊದಲಿಗೆ ತುಸು ಬೇಜಾರು ಸಹ ಆಯ್ತು ಏಕೆಂದರೆ ದರ್ಶನ್ ನನಗೆ ಗೊತ್ತಿರುವವರು, ಅವರೊಟ್ಟಿಗೆ ನಾನು ಕೆಲಸ ಮಾಡಿದ್ದೇನೆ. ಅವರ ಜೀವನ ಅವರು ಹಾಳು ಮಾಡಿಕೊಂಡರು ಎಂಬುದು ನನಗೆ ಬೇಜಾರು ತರಿಸಿದೆ. ನಾವು ಒಟ್ಟಿಗೆ ಕೆಲಸ ಮಾಡುವಾಗ ಕೆಲವು ವಿಷಯಗಳನ್ನು ಅವರು ನನ್ನೊಟ್ಟಿಗೆ ಹಂಚಿಕೊಂಡಿದ್ದರು. ಚಿತ್ರರಂಗದಲ್ಲಿ ಈ ಹಂತಕ್ಕೆ ಬೆಳೆಯಲು ತಾವು ಪಟ್ಟ ಕಷ್ಟಗಳನ್ನು ಅವರು ನನ್ನ ಬಳಿ ಹೇಳಿಕೊಂಡಿದ್ದರು. ಅದನ್ನೆಲ್ಲ ಕೇಳಿ ನನಗೆ ಅವರ ಬಗ್ಗೆ ಬಹಳ ಹೆಮ್ಮೆ ಇತ್ತು’ ಎಂದಿದ್ದಾರೆ ರಮ್ಯಾ.

‘ಆದರೆ ಇತ್ತೀಚೆಗೆ ಅವರ ನಡವಳಿಕೆಗಳನ್ನು ನೋಡಿ ತುಸು ಬೇಸರ ಆಗಿತ್ತು. ಅವರ ಅಕ್ಕ-ಪಕ್ಕ ಯಾರೂ ಒಳ್ಳೆಯವರು ಇಲ್ಲವೇನೋ ಗೊತ್ತಿಲ್ಲ. ಅವರನ್ನು ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋಗುವವರು ಇರಲಿಲ್ಲ ಅನಿಸುತ್ತದೆ. ಒಬ್ಬ ವ್ಯಕ್ತಿ ಒಂದು ಹಂತಕ್ಕೆ ಏರಿದ ಬಳಿಕ ಒಳ್ಳೆಯ ಸಲಹೆಗಾರರು ಅಕ್ಕ-ಪಕ್ಕ ಇರಲೇ ಬೇಕು, ಇಲ್ಲವಾದರೆ ಹಾದಿ ತಪ್ಪಿ ಬಿಡುತ್ತಾರೆ’ ಎಂದಿದ್ದಾರೆ ರಮ್ಯಾ.

ಇದನ್ನೂ ಓದಿ:ಜೈಲಿನ ಕಠಿಣ ನಿಯಮದಿಂದ ಎರಡೇ ದಿನಕ್ಕೆ ಸುಸ್ತಾದ ದರ್ಶನ್

ಪವಿತ್ರಾ ಗೌಡ ಬಗ್ಗೆಯೂ ಮಾತನಾಡಿರುವ ರಮ್ಯಾ, ‘ಈ ಪ್ರಕರಣ ಆಗುವ ಮುಂಚೆ ನನಗೆ ಪವಿತ್ರಾ ಗೌಡ ಯಾರು ಎಂಬುದು ಗೊತ್ತಿರಲಿಲ್ಲ. ಆದರೆ ಅವರೂ ಒಬ್ಬ ತಾಯಿ, ಅವರಿಗೆ ಒಬ್ಬ ಮಗಳಿದ್ದಾಳೆ. ಆದರೆ ಏನು ಮಾಡುವುದು? ಕಾನೂನನ್ನು ಕೈಗೆತ್ತಿಕೊಳ್ಳದೆ, ಕಾನೂನಿನ ಪ್ರಕಾರ ನಾವುಗಳು ನಡೆದುಕೊಂಡಿದ್ದಿದ್ದರೆ ಇದೆಲ್ಲವೂ ಆಗುತ್ತಿರಲಿಲ್ಲ. ಏನೇ ಕೆಲಸ ಮಾಡುವ ಮುಂಚೆ ನಾವು ಯೋಚನೆ ಮಾಡಬೇಕು ವಿಶೇಷವಾಗಿ ನಮ್ಮ ಕುಟುಂಬದ ಬಗ್ಗೆ ನಮ್ಮ ಮಕ್ಕಳ ಬಗ್ಗೆ. ಎಲ್ಲರಿಗೂ ಕೋಪ ಬರುತ್ತದೆ, ಎಲ್ಲರ ಜೀವನದಲ್ಲಿ ಎಲ್ಲ ಸಮಯದಲ್ಲೂ ಒಳ್ಳೆಯ ಘಟನೆಗಳೇ ನಡೆಯುವುದಿಲ್ಲ. ಆದರೆ ನಾವು ಕಾನೂನು ಕೈಗೆ ತೆಗೆದುಕೊಳ್ಳಬಾರದು’ ಎಂದಿದ್ದಾರೆ.

ರೇಣುಕಾ ಸ್ವಾಮಿ ಕುಟುಂಬದ ಬಗ್ಗೆಯೂ ಮಾತನಾಡಿ, ‘ರೇಣುಕಾ ಸ್ವಾಮಿ ಕುಟುಂಬದವರು ಬಡವರು, ರೇಣುಕಾ ಸ್ವಾಮಿ ಮಡದಿಗೆ ಇತ್ತೀಚೆಗಷ್ಟೆ ಮಗು ಸಹ ಆಗಿದೆ ಸುಪ್ರೀಂಕೋರ್ಟ್​ನ ಈ ತೀರ್ಪಿನಿಂದ ಅವರಿಗೆ ನ್ಯಾಯ ದೊರಕುತ್ತದೆ ಎಂಬ ಭರವಸೆ ಮೂಡಿದೆ ಎಂಬುದು ನನ್ನ ಅಭಿಪ್ರಾಯ’ ಎಂದಿದ್ದಾರೆ ನಟಿ ರಮ್ಯಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ