‘ದರ್ಶನ್ ಮೇಲಿನ ಗೌರವಕ್ಕೆ ನಾನು ಊರು ಬಿಟ್ಟೆ’; ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಶಾಕಿಂಗ್ ಹೇಳಿಕೆ

ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಹಲವು ವರ್ಷಗಳ ನಂತರ ಮರಳಿ ಪತ್ತೆಯಾಗಿ, ತಾವು ನಾಪತ್ತೆಯಾಗಿದ್ದರ ಹಿಂದಿನ ಕಾರಣ ವಿವರಿಸಿದ್ದಾರೆ. ಸಾಲಬಾಧೆ, ವ್ಯವಹಾರದಲ್ಲಿ ನಷ್ಟ ಅನುಭವಿಸಿ ಹಲವು ನಗರಗಳಲ್ಲಿ ಕೆಲಸ ಮಾಡಿದ್ದರು. ಡಿ ಬಾಸ್ ದರ್ಶನ್ ಅವರಿಂದ 1 ಕೋಟಿ ಹಣ ಪಡೆದಿದ್ದರು. ತಮ್ಮ ಕಷ್ಟದ ದಿನಗಳ ಸತ್ಯ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡಿದ್ದಕ್ಕೆ ಕ್ಷಮೆ ಕೇಳಿದ್ದಾರೆ.

‘ದರ್ಶನ್ ಮೇಲಿನ ಗೌರವಕ್ಕೆ ನಾನು ಊರು ಬಿಟ್ಟೆ’; ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಶಾಕಿಂಗ್ ಹೇಳಿಕೆ
ಮಲ್ಲಿಕಾರ್ಜುನ್- ದರ್ಶನ್

Updated on: Apr 16, 2026 | 12:16 PM

ಇಷ್ಟು ವರ್ಷ ನಾಪತ್ತೆ ಆಗಿದ್ದ ದರ್ಶನ್ (Darshan) ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಅವರು ಈಗ ಮರಳಿ ಪತ್ತೆ ಆಗಿದ್ದಾರೆ. ಅವರು ಸುದ್ದಿಗೋಷ್ಠಿ ನಡೆಸಿ ಅಂದು ನಡೆದ ಘಟನೆ ವಿವರಿಸಿದ್ದಾರೆ. ಈ ವೇಳೆ ಅವರು ಇಷ್ಟು ವರ್ಷಗಳ ಕಾಲ ಎಲ್ಲಿದ್ದರು ಎಂಬ ಸತ್ಯವನ್ನು ರಿವೀಲ್ ಮಾಡಿದ್ದಾರೆ. ಅಲ್ಲದೆ, ಎಲ್ಲವನ್ನೂ ಬಿಟ್ಟು ಹೋಗುವುದರ ಹಿಂದಿನ ಉದ್ದೇಶ ಏನು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ.

‘ನನ್ನಿಂದ ಎಷ್ಟೋ ಜನಕ್ಕೆ ತೊಂದರೆ ಆಗಿದೆ, ನೋವಾಗಿದೆ. ಅವರೆಲ್ಲರಿಗೂ ಕ್ಷಮೆ ಕೇಳುತ್ತೇನೆ’ ಎಂದು ಮಾತು ಆರಂಭಿಸಿದರು. ‘ಇಂಜಿನಿಯರಿಂಗ್ ಮುಗಿಸಿ, ಅಸಿಸ್ಟಂಟ್ ಡೈರೆಕ್ಟರ್ ಆದ ನಂತರ ದರ್ಶನ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡಿದೆ. ಮೊದಲ ಸಲ ಸಿನಿಮಾ ಮಾಡಿದಾಗ ಅಂದುಕೊಂಡ ರೀತಿಯಲ್ಲಿ ಕೈ ಹಿಡಿಯಲಿಲ್ಲ. ಸಿನಿಮಾ ನಿರ್ಮಾಣ ಮಾಡಿದೆ, ಡಿಸ್ಟ್ರಿಬ್ಯೂಷನ್ ಮಾಡಿದೆ, ಹೋಟೆಲ್ ಬಿಸ್ನೆಸ್ ಮಾಡಿದೆ. ಯಾವುದೂ ಕೈ ಹಿಡಿಯಲಿಲ್ಲ’ ಎಂದು ಮಲ್ಲಿಕಾರ್ಜುನ ಹೇಳಿದರು.

ನಂತರ ಅವರು ಹಲವು ವಿಷಯದಲ್ಲಿ ಮಲ್ಲಿಕಾರ್ಜುನ ಕೈ ಸುಟ್ಟುಕೊಂಡರು. ಅವರು ಮೈತುಂಬ ಸಾಲ ಮಾಡಿಕೊಂಡರು. ನಂತರ ಸಾಯುವ ನಿರ್ಧಾರಕ್ಕೂ ಬಂದರು. ಆದರೆ, ಸಾಯುವ ನಿರ್ಧಾರದಿಂದ ಅವರು ಹಿಂದೆ ಸರಿದರು. ‘ಅಂದು ಕುಂದಾಪರದಿಂದ ಹೊರಟೆ. ಸವದತ್ತಿಗೆ ಬಂದೆ. ನನ್ನ ಗೆಳೆಯನ ಬಳಿ ಹಣ ಪಡೆದೆ. ಕೊಲ್ಲಾಪುರ, ಸೊಲ್ಲಾಪುರ, ಉತ್ತರ ಭಾರತ ಸೇರಿದಂತೆ ಅನೇಕ ಕಡೆ ಸುತ್ತಾಡಿದೆ. ಹಲವು ಜಾಗದಲ್ಲಿ ಕೆಲವು ದಿನ ಇರ್ತಿದ್ದೆ, ಬಿಟ್ಟು ಹೋಗ್ತಿದ್ದೆ. ಹೋಟೆಲ್, ರೆಸಾರ್ಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಕೆಲಸ ಮಾಡಿದೆ’ ಎಂದು ಅವರು ಹೇಳಿದ್ದಾರೆ.

‘ನನಗೆ ನೇಪಾಳದಲ್ಲಿ ಒಬ್ಬ ಗೆಳೆಯನಿದ್ದ. ಅವನ ಹೋಟೆಲ್ ಇತ್ತು. ಅಲ್ಲಿ ಸಾಕಷ್ಟು ಸಮಯ ಕಳೆದೆ. ನಾನು ಬದುಕಿದ್ದೀನಿ ಅಂತ ಮಿಸಸ್​​ಗೆ ಲೆಟರ್ ಬರೆದೆ. ತಾಯಿಗೂ ಬರೆದೆ. ನನಗೆ ಸಾಡೆಸಾತ್ ಇತ್ತು. ಈ ಕಾರಣಕ್ಕೆ ಅದು ಮುಗಿದ ಮೇಲೆ ಬಂದೆ. ಸತ್ಯ ಒಪ್ಪಿಕೊಳ್ಳಬೇಕು ಅಂತ ಅನಿಸಿತು. ತಂದೆ-ತಾಯಿ ತೀರಿದಾಗ ಬರೋಕೆ ಆಗಿಲ್ಲ. ಒಂದು ಹಿಡಿ ಮಣ್ಣು ಹಾಕೋಕೂ ಆಗಿಲ್ಲ. ಈಗ ನನಗೆ ತಪ್ಪಿತಸ್ಥ ಭಾವನೆ ಕಾಡುತ್ತಾ ಇತ್ತು’ ಎಂದು ಮಲ್ಲಿಕಾರ್ಜುನ ಹೇಳಿದರು.

‘ದಿನಕರ್ ಅವರನ್ನು ಕಳೆದ ವರ್ಷ ಭೇಟಿ ಮಾಡಿದೆ. ದರ್ಶನ್​​ನ ಭೇಟಿ ಮಾಡಬೇಕಿತ್ತು. ಆಗ ನನಗೆ ಪ್ಯಾರಲಿಸಿಸ್ ಆಯ್ತು. 7 ತಿಂಗಳು ಬೆಡ್​ರೆಸ್ಟ್ ಮಾಡಬೇಕಾಯಿತು. ಮತ್ತೆ ರೆಡಿ ಆದೆ. ಒಂದೂವರೆ ತಿಂಗಳ ಹಿಂದೆ ಬಂದು ಸಾಲ ಕೊಟ್ಟ ಎಲ್ಲರನ್ನೂ ಕೇಳಿಕೊಂಡಿದ್ದೇನೆ. ಸೋತಿದ್ದೇನೆ, ಸತ್ತಿಲ್ಲ ಎಂದು ಹೇಳಿದೆ. ಎಲ್ಲರೂ ಪಾಸಿಟಿವ್​ ಆಗಿ ಮಾತನಾಡಿ ಧೈರ್ಯ ಹೇಳಿದ್ದಾರೆ’ ಎಂದು ಅವರು ವಿವರಿಸಿದರು.

ಇದನ್ನೂ ಓದಿ: ನಾಪತ್ತೆ ಆಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ದಿಢೀರ್ ಪತ್ತೆ; ಹೇಳಿದ್ದೇನು?

‘ ಸಾಲ ಮಾಡಿಕೊಂಡಾಗ ದರ್ಶನ್ ಬಳಿ 1 ಕೋಟಿ ರೂಪಾಯಿ ಸಹಾಯ ಕೇಳಿದೆ. ಅವರು ಕೊಟ್ಟರು. ಮತ್ತೆ ಕೇಳೋಕೆ ಮನಸ್ಸು ಬರಲಿಲ್ಲ. ನಾನು ಎಲ್ಲಿದ್ದೇನೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ತುಗುದೀಪ ಪ್ರೊಡಕ್ಷನ್ಸ್ ಚೆನ್ನಾಗಿ ನೋಡಿಕೊಂಡಿದೆ. ನಾನು ಅವರಿಗೆ ಮೋಸ ಮಾಡಿಲ್ಲ. ದರ್ಶನ್ ಬಳಿ ಕಷ್ಟ ಎಂದು ಹಣ ತೆಗೆದುಕೊಂಡಿದ್ದು ಅಷ್ಟೇ ಹೊರತು, ಮತ್ತೆ ಯಾವಾಗಲೂ ಹಣ ಮಾಡಿಲ್ಲ’ ಎಂದಿದ್ದಾರೆ ಅವರು.

‘ದರ್ಶನ್ ಅವರಿಗೆ ನಾನು ಸಾಲ ಮಾಡಿದ್ದೇನೆ ಅನ್ನೋದು ಗೊತ್ತಿತ್ತು. ಎಷ್ಟು ಸಾಲ ಮಾಡಿದ್ದೇನೆ ಅನ್ನೋದು ಗೊತ್ತಿರಲಿಲ್ಲ.  ಅವರನ್ನು ಫೇಸ್ ಮಾಡೋಕೆ ಆಗಲ್ಲ ಅನ್ನೋದು ಗೊತ್ತಾಯ್ತು. ಅವರ ಮೇಲಿನ ಅಪಾರ ಗೌರವ ಊರನ್ನು ಬಿಡುವಂತೆ ಮಾಡಿತು’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:14 pm, Thu, 16 April 26

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us