ನಟ ದುನಿಯಾ ವಿಜಯ್ ಅವರು ‘ಲ್ಯಾಂಡ್ ಲಾರ್ಡ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಕೆ.ವಿ. ಸತ್ಯಪ್ರಕಾಶ್ ಬಂಡವಾಳ ಹೂಡುತ್ತಿದ್ದಾರೆ. ಅವರಿಗೆ ಪುತ್ರ ಸೂರಜ್ ಗೌಡ ಕೂಡ ಸಾಥ್ ನೀಡಿದ್ದಾರೆ. ಜಡೇಶ ಕೆ. ಹಂಪಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಇತ್ತೀಚೆಗೆ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಚಿತ್ರತಂಡದವರು ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿ ಹಂಚಿಕೊಂಡರು. ಈ ಸಿನಿಮಾದಲ್ಲಿ ರೆಟ್ರೋ ಕಾಲದ ಕಥೆ ಇರಲಿದೆ ಎಂಬುದು ವಿಶೇಷ. ದುನಿಯಾ ವಿಜಯ್ ಅವರ ಗೆಟಪ್ ಸಹ ಭಿನ್ನವಾಗಿದೆ.
ನಿರ್ದೇಶಕ ಜಡೇಶ್ ಕೆ. ಹಂಪಿ ಮಾತನಾಡಿ ‘ಇದೊಂದು ಗ್ರಾಮೀಣ ಸೊಗಡಿನ ಕಥೆ ಇರುವ ಸಿನಿಮಾ. 1980ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ ಎನ್ನುವ ಟ್ಯಾಗ್ ಲೈನ್ ಇದೆ. ಈ ಕಥೆಗೆ ವಿಜಯ್ ಅವರೇ ಸೂಕ್ತ ಆಯ್ಕೆ. ರಚಿತಾ ರಾಮ್ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಜಯ್ ಅವರ ಪುತ್ರಿ ರಿತನ್ಯ ಕೂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ’ ಎಂದರು.
ಸ್ವಾಮಿ ಗೌಡ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರು ಸಂಗೀತ ನೀಡುತ್ತಿದ್ದಾರೆ. ಕೆ.ಎಂ. ಪ್ರಕಾಶ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಮಾಸ್ತಿ ಮತ್ತು ಶ್ರೀಕಾಂತ್ ಅವರು ಸಂಭಾಷಣೆ ಬರೆದಿದ್ದಾರೆ. ‘ಸತ್ಯಪ್ರಕಾಶ್ ಮತ್ತು ಸೂರಜ್ ಗೌಡ ಅವರು ಯಾವುದೇ ಕೊರತೆ ಇಲ್ಲದಂತೆ ನಿರ್ಮಾಣ ಮಾಡುತ್ತಿದ್ದಾರೆ. ಉತ್ತಮವಾದ ತಂಡದ ಜತೆಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ’ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
‘ಜಡೇಶ್ ಅವರು ಗ್ರಾಮೀಣ ಸೊಗಡಿನ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳಿಯಲ್ಲಿ ವಿದ್ಯುತ್ ದೀಪಗಳು ಹೆಚ್ಚು ಇರಲಿಲ್ಲ. ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಗೆಟಪ್ ರೀತಿ ನಮ್ಮ ಹಳ್ಳಿಯ ಹಿರಿಯರು ಇರುತ್ತಿದ್ದರು. ಜಾತಿ, ಮತ ಎಂಬ ಭೇದಭಾವ ಇರಲಿಲ್ಲ. ಇದ್ದದ್ದು ಎರಡೇ. ಒಂದು ಬಡವ. ಮತ್ತೊಂದು ಶ್ರೀಮಂತ. ಈ ಸಿನಿಮಾದಲ್ಲಿ ನಾನು ಬಡವರ ಪ್ರತಿನಿಧಿಯಾಗಿ ನಟಿಸುತ್ತಿದ್ದೇನೆ’ ಎಂದಿದ್ದಾರೆ ದುನಿಯಾ ವಿಜಯ್.
ಇದನ್ನೂ ಓದಿ: ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್ಕುಮಾರ್
‘ಜಡೇಶ್ ಅವರ ಕಥೆ ನನಗೆ ಇಷ್ಟ ಆಯಿತು. ಕಥೆ ಕೇಳಿದ ಕೆಲವೇ ದಿನಗಳಲ್ಲಿ ಈ ಸಿನಿಮಾ ಆರಂಭವಾಯಿತು’ ಎಂದರು ನಿರ್ಮಾಪಕ ಸತ್ಯಪ್ರಕಾಶ್. ‘ಈಗಾಗಲೇ 2 ಹಂತಗಳ ಶೂಟಿಂಗ್ ಮುಕ್ತಾಯ ಆಗಿದೆ. ಈಗ 3ನೇ ಹಂತದ ಶೂಟಿಂಗ್ ನಡೆಯುತ್ತಿದೆ. ಮಾರ್ಚ್ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸುವ ಪ್ಲ್ಯಾನ್ ಇದೆ’ ಎಂದು ಸಹ ನಿರ್ಮಾಪಕ ಸೂರಜ್ ಗೌಡ ಹೇಳಿದ್ದಾರೆ. ನೆಲಮಂಗಲದ ಬಳಿ ಅದ್ದೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.