ನಟ ಪೃಥ್ವಿ ಅಂಬಾರ್ (Pruthvi Ambaar) ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. 2020ರಲ್ಲಿ ‘ದಿಯಾ’ ಸಿನಿಮಾ ಮೂಲಕ ಅವರಿಗೆ ಸಿಕ್ಕ ಜನಪ್ರಿಯತೆ ಅಪಾರ. ತ್ರಿಕೋನ ಪ್ರೇಮಕಥೆ ಹೊಂದಿದ್ದ ಆ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಪೃಥ್ವಿ ಅಂಬಾರ್ ಅವರಿಗೆ ಸಾಲು ಸಾಲು ಅವಕಾಶಗಳು ಹರಿದುಬರಲು ಆರಂಭ ಆದವು. ಪರಭಾಷೆಯಲ್ಲೂ ಅವರಿಗೆ ಚಾನ್ಸ್ ಸಿಗುತ್ತಿದೆ. ಕನ್ನಡದಲ್ಲಿ ಹೊಸ ಹೊಸ ತಂಡಗಳ ಜೊತೆ ಪೃಥ್ವಿ ಅಂಬಾರ್ ಸಿನಿಮಾ (Pruthvi Ambaar Movies) ಮಾಡುತ್ತಿದ್ದಾರೆ. ಈಗ ಅವರು ಇನ್ನೊಂದು ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾಗೆ ‘ಜೂನಿ’ (Juny) ಎಂದು ಟೈಟಲ್ ಇಡಲಾಗಿದೆ.
ಪೃಥ್ವಿ ಅಂಬಾರ್ ಅಭಿನಯಿಸಿರುವ ‘ಜೂನಿ’ ಸಿನಿಮಾಗೆ ಯುವ ಪ್ರತಿಭೆ ವೈಭವ್ ಮಹಾದೇವ್ ಅವರು ನಿರ್ದೇಶನ ಮಾಡಿದ್ದಾರೆ. ಮುಖ್ಯ ಭೂಮಿಕೆ ನಿಭಾಯಿಸಿರುವ ಪೃಥ್ವಿಗೆ ರಿಷಿಕಾ ನಾಯಕ್ ಅವರು ಜೋಡಿ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ಡಿಫರೆಂಟ್ ಆಗಿರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಈ ಸಿನಿಮಾದ ಶೀರ್ಷಿಕೆ ಭಿನ್ನವಾಗಿದೆ. ಶೀರ್ಷಿಕೆಯ ಅರ್ಥ ಏನು ಎಂದು ತಿಳಿಯಲು ಸಿನಿಪ್ರಿಯರಲ್ಲಿ ಕುತೂಹಲ ಮೂಡಿದೆ.
ಇದನ್ನೂ ಓದಿ: ವಿಷ್ಣುವರ್ಧನ್ ಅಭಿಮಾನಿಗಳಿಂದ ಡಿಸೆಂಬರ್ 17ಕ್ಕೆ ನಡೆಯಲಿದೆ ಬೃಹತ್ ಪ್ರತಿಭಟನೆ; ಕಾರಣ ಏನು?
ಈ ಮೊದಲು ‘ಜನ್ನಿ’ ಎಂಬ ಕಿರುಚಿತ್ರವನ್ನು ವೈಭವ್ ಮಹಾದೇವ್ ನಿರ್ದೇಶಿಸಿದ್ದರು. ಈಗ ‘ಜೂನಿ’ ಸಿನಿಮಾಗೆ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ. ಪ್ರಾಗ್ ಫಿಲ್ಮ್ ಸ್ಕೂಲ್ನಲ್ಲಿ ನಿರ್ದೇಶನದ ಕೋರ್ಸ್ ಮುಗಿಸಿ ಬಂದಿರುವ ಅವರು ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ‘ಜೂನಿ’ ತಂಡದಿಂದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಶೀಘ್ರದಲ್ಲೇ ಟೀಸರ್, ಟ್ರೇಲರ್ ಮತ್ತು ಹಾಡುಗಳು ಕೂಡ ರಿಲೀಸ್ ಆಗಲಿವೆ.
ಇದನ್ನೂ ಓದಿ: ತೆಲುಗು ಯುವನಟನ ‘ಹರೋಮ್ ಹರ’ ಸಿನಿಮಾ ಟೀಸರ್ ರಿಲೀಸ್ ಮಾಡಲಿರುವ ಸುದೀಪ್
ಒಂದು ರೊಮ್ಯಾಂಟಿಕ್ ಕಥೆಯನ್ನು ‘ಜೂನಿ’ ಸಿನಿಮಾ ಹೊಂದಿರಲಿದೆ. ‘ದಿಯಾ’ ಬಳಿಕ ಮತ್ತೊಮ್ಮೆ ಲವ್ ಸ್ಟೋರಿ ಸಿನಿಮಾದಲ್ಲಿ ಪೃಥ್ವಿ ನಟಿಸಿರುವುದು ವಿಶೇಷ. ‘ತ್ರಿಶೂಲ ಕ್ರಿಯೇಷನ್’ ಮೂಲಕ ಮೋಹನ್ ಕುಮಾರ್ ಎಸ್. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೇಯಸ್ ವೈ.ಎಸ್. ಅವರು ಸಹ-ನಿರ್ಮಾಪಕರಾಗಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮುಗಿಸಿರುವ ‘ಜೂನಿ’ ಚಿತ್ರತಂಡ 2024ರ ಜನವರಿಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುಲು ತಯಾರಿ ನಡೆಸುತ್ತಿದೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಶಾಂಕ್ ನಾರಾಯಣ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಅಜಿನ್ ಬಿ, ಜಿತಿನ್ ದಾಸ್ ಛಾಯಾಗ್ರಹಣ ಮಾಡಿದ್ದಾರೆ. ನವೀನ್ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.