ನಿರ್ಮಾಪಕ ಎಂ.ಎನ್. ಕುಮಾರ್ (Producer MN Kumar) ಮತ್ತು ನಟ ಕಿಚ್ಚ ಸುದೀಪ್ ನಡುವಿನ ಜಟಾಪಟ ಮತ್ತೊಂದು ಹಂತಕ್ಕೆ ಏರಿದೆ. ಕಾನೂನಿನ ಮೂಲಕ ವಿವಾದ ಬಗೆಹರಿಸಿಕೊಳ್ಳುವ ತೀರ್ಮಾನಕ್ಕೆ ಬರಲಾಗಿದೆ. ಎಂ.ಎನ್. ಕುಮಾರ್ಗೆ ಸುದೀಪ್ (Kichcha Sudeep) ಅವರು ಲೀಗಲ್ ನೋಟೀಸ್ ಕಳಿಸಿದ್ದಾರೆ. ಅಡ್ವಾನ್ಸ್ ಹಣ ಪಡೆದು ಕಾಲ್ಶೀಟ್ ನೀಡಿಲ್ಲ ಎಂಬ ಆರೋಪಕ್ಕೆ ದಾಖಲೆ ಇದೆಯೇ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಆ ಮಾತಿಗೆ ಎಂ.ಎನ್. ಕುಮಾರ್ ಅವರು ಮರು ಪ್ರಶ್ನೆ ಹಾಕಿದ್ದಾರೆ. ಸುದೀಪ್ ಮಾಡಿರುವ 45 ಸಿನಿಮಾಗಳಿಗೆ ಅಗ್ರಿಮೆಂಟ್ ಇದೆಯೇ ಎಂದು ಎಂ.ಎನ್. ಕುಮಾರ್ ಪ್ರಶ್ನಿಸಿದ್ದಾರೆ.
‘ಸುದೀಪ್ ಅವರು 45 ಸಿನಿಮಾ ಮಾಡಿದ್ದಾರೆ. ಆ 45 ಸಿನಿಮಾಗಳ ಅಗ್ರಿಮೆಂಟ್ ತಂದು ಮಾಧ್ಯಮಗಳ ಮುಂದೆ ಕೊಡಲು ಹೇಳಿ. ಯಾವುದಕ್ಕಾದರೂ ಅಗ್ರಿಮೆಂಟ್ ಮಾಡಿದ್ದಾರಾ. ಸಿನಿಮಾ ಕ್ಷೇತ್ರ ನಡೆಯುವುದೇ ನಂಬಿಕೆ ಮೇಲೆ. ಪ್ರಪಂಚದಲ್ಲಿ ಬೇರೆ ಯಾವ ವ್ಯವಹಾರ ಈ ರೀತಿ ನಡೆಯುತ್ತೋ ಇಲ್ಲವೋ ಗೊತ್ತಿಲ್ಲ’ ಎಂದು ಎಂ.ಎನ್. ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Kichcha Sudeep: ಜುಲೈ 6 ಎಂದರೆ ಸುದೀಪ್ ಪಾಲಿಗೆ ಭಾರಿ ವಿಶೇಷ; ‘ಹುಚ್ಚ’ ಚಿತ್ರ ತೆರೆಕಂಡು ಕಳೆಯಿತು 22 ವರ್ಷ
ಮೊದಲು ಅಡ್ವಾನ್ಸ್ ಹಣ ಪಡೆಯುವ ಹೀರೋಗಳು ನಂತರ ಅದೇ ನಿರ್ಮಾಪಕರ ಜೊತೆ ಸಿನಿಮಾ ಮಾಡಲು ಹಿಂದೇಟು ಹಾಕುತ್ತಾರೆ ಎಂಬ ಆರೋಪ ಇದೆ. ಅದಕ್ಕೆ ಕಾರಣ ಏನು ಎಂಬುದನ್ನು ಎಂ.ಎನ್. ಕುಮಾರ್ ವಿವರಿಸಿದ್ದಾರೆ. ‘ಇಂದು ಒಬ್ಬ ಹೀರೋ ಸಂಭಾವನೆ 1 ಕೋಟಿ ರೂಪಾಯಿ ಇರುತ್ತದೆ. ಅವರಿಗೆ ನಾವು 50 ಲಕ್ಷ ರೂಪಾಯಿ ಅಡ್ವಾನ್ಸ್ ಕೊಡುತ್ತೇವೆ. ಅವರು ನಮ್ಮ ಜೊತೆ ಸಿನಿಮಾ ಮಾಡುವಷ್ಟರಲ್ಲಿ ಅವರ ಸಂಭಾವನೆ 5 ಕೋಟಿ ರೂಪಾಯಿ ಆಗಿರುತ್ತದೆ. ಆಗ ಅವರಿಗೆ ಒಂದು ಕೋಟಿ ರೂಪಾಯಿಗೆ ಸಿನಿಮಾ ಮಾಡಲು ಮನಸ್ಸು ಇರುವುದಿಲ್ಲ. 5 ಕೋಟಿ ರೂಪಾಯಿ ಕೇಳೋಕೆ ಆಗಲ್ಲ. ಅದಕ್ಕೆ ಹೀಗೆಲ್ಲ ಮಾಡ್ತಾರೆ’ ಎಂದು ಎಂ.ಎನ್. ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Kichcha Sudeep: ಕ್ಯಾನ್ಸರ್ನಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯನ್ನು ಭೇಟಿಯಾಗಿ ಆಸೆ ಈಡೇರಿಸಿದ ಕಿಚ್ಚ ಸುದೀಪ್
‘ವಾಟ್ಸಪ್ ಮೂಲಕ ಬಂದಿದ್ದೆಲ್ಲ ನಿಜವಲ್ಲ. ಅಧಿಕೃತವಾಗಿ ನೋಟೀಸ್ ಬರಲಿ. ಅದಕ್ಕೆ ಸೂಕ್ತವಾಗಿ ಉತ್ತರ ನೀಡೋಣ. ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘಕ್ಕೂ ವಕೀಲರು ಇರುತ್ತಾರೆ. ನಿರ್ಮಾಪಕರಲ್ಲೂ ಲಾಯರ್ಗಳಿದ್ದಾರೆ. ಅವರೆಲ್ಲ ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ರೆಡಿ ಇರುತ್ತೇನೆ’ ಎಂದು ಎಂ.ಎನ್. ಕುಮಾರ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.