ಕನ್ನಡ ಸಾಹಿತ್ಯ ಲೋಕಕ್ಕೆ ಡಿ.ವಿ. ಗುಂಡಪ್ಪ (ಡಿವಿಜಿ) ಅವರು ನೀಡಿದ ಕೊಡುಗೆ ಅಪಾರ. ಡಿವಿಜಿ ಬರೆದ ‘ಮಂಕುತಿಮ್ಮನ ಕಗ್ಗ’ ತುಂಬಾ ಜನಪ್ರಿಯ. ಅನೇಕರಿಗೆ ಇದು ಸ್ಫೂರ್ತಿ. ವಿಶೇಷ ಏನೆಂದರೆ ‘ಮಂಕುತಿಮ್ಮನ ಕಗ್ಗ’ ಈಗ ಸಿನಿಮಾ ರೂಪದಲ್ಲಿ ಬರಲಿದೆ. ಆ ಕಾರಣದಿಂದ ಸಾಹಿತ್ಯಾಸಕ್ತರಲ್ಲಿ ಕುತೂಹಲ ಮೂಡಿಸಿದೆ. ಸ್ಯಾಂಡಲ್ವುಡ್ನಲ್ಲಿ ಈಗಾಗಲೇ ಕೆಲವು ಗಮನಾರ್ಹ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ರಾಜ ರವಿಶಂಕರ್ (ವಿ. ರವಿ) ಅವರು ಈಗ ‘ಮಂಕುತಿಮ್ಮನ ಕಗ್ಗ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
ರಾಜ ರವಿಶಂಕರ್ ಅವರು ಡಿ.ವಿ.ಜಿ. ಬರೆದ ‘ಮಂಕುತಿಮ್ಮನ ಕಗ್ಗ’ವನ್ನು ಸಿನಿಮಾದ ಮೂಲಕ ಹೇಗೆ ತೆರೆಗೆ ತರಲಿದ್ದಾರೆ ಎಂಬ ಕುತೂಹವಿದೆ. ಎನ್.ಎ. ಶಿವಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಮೀನಾ ಶಿವಕುಮಾರ್ ಅವರು ಸಹ-ನಿರ್ಮಾಪಕಿ ಆಗಿದ್ದಾರೆ. ಈ ಸಿನಿಮಾದ ‘ಸ್ವಾಮಿದೇವನೇ..’ ಹಾಡನ್ನು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ‘ಎ2 ಮ್ಯೂಸಿಕ್’ ಮೂಲಕ ಬಿಡುಗಡೆ ಮಾಡಲಾಗಿದೆ.
ಅನೇಕ ವರ್ಷಗಳ ಹಿಂದೆ ಸೋಸಲೆ ಅಯ್ಯ ಶಾಸ್ತ್ರಿಗಳು ಬರೆದ ‘ಸ್ವಾಮಿದೇವನೇ..’ ಗೀತೆಯನ್ನು ‘ಮಂಕುತಿಮ್ಮನ ಕಗ್ಗ’ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಈ ಸಿನಿಮಾಗೆ ಎ.ಟಿ. ರವೀಶ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಕೆಲಸಗಳು ಪೂರ್ಣಗೊಂಡು, ಬಿಡುಗಡೆಗೆ ಸಜ್ಜಾಗಿದೆ. ಸೆನ್ಸಾರ್ ಮಂಡಳಿ ಸದಸ್ಯರು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ. ‘ಮಂಕುತಿಮ್ಮನ ಕಗ್ಗ’ ಸಿನಿಮಾಗೆ ಮಧುಗಿರಿ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ.
ರಾಜ ರವಿಶಂಕರ್ ಅವರು ನಿರ್ದೇಶನದ ಜೊತೆ ಕಥೆ ವಿಸ್ತರಣೆ, ಚಿತ್ರಕಥೆ ಮತ್ತು ಸಂಭಾಷಣೆ ಕೂಡ ಬರೆದಿದ್ದಾರೆ. ಸಿ. ನಾರಾಯಣ್ ಛಾಯಾಗ್ರಹಣ ಮಾಡಿದ್ದಾರೆ. ಆರ್.ಡಿ. ರವಿ ಅವರು ಸಂಕಲನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಡಿ.ವಿ.ಜಿ ಅವರ ಬಾಲ್ಯದ ದಿನಗಳ ಬಗ್ಗೆ ತೋರಿಸಲಾಗಿದೆ. ತಿಮ್ಮಣ್ಣ ಮೇಷ್ಟ್ರು ಪಾತ್ರದಲ್ಲಿ ಹಿರಿಯ ಕಲಾವಿದರ ರಾಮಕೃಷ್ಣ ಅಭಿನಯಿಸಿದ್ದಾರೆ. ಬಾಲಕ ಸೋಮಿ (ಡಿ.ವಿ.ಜಿ) ಪಾತ್ರದಲ್ಲಿ ಮಾಸ್ಟರ್ ರಣವೀರ್ ನಟಿಸಿದ್ದಾರೆ. ಅಲಮೇಲು ಪಾತ್ರಕ್ಕೆ ಭವ್ಯಶ್ರೀ ರೈ ಬಣ್ಣ ಹಚ್ಚಿದ್ದಾರೆ. ವೆಂಕರಮಣಯ್ಯ ಪಾತ್ರವನ್ನು ರವಿ ನಾರಾಯಣ್ ಮಾಡಿದ್ದಾರೆ. ಅಜ್ಜಿಯ ಪಾತ್ರವನ್ನು ಲಕ್ಷ್ಮೀ ನಾಡಗೌಡ ನಿಭಾಯಿಸಿದ್ದಾರೆ. ಸಾಯಿಪ್ರಕಾಶ್, ಶ್ರೀನಿವಾಸ್ ಕೆಮ್ತೂರ್, ನರಸೇಗೌಡ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.