
ಡಾ. ರಾಜ್ಕುಮಾರ್ ಅವರ ಇಡೀ ಕುಟುಂಬವೇ ಕಲೆಗಾಗಿ ಮೀಸಲಾಗಿದೆ. ಅಣ್ಣಾವ್ರ ಮಕ್ಕಳು ಮಾತ್ರವಲ್ಲದೇ ಮೊಮ್ಮಕ್ಕಳು ಕೂಡ ಈಗ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಪುತ್ರರಾದ ವಿನಯ್ ರಾಜ್ಕುಮಾರ್, ಯುವ ರಾಜ್ಕುಮಾರ್ ಅವರು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ರಾಮ್ ಕುಮಾರ್-ಪೂರ್ಣಿಮಾ ದಂಪತಿಯ ಮಕ್ಕಳಾದ ಧನ್ಯಾ ರಾಮ್ ಕುಮಾರ್ ಹಾಗೂ ಧೀರೇನ್ ರಾಮ್ ಕುಮಾರ್ (Dheeren Ramkumar) ಅವರು ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಇಂದು (ಏ.29) ಧೀರೇನ್ ಜನ್ಮದಿನದ ಪ್ರಯುಕ್ತ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾಗೆ ಹಣ ಹೂಡುತ್ತಿರುವುದು ‘ಜೇಮ್ಸ್’ ಚಿತ್ರದ (James Movie) ನಿರ್ಮಾಪಕರು ಎಂಬುದು ವಿಶೇಷ. ಹೌದು, ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾವನ್ನು ನಿರ್ಮಿಸಿದ್ದ ಕಿಶೋರ್ ಪತ್ತಿಕೊಂಡ (Kishore Pathikonda) ಅವರೇ ಈಗ ಡಾ. ರಾಜ್ಕುಮಾರ್ ಮೊಮ್ಮಗ ಧೀರೇನ್ ರಾಮ್ ಕುಮಾರ್ ಜೊತೆಗೆ ಕೈ ಜೋಡಿಸಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಮೂಲಕ ಧೀರೆನ್ ಜನ್ಮದಿನಕ್ಕೆ ಶುಭ ಕೋರಲಾಗಿದೆ. ಈ ಸುದ್ದಿ ತಿಳಿದು ಡಾ. ರಾಜ್ ಫ್ಯಾಮಿಲಿ ಅಭಿಮಾನಿಗಳು ಖುಷಿ ಆಗಿದ್ದಾರೆ.
ಧೀರೇನ್ ರಾಮ್ ಕುಮಾರ್ ಅವರು ಈಗಾಗಲೇ ‘ಶಿವ 143’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರಕ್ಕೆ ಮಾನ್ವಿತಾ ಕಾಮತ್ ನಾಯಕಿ. ಕಾರಣಾಂತರಗಳಿಂದ ಚಿತ್ರದ ಕೆಲಸಗಳು ವಿಳಂಬ ಆದವು. ಇತ್ತೀಚೆಗೆ ‘ಶಿವ 143’ ಸಿನಿಮಾದ ಹೊಸ ಹಾಡು ಬಿಡುಗಡೆ ಆಗಿ, ಪಡ್ಡೆಗಳ ನಿದ್ದೆ ಕೆಡಿಸಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಆ ಸಿನಿಮಾ ರಿಲೀಸ್ ಆಗಲಿದೆ. ಅಷ್ಟರಲ್ಲಿ ಧೀರೇನ್ ಅವರು ಹೊಸ ಚಿತ್ರ ಅನೌನ್ಸ್ ಆಗಿದೆ.
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ನಟಿಸಿದ್ದ ‘ಜೇಮ್ಸ್’ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿತ್ತು. ಮೇಕಿಂಗ್ನಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ರೀತಿಯಲ್ಲಿ ಕಿಶೋರ್ ಪತ್ತಿಕೊಂಡ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಅವರ ನಿರ್ಮಾಣ ಸಂಸ್ಥೆಯಿಂದ ಮೂಡಿಬರಲಿರುವ ಎರಡನೇ ಸಿನಿಮಾಗೆ ಧೀರೇನ್ ರಾಮ್ಕುಮಾರ್ ನಾಯಕನಾಗಿರುವುದು ವಿಶೇಷ. ‘ಅಭಿಮಾನಿ ದೇವರುಗಳೇ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದದೊಂದಿಗೆ ನನ್ನ ಮುಂದಿನ ಹೆಜ್ಜೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಧೀರೇನ್ ಬರೆದುಕೊಂಡಿದ್ದಾರೆ.
ಈ ಸಿನಿಮಾಗೆ ಶಂಕರ್ ಗುರು ನಿರ್ದೇಶನ ಮಾಡಲಿದ್ದಾರೆ. ಡಾಲಿ ಧನಂಜಯ ನಟನೆಯ ‘ಬಡವ ರಾಸ್ಕಲ್’ ಸಿನಿಮಾಗೆ ನಿರ್ದೇಶನ ಮಾಡಿ ಗೆಲುವು ಕಂಡಿರುವ ಶಂಕರ್ ಗುರು ಅವರು ಈ ಬಾರಿ ಧೀರೇನ್ಗಾಗಿ ಯಾವ ರೀತಿಯ ಕಥೆ ಸಿದ್ಧಪಡಿಸಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ. ಚಿತ್ರದ ಪಾತ್ರವರ್ಗದಲ್ಲಿ ಬೇರೆ ಯಾರೆಲ್ಲ ಇರಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.
ಪುನೀತ್ ಧ್ವನಿಯೊಂದಿಗೆ ‘ಜೇಮ್ಸ್’ ಪ್ರದರ್ಶನ:
ಮಾ.17ರಂದು ‘ಜೇಮ್ಸ್’ ಸಿನಿಮಾ ಬಿಡುಗಡೆ ಆದಾಗ ಅದರಲ್ಲಿ ಪುನೀತ್ ರಾಜ್ಕುಮಾರ್ ಅವರ ಧ್ವನಿ ಇರಲಿಲ್ಲ. ಆದರೆ ನಂತರ ಹೊಸ ತಂತ್ರಜ್ಞಾನದ ಮೂಲಕ ಅಪ್ಪು ಧ್ವನಿ ಅಳವಡಿಸಿ ಮರುಬಿಡುಗಡೆ ಮಾಡಲಾಯಿತು. ಪುನೀತ್ ಧ್ವನಿ ಜೊತೆಗೆ ಸಿನಮಾ ನೋಡಿರುವ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಗಲ್ಲಾ ಪೆಟ್ಟಿಗೆಯಲ್ಲಿ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ನಿರ್ಮಾಪಕರಿಗೆ ಲಾಭ ತಂದುಕೊಟ್ಟಿದೆ. ಈಗ ಎರಡನೇ ಬಾರಿಗೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರು ಅಣ್ಣಾವ್ರ ಕುಟುಂಬದ ಜೊತೆ ಸಿನಿಮಾ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಾನ್ವಿತಾ-ಧೀರೇನ್ ಲಿಪ್ ಲಾಕ್; ಪ್ರೇಮಿಗಳ ದಿನಕ್ಕೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡ ಜೋಡಿ
Published On - 10:21 am, Fri, 29 April 22