ಮೊದಲ ಹಾಡಿನಿಂದ ಜೋರಾಗಲಿದೆ ‘ಕೆಡಿ’ ಅಬ್ಬರ; ಡಿ.24ಕ್ಕೆ ಶಿವ ಶಿವ ಸಾಂಗ್

ಜೋಗಿ ಪ್ರೇಮ್​ ನಿರ್ದೇಶನದ ಸಿನಿಮಾಗಳಲ್ಲಿ ಹಾಡಿಗೆ ಮೊದಲ ಆದ್ಯತೆ ಇರುತ್ತದೆ. ಈಗ ಅವರು ‘ಕೆಡಿ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದು, ಈ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆದಿದೆ. ಧ್ರುವ ಸರ್ಜಾ ನಟನೆಯ ಈ ಸಿನಿಮಾಗೆ ಅರ್ಜುನ್​ ಜನ್ಯ ಅವರು ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗೆ ‘ಕೆಡಿ’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು.

ಮೊದಲ ಹಾಡಿನಿಂದ ಜೋರಾಗಲಿದೆ ‘ಕೆಡಿ’ ಅಬ್ಬರ; ಡಿ.24ಕ್ಕೆ ಶಿವ ಶಿವ ಸಾಂಗ್
Dhruva Sarja, Jogi Prem, Suprith

Updated on: Dec 18, 2024 | 6:52 PM

‘ಆ್ಯಕ್ಷನ್​ ಪ್ರಿನ್ಸ್​’ ಧ್ರುವ ಸರ್ಜಾ ಮತ್ತು ಡೈರೆಕ್ಟರ್​ ಜೋಗಿ ಪ್ರೇಮ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ‘ಕೆಡಿ’ ಸಿನಿಮಾಗೆ ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಈ ನಡುವೆ ಸಿನಿಮಾದ ಪ್ರಚಾರದ ಕಡೆಗೂ ಚಿತ್ರತಂಡ ಗಮನ ಹರಿಸಿದೆ. ಹಾಡುಗಳ ಮೂಲಕ ಜನರನ್ನು ಸೆಳೆಯಲು ಪ್ಲ್ಯಾನ್ ಮಾಡಲಾಗಿದೆ. 80ರ ದಶಕ ಕಹಾನಿ ಈ ಸಿನಿಮಾದಲ್ಲಿದೆ. ಕೆಡಿ ಅಲಿಯಾಸ್ ಕಾಳಿದಾಸನಾಗಿ ಧ್ರುವ ಸರ್ಜಾ ಅವರು ಕಾಣಿಸಿಕೊಳ್ಳಲಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಡಿಸೆಂಬರ್​ 24ರಂದು ‘ಕೆಡಿ’ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಲಿದೆ.

ಸದ್ಯಕ್ಕೆ ‘ಕೆಡಿ’ ಚಿತ್ರತಂಡದವರು ಡಬ್ಬಿಂಗ್ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆಕಾಶ್​ ರೆಕಾರ್ಡಿಂಗ್ ಸ್ಟುಡಿಯೋದಲ್ಲೇ ಸುದ್ದಿಗೋಷ್ಠಿ ಮಾಡಲಾಯಿತು. ಈ ವೇಳೆ ನಿರ್ದೇಶಕ ಪ್ರೇಮ್, ನಟ ಧ್ರುವ ಸರ್ಜಾ ಹಾಗೂ ಕಾರ್ಯಕಾರಿ ನಿರ್ಮಾಪಕ ಸುಪ್ರೀತ್ ಅವರು ಹಾಜರಿದ್ದರು. ಸಿನಿಮಾದ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು. ಈ ಚಿತ್ರಕ್ಕೆ ಮಾತಿನ ಭಾಗದ ಶೂಟಿಂಗ್ ಮುಗಿದಿದೆ. ಸದ್ಯಕ್ಕೆ 2 ಸಾಂಗ್​ ಶೂಟಿಂಗ್ ಬಾಕಿ ಇದೆ.

‘ಒಂದು ಹಾಡನ್ನು ಸೆಟ್ ಹಾಕಿ ಚಿತ್ರೀಕರಣ ಮಾಡುತ್ತೇವೆ. ಮತ್ತೊಂದು ಹಾಡನ್ನು ವಿದೇಶದಲ್ಲಿ ಚಿತ್ರೀಕರಿಸುವ ಪ್ಲ್ಯಾನ್ ಇದೆ. ಡಿಸೆಂಬರ್​ 24ಕ್ಕೆ ನಮ್ಮ ಸಿನಿಮಾದ ‘ಶಿವ ಶಿವ..’ ಎಂಬ ಸಾಂಗ್​ ಆನಂದ್ ಆಡಿಯೋ ಮೂಲಕ ರಿಲೀಸ್​ ಆಗಲಿದೆ. ಆನಂದ್ ಮಾಸ್ಟರ್ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ಕೈಲಾಶ್ ಖೇರ್ ಮತ್ತು ನಾನು ಹಾಡಿದ್ದೇವೆ. ಇನ್ನುಳಿದ ಭಾಷೆಗಳಲ್ಲಿ ಅಲ್ಲಿನ ಗಾಯಕರು ಹಾಡಿದ್ದಾರೆ. ಸಿನಿಮಾದಲ್ಲಿ ಒಟ್ಟು 6 ಹಾಡುಗಳಿವೆ’ ಎಂದು ಜೋಗಿ ಪ್ರೇಮ್​ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮೊದಲ ಹಾಡನ್ನು ಬಿಡುಗಡೆ ಮಾಡಿ, ಎರಡನೇ ಹಾಡನ್ನು ಮುಂಬೈನಲ್ಲಿ ರಿಲೀಸ್ ಮಾಡಲು ‘ಕೆಡಿ’ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಈ ಚಿತ್ರಕ್ಕೆ ಒಟ್ಟು 150 ದಿನಗಳ ಚಿತ್ರೀಕರಣ ಮಾಡಲಾಗಿದೆ. ಧ್ರುವ ಸರ್ಜಾ ಅವರು ಪಾತ್ರಕ್ಕಾಗಿ 21 ದಿನಗಳಲ್ಲಿ 18 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಎಐ ತಂತ್ರಜ್ಞಾನದ ಮೂಲಕ ಧ್ರುವ ಅವರ ಧ್ವನಿಯನ್ನೇ ಎಲ್ಲ ಭಾಷೆಗಳಲ್ಲೂ ಬರುವಂತೆ ಪ್ರಯತ್ನಿಸಲಾಗುತ್ತಿದೆ. ಈ ಎಲ್ಲ ವಿಚಾರಗಳ ಬಗ್ಗೆ ಪ್ರೇಮ್ ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ‘ನೋಡಿ ಎಲ್ಲ ಕೆಡಿಗಳೇ..’: ಚಿಕ್ಕಮಗಳೂರಲ್ಲಿ ಪ್ರೇಮ್ ವಿಡಿಯೋ

ನಿರ್ಮಾಪಕ ಸುಪ್ರೀತ್ ಅವರು ಮಾತನಾಡಿ. ‘ಸಿನಿಮಾದ ಬ್ಯುಸಿನೆಸ್ ಬಗ್ಗೆ ನಾವು ಇನ್ನೂ ಕಮಿಟ್ ಆಗಿಲ್ಲ‌. ಸದ್ಯಕ್ಕೆ ಸಿನಿಮಾದ ಮೇಲಷ್ಟೇ ಗಮನ ಹರಿಸುತ್ತಿದ್ದೇವೆ. ಆಡಿಯೋ ಹಕ್ಕುಗಳು ಮಾತ್ರ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. 20 ಎಕರೆ ಪ್ರದೇಶದಲ್ಲಿ ಸೆಟ್ ಹಾಕಿ ಬಹುತೇಕ ಚಿತ್ರೀಕರಣ ಮಾಡಿದ್ದೇವೆ. ಸದ್ಯದಲ್ಲೇ ರಿಲೀಸ್ ಡೇಟ್ ಘೋಷಣೆ ಮಾಡುತ್ತೇವೆ’ ಎಂದರು. ಧ್ರುವ ಸರ್ಜಾ ಜೊತೆ ಸಂಜಯ್‌ ದತ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ನೋರಾ ಫತೇಹಿ, ರವಿಚಂದ್ರನ್, ರಮೇಶ್ ಅರವಿಂದ್ ಮುಂತಾದ ಕಲಾವಿದರು ‘ಕೆಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. 1970-75ರ ಕಾಲದಲ್ಲಿ ನಡೆದ ನೈಜ ಘಟನೆ ಆಧರಿಸಿ ಸಿನಿಮಾದ ಕಥೆ ಹೆಣೆಯಲಾಗಿದೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us