ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ‘ದಿಲ್ ಖುಷ್’ (Dil Kush) ಸಿನಿಮಾದ ‘ನೀನೇ ನೀನೇ’ ಹಾಡು (Song) ಬಿಡುಗಡೆ ಆಗಿದೆ. ಗೌಸ್ ಫಿರ್ ಅವರು ಬರದಿರುವ ‘ನೀನೇ ನೀನೇ’ ಹಾಡನ್ನು ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗೂ ಬಹದ್ದೂರ್ ಚೇತನ್ ಕುಮಾರ್ ಬಿಡುಗಡೆ ಮಾಡಿದ್ದು ವಿಶೇಷ. ‘ಸರಿಗಮಪ’ ಖ್ಯಾತಿಯ ನಿಹಾಲ್ ತೌರೊ ಹಾಗೂ ಆರತಿ ಅಶ್ವಿನ್ ಈ ಹಾಡಿಗೆ ಧ್ವನಿಯಾಗಿದ್ದು ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿದ್ದಾರೆ.
‘ಚಿತ್ರದ ಹಾಡುಗಳು ಹಾಗೂ ಟೀಸರ್ ತುಂಬಾ ಚೆನ್ನಾಗಿದೆ. ಪ್ರಮೋದ್ ಜಯ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿದ್ದಾರೆ. ಹಾಡುಗಳು ಹಾಗೂ ಟೀಸರ್ ಮೂಲಕ ಪ್ರಮೋದ್ ಜಯ ಭರವಸೆ ಮೂಡಿಸಿದ್ದಾರೆ. ಚಿತ್ರ ಕೂಡ ಚೆನ್ನಾಗಿ ಮೂಡಿಬಂದಿರುವ ವಿಶ್ವಾಸ ನಮಗಿದೆ. ಉತ್ತಮ ಕಥೆಗಳಿರುವ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರುತ್ತಿದೆ. ದಯವಿಟ್ಟು ಜನ ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಬನ್ನಿ. ಆಗ ಮಾತ್ರ ಚಿತ್ರಗಳು ಯಶಸ್ಸಿಯಾಗಲು ಸಾಧ್ಯ’ ಎಂದರು ಅತಿಥಿಗಳಾಗಿ ಆಗಮಿಸಿದ್ದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗು ಬಹದ್ದೂರ್ ಚೇತನ್ ಕುಮಾರ್.
ಇದನ್ನೂ ಓದಿ:‘ಕೆಟಿಎಂ’ ಸಿನಿಮಾ ಹಾಡು ಬಿಡುಗಡೆ, ಮುದ್ದಾಗಿ ಕಾಣ್ತಿದೆ ದೀಕ್ಷಿತ್-ಸಂಜನಾ ಜೋಡಿ
‘ನಾನು ಸಿಂಪಲ್ ಸುನಿ ಅವರ ಹತ್ತಿರ ಸಹಾಯಕ ನಿರ್ದೇಶಕನಾಗಿ ಸಾಕಷ್ಟು ಕೆಲಸ ಕಲಿತ್ತಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ಹಾಡು ಬಿಡುಗಡೆ ಮಾಡಿಕೊಟ್ಟ ಮೂರು ಜನ ನಿರ್ದೇಶಕರಿಗೆ ಧನ್ಯವಾದ. ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತೇವೆ’ ಎಂದು ನಿರ್ದೇಶಕ ಪ್ರಮೋದ್ ಜಯ ತಿಳಿಸಿದರು.
‘ಈ ಚಿತ್ರದಲ್ಲಿ ಖುಷ್ ನನ್ನ ಹೆಸರು. ಲವಲವಿಕೆಯ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ’ ಎಂದರು ನಾಯಕ ರಂಜಿತ್. ‘ದಿಲ್ಮಯ ನನ್ನ ಪಾತ್ರದ ಹೆಸರು. ನನ್ನ ಪಾತ್ರ ಕೂಡ ಚೆನ್ನಾಗಿದೆ’ ಎಂದರು ನಾಯಕಿ ಸ್ಪಂದನ ಸೋಮಣ್ಣ. ನಟರಾದ ಧರ್ಮಣ್ಣ, ರಘು ರಾಮನಕೊಪ್ಪ ಮಂತಾದ ಕಲಾವಿದರು ಹಾಗೂ ಚಿತ್ರತಂಡದ ಸದಸ್ಯರು “ದಿಲ್ ಖುಷ್” ಚಿತ್ರದ ಬಗ್ಗೆ ಮಾತನಾಡಿದರು. ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ “ದಿಲ್ ಖುಷ್” ಚಿತ್ರವನ್ನು ನಿರ್ಮಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ