ಕನ್ನಡದ ಚಿತ್ರರಂಗದ ಬಹದ್ದೂರ್ ಗಂಡು ಆ್ಯಕ್ಷನ್ ಪ್ರಿನ್ ಧ್ರುವ ಸರ್ಜಾ (Dhruva Sarja) ತಂದೆಯಾಗಿದ್ದಾರೆ. ಇಂದು ಅವರ ಧರ್ಮಪತ್ನಿ ಪ್ರೇರಣಾ ಶಂಕರ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯಲ್ಲಿರುವ ಧ್ರುವ ಸರ್ಜಾ ಅವರನ್ನು ನೋವೊಂದು ಕಾಡುತ್ತಿದೆ. ಅದುವೇ ಅಣ್ಣ, ಗೆಳೆಯ ಚಿರಂಜೀವಿ ಸರ್ಜಾ (Chiranjeevi Sarja) ಇಲ್ಲದಿರುವುದು. ಈ ಬಗ್ಗೆ ಮಾತನಾಡಿರುವ ಧ್ರುವ ಸರ್ಜಾ ಇಂತಹ ಖುಷಿಯ ಸಂದರ್ಭದಲ್ಲಿ ನಾನು ಅಣ್ಣ ಹಾಗೂ ಅಜ್ಜಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮನದ ನೋವನ್ನು ಹೊರಹಾಕಿದ್ದಾರೆ.
ನಾನು ಆಸೆ ಪಟ್ಟಂತೆ ಹೆಣ್ಣು ಮಗು ಆಗಿದೆ. ಇದು ತುಂಬಾ ಖುಷಿಯ ವಿಚಾರ. ಆದರೆ ಈ ಸಮಯದಲ್ಲಿ ನಮ್ಮ ಅಣ್ಣ, ಅಜ್ಜಿ ಇಲ್ಲದಿರುವುದು ನೋವಿನ ಸಂಗತಿ. ಅವರಿಬ್ಬರನ್ನು ನಾನು ತುಂಬಾ ಮಿಸ್ ಮಾಡಿ ಕೊಳ್ಳುತ್ತಿದ್ದೇನೆ ಎಂದು ಧ್ರುವ ಸರ್ಜಾ ಖುಷಿಯ ನಡುವೆ ಚಿರು ಹಾಗೂ ಅಜ್ಜಿಯನ್ನು ನೆನಪಿಸಿಕೊಂಡಿದ್ದಾರೆ.
ಇನ್ನು ಹೆಣ್ಣು ಮಗುವಿನ ಆಗಮನದ ಬಗ್ಗೆ ಮಾತನಾಡಿದ ಆ್ಯಕ್ಷನ್ ಪ್ರಿನ್ಸ್, ಸಾಮಾನ್ಯವಾಗಿ ಹೆಣ್ಣು ಮಕ್ಕಳಂದ್ರೆ ಒಂದು ಮರ್ಯಾದೆ ಇತ್ತು. ಆದರೀಗ ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ ಎಲ್ಲರ ಲೈಫ್ನಲ್ಲೂ ಏರಿಳಿತಗಳಿರುತ್ತೆ. ನಮ್ಮ ಜೀವನದಲ್ಲೂ ಅಂತಹ ಕಷ್ಟಗಳು ಎದುರಾಗಿತ್ತು. ಈ ಸಮಯದಲ್ಲಿ ಡಾಕ್ಟರ್ ಸಲಹೆಯಿಂದ ಮುದ್ದಾದ ಮಗು ನಮ್ಮ ಕೈ ಸೇರಿದೆ. ನನಗೆ ಆಶೀರ್ವದಿಸಿದಂತೆ ನನ್ನ ಮಗುವಿನ ಮೇಲೂ ಕೂಡ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಎಂದು ಅಭಿಮಾನಿಗಳಲ್ಲಿ ಧ್ರುವ ಸರ್ಜಾ ಮನವಿ ಮಾಡಿದ್ದಾರೆ.
2019 ರಲ್ಲಿ ಧ್ರುವ ಸರ್ಜಾ ಬಾಲ್ಯದ ಗೆಳೆತಿ ಪ್ರೇರಣಾರನ್ನು ವಿವಾಹವಾಗಿದ್ದರು. ಈ ಶುಭ ಸಮಾರಂಭದ ಬೆನ್ನಲ್ಲೇ, ಅಂದರೆ 2020 ರಲ್ಲಿ ಸರ್ಜಾ ಕುಟುಂಬದಿಂದ ಚಿರಂಜೀವಿ ಸರ್ಜಾ ಅಗಲಿದ್ದರು. ಇದಾದ ಬಳಿಕ ಸರ್ಜಾ ಕುಟುಂಬದಲ್ಲಿ ಯಾವುದೇ ಮಹತ್ವದ ಶುಭ ಸಮಾರಂಭ ನಡೆದಿರಲಿಲ್ಲ. ಇದೀಗ ಧ್ರುವ ಸರ್ಜಾ ದಂಪತಿಗಳ ಮೂಲಕ ಮತ್ತೊಮ್ಮೆ ಕುಟುಂಬದಲ್ಲಿ ಸಂತಸ ಮನೆ ಮಾಡಿರುವುದು ವಿಶೇಷ.
ಸದ್ಯ ಮಾರ್ಟಿನ್ ಚಿತ್ರದಲ್ಲಿ ತೊಡಗಿಸಿಕೊಂಡಿರುವ ಆ್ಯಕ್ಷನ್ ಪ್ರಿನ್ಸ್, ಶೀಘ್ರದಲ್ಲೇ ಜೋಗಿ ಪ್ರೇಮ್ ಅವರು ಆ್ಯಕ್ಷನ್ ಕಟ್ ಹೇಳಲಿರುವ ಮಾಸ್ ಮಸಾಲ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ.