ದಾಸನಿಗೆ ಜೈಲೂಟವೇ ಗತಿ: ರೇಣುಕಾಸ್ವಾಮಿ ಕೇಸ್​ನಲ್ಲಿ ದರ್ಶನ್​ಗೆ ಬಿಗ್ ಶಾಕ್ ಕೊಟ್ಟ ಕೋರ್ಟ್​

ಜೈಲಿನಲ್ಲಿರುವ ದರ್ಶನ್​ ಅವರಿಗೆ ಮನೆ ಊಟ ತರಿಸಲು ಕೋರ್ಟ್​ ಅನುಮತಿ ನೀಡಿಲ್ಲ. ಅನಾರೋಗ್ಯದ ಕಾರಣದಿಂದ ಮನೆಯ ಊಟ ಬೇಕು ಎಂದು ದರ್ಶನ್​ ಕೇಳಿದ್ದರು. ಅಲ್ಲದೇ, ಬಟ್ಟೆ ಮತ್ತು ಹಾಸಿಗೆಯನ್ನೂ ಮನೆಯಿಂದ ತರಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಅವರು ಅರ್ಜಿ ಸಲ್ಲಿಸಿದ್ದರು. ಜುಲೈ 22ರಂದು ಅರ್ಜಿ ವಿಚಾರಣೆ ಮಾಡಲಾಗಿತ್ತು. ಇಂದು (ಜುಲೈ 25) ಇದರ ಆದೇಶ ಪ್ರಕಟ ಆಗಿದೆ.

ದಾಸನಿಗೆ ಜೈಲೂಟವೇ ಗತಿ: ರೇಣುಕಾಸ್ವಾಮಿ ಕೇಸ್​ನಲ್ಲಿ ದರ್ಶನ್​ಗೆ ಬಿಗ್ ಶಾಕ್ ಕೊಟ್ಟ ಕೋರ್ಟ್​
ದರ್ಶನ್​
Edited By:

Updated on: Jul 25, 2024 | 3:48 PM

ನಟ ದರ್ಶನ್​ ಅವರಿಗೆ ಜೈಲಿನ ಊಟವೇ ಗತಿ ಆಗಿದೆ. ಮನೆ ಊಟ, ಹಾಸಿಗೆ, ಬಟ್ಟೆ ಬೇಕು ಎಂದು ದರ್ಶನ್​ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್​ ವಜಾ ಮಾಡಿದೆ. ಈ ಕುರಿತಂತೆ 24ನೇ ಎಸಿಎಂಎಂ ಕೋರ್ಟ್ ಇಂದು (ಜು.25) ಆದೇಶ ನೀಡಿದೆ. ಜೈಲೂಟದಿಂದ ಅಜೀರ್ಣ, ಅತಿಸಾರ ಆಗಿದೆ ಎಂದು ಕಾರಣ ನೀಡಿ ದರ್ಶನ್ ಅವರು ಮನೆಯ ಊಟ ತರಿಸಲು ಅನುಮತಿ ಕೇಳಿದ್ದರು. ಜೈಲು ಅಧಿನಿಯಮ ಉಲ್ಲೇಖಿಸಿ ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಪೊಲೀಸರ ಪರ ವಿಶೇಷ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು. ಇನ್ನೂ ಹಲವು ದಿನಗಳ ಕಾಲ ದರ್ಶನ್​ ಜೈಲೂಟ ಮಾಡುವುದು ಅನಿವಾರ್ಯ ಆಗಿದೆ.

ಜೈಲೂಟದಿಂದ ದರ್ಶನ್​ಗೆ ಯಾವುದೇ ಸಮಸ್ಯೆ ಆಗಿಲ್ಲ. ಶೂಟಿಂಗ್ ವೇಳೆ ಆದ ಗಾಯದ ನೋವಿನ ಬಗ್ಗೆ ಮಾತ್ರ ವೈದ್ಯರು ಸಲಹೆ ನೀಡಿದ್ದಾರೆ. ಜೈಲಿನ ನಿಯಮಾವಳಿಯಲ್ಲಿ ಮನೆಯೂಟಕ್ಕೆ ಅವಕಾಶವಿಲ್ಲವೆಂದು ಆಕ್ಷೇಪಣೆ ಸಲ್ಲಿಸಲಾಗಿತ್ತು. ಎರಡೂ ಕಡೆ ವಾದ ಆಲಿಸಿರುವ ಜಡ್ಜ್ ವಿಶ್ವನಾಥ್ ಸಿ ಗೌಡರ್ ಈಗ ಆದೇಶ ನೀಡಿದ್ದಾರೆ.

ಕೊಲೆ ಆರೋಪಿಗಳಿಗೆ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ. ಜೈಲು ನಿಯಮಾವಳಿ 728ರಲ್ಲಿ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ. ಹೀಗಾಗಿ ದರ್ಶನ್ ಕೊಲೆ ಆರೋಪಿ ಆಗಿರುವುದರಿಂದ ಈ ಸೌಲಭ್ಯ ಕೊಡಲಾಗುವುದಿಲ್ಲ. ದರ್ಶನ್​ಗೆ ಈಗ ಉಳಿದಿರುವ ಮಾರ್ಗ ಹೈಕೋರ್ಟ್ ಮೊರೆ ಹೋಗುವುದು. ಈಗಾಗಲೇ ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆ ಜುಲೈ 29 ಕ್ಕೆ ನಿಗದಿಯಾಗಿದೆ.

ಇದನ್ನೂ ಓದಿ: ದರ್ಶನ್​ ಇರುವ ಜೈಲು ಕೊಠಡಿ ಹೇಗಿದೆ? ಟಿವಿ ಇದೆಯೇ? ಖೈದಿಯೇ ಹೇಳಿದ ವಿವರ ಕೇಳಿ..

ರೇಣುಕಾ ಸ್ವಾಮಿಯ ಹತ್ಯೆ ಪ್ರಕರಣದಲ್ಲಿ ಜೈಲು ಸೇರುವುದಕ್ಕೂ ಮೊದಲು ದರ್ಶನ್​ ಅವರ ಜೀವನ ಐಷಾರಾಮಿ ಆಗಿತ್ತು. ಪ್ರೊಟೀನ್​ಯುಕ್ತ ಆಹಾರವನ್ನು ಅವರು ಸೇವಿಸುತ್ತಿದ್ದರು. ಆದರೆ ಜೈಲಿನಲ್ಲಿ ಇದಕ್ಕೆ ಅವಕಾಶ ಸಿಕ್ಕಿಲ್ಲ. ಜೈಲಿನ ಊಟದಿಂದ ಅವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗಿವೆ. ಅಲ್ಲದೇ, ಅವರ ದೇಹದ ತೂಕ ಕೂಡ ಕಡಿಮೆ ಆಗಿದೆ ಎನ್ನಲಾಗಿದೆ. ದರ್ಶನ್​ ಮೇಲೆ ಗಂಭೀರ ಆರೋಪ ಇರುವುದರಿಂದ ಮನೆಯೂಟ ಪಡೆಯಲು ಅವಕಾಶ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:37 pm, Thu, 25 July 24

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us