ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕ ಭೂಷಣ್ (Choreographer Bhushan) ಅವರು ಫೇಮಸ್ ಆಗಿದ್ದಾರೆ. ‘ರ‍್ಯಾಂಬೊ 2’ ಸಿನಿಮಾದ ‘ಚುಟು ಚುಟು ಅಂತೈತಿ..’, ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ..’ ಮುಂತಾದ ಜನಪ್ರಿಯ ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ ಭೂಷಣ್ ಮಾಸ್ಟರ್ (Bhushan Master) ಅವರಿಗೆ ಸಖತ್ ಬೇಡಿಕೆ ಇದೆ. ಪುನೀತ್ ರಾಜ್ಕುಮಾರ್ ಅಭಿನಯದ ‘ನಟ ಸಾರ್ವಭೌಮ’, ರಿಷಬ್ ಶೆಟ್ಟಿ ನಟನೆಯ ‘ಬೆಲ್ ಬಾಟಂ’ ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾದ ಹಾಡುಗಳಿಗೆ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ನೃತ್ಯ ನಿರ್ದೇಶನ ಮಾತ್ರವಲ್ಲದೇ, ‘ರಾಜ ರಾಣಿ ರೋರರ್ ರಾಕೆಟ್’ ಚಿತ್ರದ ಮೂಲಕ ಅವರು ಹೀರೋ ಆದರು. ಈಗ ಅವರು ನಿರ್ದೇಶಕನ (Movie Director) ಕ್ಯಾಪ್ ಧರಿಸುತ್ತಿದ್ದಾರೆ ಎಂಬುದು ವಿಶೇಷ.
ಇಂದು (ಜುಲೈ 23) ಭೂಷಣ್ ಅವರ ಹುಟ್ಟುಹಬ್ಬ. ಈ ಸ್ಪೆಷಲ್ ದಿನವೇ ಅವರು ತಮ್ಮ ನಿರ್ದೇಶನದ ಪ್ಲ್ಯಾನ್ ಬಗ್ಗೆ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ಒಂದು ಫನ್ನಿ ಆದಂತಹ ವಿಡಿಯೋ ಮೂಲಕ ಅವರು ತಮ್ಮ ನಿರ್ದೇಶನದ ಕನಸಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಥೆ ಬರೆಯಲು ಶುರುಮಾಡುವ ಭೂಷನ್ಗೆ ‘ನಾನು ಯಾವುದೇ ಕೋರ್ಸ್ ಮಾಡಿಲ್ಲವಲ್ಲ’ ಎಂಬ ಚಿಂತೆ ಶುರುವಾಗುತ್ತದೆ. ‘ಡಾಕ್ಟರ್, ಇಂಜಿನಿಯರ್, ಟೀಚರ್ ಆಗಲು ಕೋರ್ಸ್ ಬೇಕು. ಆದ್ರೆ ಡೈರೆಕ್ಟರ್ ಆಗಲು ಫೋರ್ಸ್ ಬೇಕು’ ಎಂದು ಪಕ್ಕದಲ್ಲಿದ್ದ ಹುಡುಗರು ಜೋಶ್ ತುಂಬುತ್ತಾರೆ. ಈ ವಿಡಿಯೋ ವೈರಲ್ ಆಗಿದೆ.
ಭೂಷಣ್ ಅವರ ನಿರ್ದೇಶನದ ಪ್ರಯತ್ನ ಡಿಫರೆಂಟ್ ಆಗಿರಲಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ನೀಡುತ್ತಿದೆ. ಆದರೆ ಈ ವಿಡಿಯೋದಲ್ಲಿ ಅವರು ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸಿನಿಮಾದ ಹೆಸರು ಏನು? ಇದು ಯಾವ ಪ್ರಕಾರದ ಸಿನಿಮಾ ಎಂಬಿತ್ಯಾದಿ ವಿಷಯಗಳನ್ನು ಅವರು ನಂತರ ದಿನಗಳಲ್ಲಿ ತಿಳಿಸಲಿದ್ದಾರೆ. ಸದ್ಯಕ್ಕೆ ಅವರು ಕಥೆ ಬರೆಯುವುದರಲ್ಲಿ ಬ್ಯುಸಿ ಆಗಿದ್ದಾರೆ.
ಇದನ್ನೂ ಓದಿ: ಅಪ್ಪ ಮಾಡಿದ ಒಂದು ಸಣ್ಣ ಕಾರ್ಯ ಪ್ರಭುದೇವ ಜೀವನವನ್ನೇ ಬದಲಿಸಿಬಿಟ್ಟಿತು
ಈ ವಿಡಿಯೋದಲ್ಲಿ ಪ್ರಭುದೇವ ಅವರ ಫೋಟೋ ಕಾಣಿಸಿಕೊಂಡಿದೆ. ಅವರು ಕೂಡ ಮೊದಲು ಡ್ಯಾನ್ಸ್ ಮಾಸ್ಟರ್ ಆಗಿದ್ದು, ನಂತರ ನಟನಾಗಿ, ನಿರ್ದೇಶಕನಾಗಿ ಯಶಸ್ಸು ಕಂಡರು. ಅವರನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಭೂಷಣ್ ಅವರು ಡೈರೆಕ್ಟರ್ ಕ್ಯಾಪ್ ತೊಡಲು ಸಜ್ಜಾಗಿದ್ದಾರೆ. ಹೊಸ ಹೆಜ್ಜೆ ಇಡುತ್ತಿರುವ ಅವರಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:29 pm, Sun, 23 July 23