ಶಿವರಾಜ್ಕುಮಾರ್ ಅವರ ಪುತ್ರಿ ನಿವೇದಿತಾ ಅವರು ‘ಫೈರ್ ಫ್ಲೈ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದು ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾವಾಗಿದ್ದು, ಯುವ ಪ್ರತಿಭೆಗಳಿಗೆ ಇದರಲ್ಲಿ ಅವಕಾಶ ನೀಡಿದ್ದಾರೆ. ವಂಶಿ ಅವರು ನಟಿಸಿ, ನಿರ್ದೇಶನ ಮಾಡಿರುವ ಈ ಸಿನಿಮಾದ ಮೊದಲ ಝಲಕ್, ಅಂದರೆ ಟೀಸರ್ ಬಿಡುಗಡೆ ಮಾಡಲಾಗಿದೆ. ನಾಯಕನ ಪಾತ್ರ ವಿಕ್ಕಿಯ ಪರಿಚಯವನ್ನು ಈ ಟೀಸರ್ ಮೂಲಕ ಮಾಡಿಕೊಡಲಾಗಿದೆ. ವಂಶಿ ಅವರು ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಫೈರ್ ಫ್ಲೈ’ ಸಿನಿಮಾ ಒಂದಷ್ಟು ಕಾರಣಗಳಿಂದ ಹೈಪ್ ಸೃಷ್ಟಿ ಮಾಡಿದೆ.
ಟೀಸರ್ನಲ್ಲಿ ವಿವೇಕಾನಂದ ಅಂತ ಪರಿಚಯ ಮಾಡಿಕೊಳ್ಳುವ ನಾಯಕ ವಿಕ್ಕಿ ತಾನೊಬ್ಬ ಪ್ರಶಸ್ತಿ ವಿಜೇತ ಮ್ಯಾಥ್ಸ್ ಟೀಚರ್ ಎಂದು ಹೇಳಿಕೊಳ್ತಾನೆ. ವಿಕ್ಕಿಯ ಜಗತ್ತಿನಲ್ಲಿ ಬೆಳಿಗ್ಗೆ 7, ಮಧ್ಯಾಹ್ನ 1 ಹಾಗೂ ರಾತ್ರಿ 8 ಗಂಟೆಗೆ ಏನು ನಡೆಯುತ್ತೆ? ವಿಕ್ಕಿಯ ವಿಚಿತ್ರ ವರ್ತನೆಗಳನ್ನು ತುಂಬ ತಮಾಷೆಯಾಗಿ ಕಟ್ಟಿಕೊಡಲಾಗಿದೆ. ಎರಡು ನಿಮಿಷ 49 ಸೆಕೆಂಡ್ ಇರುವ ‘ಫೈರ್ ಫ್ಲೈ’ ಟೀಸರ್ ಕುತೂಹಲದಿಂದ ಕೂಡಿದೆ. ವಿಕ್ಕಿ ಯಾರು ಎಂಬುದನ್ನು ಹೇಳಿರುವ ಚಿತ್ರತಂಡವು ಆತ ಯಾಕೆ ವಿಚಿತ್ರವಾಗಿ ವರ್ತಿಸುತ್ತಾನೆ ಎಂಬುದನ್ನು ಗೌಪ್ಯವಾಗಿಯೇ ಉಳಿಸಿಕೊಂಡಿದೆ.
ಈ ಸಿನಿಮಾದಲ್ಲಿ ವಂಶಿ ಅವರು ನಾಯಕನಾಗಿ ನಟಿಸಿದ್ದಾರೆ. ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ. ತಾಂತ್ರಿಕವಾಗಿ ಈ ಟೀಸರ್ ಬಹಳ ರಿಚ್ ಆಗಿ ಮೂಡಿಬಂದಿದೆ. ಸಿನಿಮಾದ ಎಲ್ಲ ಫ್ರೇಮ್ನ ಕಲರಿಂಗ್, ಕ್ವಾಲಿಟಿಯಲ್ಲಿ ರಾಜಿ ಆಗದೇ ಒಳ್ಳೆ ಔಟ್ ಫುಟ್ ನೀಡಲು ಪ್ರಯತ್ನಿಸಿರುವುದಾಗಿ ಚಿತ್ರತಂಡ ಹೇಳಿದೆ. ಈ ಸಿನಿಮಾಗೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಅಭಿಲಾಷ್ ಕಳತ್ತಿ ಅವರು ಛಾಯಾಗ್ರಹಣ ಮಾಡಿದ್ದಾರೆ. ರಘು ನಿಡುವಳ್ಳಿ ಅವರು ಸಂಭಾಷಣೆ ಬರೆದಿದ್ದಾರೆ. ಸುರೇಶ್ ಆರ್ಮುಗಂ ಅವರ ಸಂಕಲನ ‘ಫೈರ್ ಫ್ಲೈ’ ಸಿನಿಮಾಗೆ ಇದೆ. ಈ ಸಿನಿಮಾದಲ್ಲಿ ವಂಶಿಗೆ ಜೋಡಿಯಾಗಿ ರಚನಾ ಇಂದರ್ ಅವರು ಅಭಿನಯಿಸಿದ್ದಾರೆ. ಸುಧಾರಾಣಿ, ಅಚ್ಯುತ್ ಕುಮಾರ್, ಶೀತಲ್ ಶೆಟ್ಟಿ, ಚಿತ್ಕಲಾ ಬಿರಾದಾರ್, ಮೂಗು ಸುರೇಶ್, ಸಿಹಿ ಕಹಿ ಚಂದ್ರು ಮುಂತಾದ ಕಲಾವಿದರು ಕೂಡ ನಟಿಸಿದ್ದಾರೆ.
ಇದನ್ನೂ ಓದಿ: ಶಿವರಾಜ್ಕುಮಾರ್ ಜೊತೆ ಸಣ್ಣ ಪಾತ್ರ ಮಾಡಿದ್ದ ಈ ಕಲಾವಿದ ಈಗ ಬಾಲಿವುಡ್ನ ಸ್ಟಾರ್ ಹೀರೋ
‘ಶ್ರೀ ಮುತ್ತು ಸಿನಿ ಸರ್ವಿಸಸ್ ಸಂಸ್ಥೆ’ ಮೂಲಕ ‘ಫೈರ್ ಫ್ಲೈ’ ಸಿನಿಮಾ ನಿರ್ಮಾಣ ಆಗುತ್ತಿದೆ. ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಚಿತ್ರದ ಮೂಲಕ ನಿರ್ದೇಶಕ ವಂಶಿ ಅವರು ಪೂರ್ಣ ಪ್ರಮಾಣದ ಹೀರೋ ಆಗುತ್ತಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಶೂಟಿಂಗ್ ಮುಗಿದಿದೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.