ರಚಿತಾ ರಾಮ್ (Rachita Ram) ಮತ್ತು ಅಜಯ್ ರಾವ್ (Ajay Rao) ನಟನೆಯ ‘ಲವ್ ಯೂ ರಚ್ಚು’ (Love You Racchu) ಸಿನಿಮಾದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು, ಫೈಟರ್ ವಿವೇಕ್ ನಿಧನರಾಗಿದ್ದಾರೆ. ವಿವೇಕ್ ಸಾವಿನಿಂದ ಅವರ ಕುಟುಂಬಕ್ಕೆ ಆಘಾತ ಆಗಿದೆ. ಘಟನೆ ನಡೆದ ಕೂಡಲೇ ವಿವೇಕ್ ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತು. ಅಷ್ಟರಲ್ಲಾಗಲೇ ಅವರು ಕೊನೆಯುಸಿರು ಎಳೆದಿದ್ದರು ಎನ್ನಲಾಗಿದೆ. ಆಸ್ಪತ್ರೆ ಬಳಿ ವಿವೇಕ್ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ದುರ್ಘಟನೆ ಸಂಭವಿಸಿ ಗಂಟೆಗಳೇ ಕಳೆದರೂ ಚಿತ್ರತಂಡದ ಯಾರೋಬ್ಬರೂ ಆಸ್ಪತ್ರೆಗೆ ಬಂದಿಲ್ಲ ಎಂದು ಕುಟುಂಬದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.
‘ಲವ್ ಯೂ ರಚ್ಚು’ ಚಿತ್ರದ ಶೂಟಿಂಗ್ಗೆ ಯಾವುದೇ ಅನುಮತಿ ಪಡೆದುಕೊಂಡಿರಲಿಲ್ಲ ಎನ್ನಲಾಗಿದೆ. ಚಿತ್ರೀಕರಣ ವೇಳೆ ರೋಪ್ ಎಳೆಯುವಾಗ ದುರಂತ ನಡೆದಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ದುರ್ಘಟನೆಗೆ ಕಾರಣ ಆಗಿದೆ. ಫೈಟರ್ ಸಾವು ಸಂಭವಿಸುತ್ತಿದ್ದಂತೆಯೇ ಇಡೀ ಚಿತ್ರತಂಡ ಆ ಸ್ಥಳದಿಂದ ಜಾಗ ಖಾಲಿ ಮಾಡಿದೆ. ದುರ್ಘಟನೆಯಲ್ಲಿ ರಂಜಿತ್ ಎಂಬ ವ್ಯಕ್ತಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮೋಹನ್ ಕುಮಾರ್, ಬಿಡದಿ ಇನ್ಸ್ಪೆಕ್ಟರ್ ಪ್ರಕಾಶ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದ ನಿರ್ದೇಶಕ ಶಂಕರ್ ರಾಜ್, ಸಾಹಸ ನಿರ್ದೇಶಕ ವಿನೋದ್ ಮತ್ತು ಜೆಸಿಬಿ ಡ್ರೈವರ್ ಒಬ್ಬರನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ. ವಿವೇಕ್ ನಿಧನಕ್ಕೆ ಅಸಲಿ ಕಾರಣ ಏನು ಮತ್ತು ಈ ದುರಂತಕ್ಕೆ ಹೊಣೆ ಯಾರು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ವಿವೇಕ್ ಸಾವಿಗೆ ನ್ಯಾಯ ಸಿಗುವವರೆಗೂ ಶೂಟಿಂಗ್ ಸೆಟ್ಗೆ ಕಾಲಿಡುವುದಿಲ್ಲ ಎಂದು ಚಿತ್ರದ ನಾಯಕ ನಟ ಅಜಯ್ ರಾವ್ ಹೇಳಿದ್ದಾರೆ.
‘ಮೆಟಲ್ ರೋಪ್ ಬಳಸಿದ್ದರಿಂದ ದುರಂತ ಸಂಭವಿಸಿದೆ. ಈ ದೃಶ್ಯದ ಚಿತ್ರೀಕರಣದ ವೇಳೆ ನಾನು ಇರಲಿಲ್ಲ. ಜಾಕೇಟ್ ಹಾಕಿದ್ದವನಿಗೂ ಶಾಕ್ ಹೊಡೆದಿದೆ. ಮುಂಜಾಗ್ರತ ಕ್ರಮ ತೆಗೆದುಕೊಳ್ಳದ್ದಕ್ಕೆ ದುರಂತ ನಡೆದಿದೆ. ಈ ದೃಶ್ಯದ ಚಿತ್ರೀಕರಣದಲ್ಲಿ ನಾನಿದ್ರೆ ಮಾಡುತ್ತಿರಲಿಲ್ಲ. ನಾನೇನಾದ್ರೂ ಹೇಳಲು ಹೋದ್ರೆ ಮೂಗು ತೂರಿಸ್ತಾರೆ ಅಂತಾರೆ. ನಾನು ನಿರ್ದೇಶಕರ ಬಳಿ ಮಾತನಾಡುವುದಕ್ಕೆ ಆಗಿಲ್ಲ. ಘಟನಾ ಸ್ಥಳದಿಂದ ನಾನು 200 ಮೀಟರ್ ದೂರ ಇದ್ದೆ. ಬಳಿಕ ನಮ್ಮ ಹುಡುಗರು ಬಂದು ಮಾಹಿತಿ ನೀಡಿದರು’ ಎಂದು ಅಜಯ್ ರಾವ್ ಹೇಳಿದ್ದಾರೆ.
ಇದನ್ನೂ ಓದಿ:
Love You Racchu: ಫೈಟರ್ ವಿವೇಕ್ ಸಾವು; ನಿರ್ದೇಶಕ ಶಂಕರ್, ಸಾಹಸ ನಿರ್ದೇಶಕ ವಿನೋದ್ ಪೊಲೀಸರ ವಶಕ್ಕೆ
ಮುಂಜಾಗ್ರತ ಕ್ರಮ ಕೈಗೊಂಡಿರಲಿಲ್ಲ, ವಿವೇಕ್ಗೆ ನ್ಯಾಯ ಸಿಗುವವರೆಗೆ ಶೂಟಿಂಗ್ಗೆ ಬರಲ್ಲ’; ಅಜಯ್ ರಾವ್