ವಿಷ್ಣುವರ್ಧನ್ ಹಾಗೂ ರಾಜ್ಕುಮಾರ್ ನಟಿಸಿದ ‘ಗಂಧದ ಗುಡಿ’ ಚಿತ್ರ 1973ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ರಾಜ್ಕುಮಾರ್ ಹೀರೋ ಆದರೆ, ವಿಷ್ಣುವರ್ಧನ್ ವಿಲನ್. ಈ ಚಿತ್ರದಲ್ಲಿ ನಡೆದ ಘಟನೆ ಬಗ್ಗೆ ಅನೇಕ ಚರ್ಚೆಗಳು ಇಂದಿಗೂ ಇವೆ. ಎಂಪಿ ಶಂಕರ್ ಅವರು ಯಾವಾಗಲೂ ಒಂದು ಗನ್ ಇಟ್ಟುಕೊಂಡು ಓಡಾಡುತ್ತಿದ್ದರು. ಶೂಟಿಂಗ್ ವೇಳೆ ರಾಜ್ಕುಮಾರ್ ಮೇಲೆ ವಿಷ್ಣು ಗುಂಡು ಹಾರಿಸುವ ಪ್ರಯತ್ನ ಮಾಡಿದ್ದರು ಎನ್ನುವ ಸುದ್ದಿ ಹುಟ್ಟುಕೊಂಡಿತ್ತು.
‘ಗಂಧದ ಗುಡಿ’ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರು ರಾಜ್ಕುಮಾರ್ ಮೇಲೆ ಫೈಯರ್ ಮಾಡುವ ದೃಶ್ಯ ಬರುತ್ತದೆ. ಸಿನಿಮಾದ ಶೂಟಿಂಗ್ ವೇಳೆ ರಾಜ್ಕುಮಾರ್ ಮೇಲೆ ವಿಷ್ಣು ಗುಂಡು ಹಾರಿಸುವ ಪ್ರಯತ್ನ ಮಾಡಿದ್ದರು ಎನ್ನುವ ವದಂತಿ ಇತ್ತು. ಸಿನಿಮಾದ ಕ್ಲೈಮ್ಯಾಕ್ಸ್ ನೋಡಿದ ಬಳಿಕ ಈ ವಿಚಾರ ಫ್ಯಾನ್ಸ್ಗೆ ಖಾತರಿ ಆಗಿತ್ತು. ಆ ಬಗ್ಗೆ ನಿರ್ಮಾಪಕ ಎಂಪಿ ಶಂಕರ್ ಸ್ಪಷ್ಟನೆ ನೀಡಿದ್ದರು.
‘ರಾಜ್ಕುಮಾರ್ ಬೆಳಿಗ್ಗೆ 11 ಗಂಟೆಗೆ ಬಂದರೆ ಸಾಕು ಎಂದು ನಿರ್ದೇಶಕರು ಹೇಳಿದ್ದರು. ನಾನು ಬೆಳಿಗ್ಗೆ 11 ಗಂಟೆಗೆ ಹೋದೆ. ಸೆಟ್ಗೆ ಹೋದಾಗ ಶೂಟಿಂಗ್ ಮುಗಿದೇ ಇರಲಿಲ್ಲ. ಎಲ್ಲರೂ ನಗುತ್ತಾ ಕುಳಿತಿದ್ದರು. ಬಾಲಕೃಷ್ಣ ಅವರನ್ನು ಆನೆ ಬೆನ್ನತ್ತಿಕೊಂಡು ಬಂದಿತ್ತಂತೆ. ಇದನ್ನೇ ಹೇಳುತ್ತಾ ನಗುತ್ತಿದ್ದರು. ರಾಜ್ಕುಮಾರ್ ಕೂಡ ಅಲ್ಲಿ ಹೋದರು. ಅವರು ಕೂಡ ನಗುತ್ತ ಕುಳಿತರು. ಶೂಟಿಂಗ್ ಯಾವಾಗ ಮುಗಿಸೋದು ಎನ್ನುವ ಆಲೋಚನೆ ಶುರುವಾಯಿತು. ನನ್ನ ಸೇಫ್ಟಿಗೆ ಎಂದು ನಾನು ಯಾವಾಗಲೂ ಒಂದು ಗನ್ ಇಟ್ಟುಕೊಂಡು ಇರುತ್ತಿದ್ದೆ. ಅದನ್ನು ಕಚೇರಿಯಲ್ಲಿ ಇಡುವಂತೆ ನಾನು ಆಫೀಸ್ ಬಾಯ್ಗೆ ಹೇಳಿದ್ದೆ’ ಎಂದರು ಎಂಪಿ ಶಂಕರ್.
‘ಕ್ಲೈಮ್ಯಾಕ್ಸ್ ಹಂತದ ಶೂಟಿಂಗ್. ಪೆಟ್ರೋಲ್ ಟ್ಯಾಂಕ್ನ ಬೆಟ್ಟದ ಮೇಲೆ ಇಡಲಾಗಿತ್ತು. ಎಲ್ಲರನ್ನೂ ಒಪ್ಪಿಸಿ ಅಲ್ಲಿಗೆ ಕರೆದುಕೊಂಡು ಹೋದೆ. ಬಾಲಣ್ಣ ಅವರು ಏನು ಗನ್ ಇಷ್ಟೊಂದು ತೂಕ ಇದೆಯಲ್ಲ ಎಂದರು. ತೂಕ ಕಮ್ಮಿ ಇರೋದು ಬೇಕಾ ಎಂದು ಕೇಳಿದೆ. ಅವರು ಹೌದು ಎಂದರು. ನಾನು ನನ್ನ ಗನ್ ತೆಗೆದುಕೊಂಡು ಬರುವಂತೆ ಹೇಳಿದೆ. ನನ್ನದು ಹ್ಯಾಮರ್ ಗನ್ ಆಗಿತ್ತು. ಏನು ಬುಲೆಟ್ ಇಲ್ಲವಾ ಎಂದು ಬಾಲಣ್ಣ ಕೇಳಿದರು. ನಾಲ್ಕು ಬುಲೆಟ್ ನನ್ನ ಜೋಬಿನಲ್ಲೇ ಇತ್ತು. ಹೀಗಾಗಿ, ಏನೂ ಇಲ್ಲ ಎಂದೆ. ಮೂರು ಟೇಕ್ ಆಯ್ತು. ಸಾಕಪ್ಪ ನಿನ್ನ ಗನ್ ಎಂದು ಅವರು ನನಗೆ ಕೊಟ್ಟರು’ ಎಂದಿದ್ದರು ಎಂಪಿ ಶಂಕರ್.
ಇದನ್ನೂ ಓದಿ: ಹೊಟ್ಟೆ ಉರಿಗೆ ಅಣ್ಣಾವ್ರ ಸಿನಿಮಾಗೆ ಕೆಟ್ಟ ವಿಮರ್ಶೆ; ರಾಜ್ಕುಮಾರ್ ಪ್ರತಿಕ್ರಿಯಿಸಿದ್ದ ರೀತಿಗೆ ಎಲ್ಲರೂ ಶಾಕ್
‘ನಾನು ಗನ್ನ ಕೈಯಲ್ಲಿ ಇಟ್ಟುಕೊಂಡಿದ್ದೆ. ಟ್ರಿಗರ್ ಆಗೋಯ್ತು. ಢಮಾರ್ ಎಂಬ ಸೌಂಡ್ ಬಂತು. ನೆಲದ ಮಣ್ಣೆಲ್ಲು ಸಿಡಿದು ಮೇಲೆ ಬಂತು. ಎಲ್ಲರೂ ನನ್ನನ್ನು ನೋಡುತ್ತಿದ್ದಾರೆ. ನಾನು ಸುಮ್ಮನೆ ನಿಂತಿದ್ದೆ. ರಾಜ್ಕುಮಾರ್ ಅವರೇ ಧೈರ್ಯ ಮಾಡಿ ನನ್ನ ಬಳಿಗೆ ಬಂದರು. ಏನ್ ಸರ್ ಏನಾಯ್ತು ಎಂದು ರಾಜ್ಕುಮಾರ್ ಕೇಳಿದರು. ಈಗ ಒಂದು ಗುಂಡು ಹಾರಿದೆ, ಇದರೊಳಗೆ ಇನ್ನೂ ಒಂದು ಗುಂಡು ಇದೆ ಎಂದೆ. ಎಲ್ಲರೂ ಸುಸ್ತಾದರು. ನನ್ನ ಕಣ್ಣಲ್ಲಿ ನೀರು ಸುರಿಯುತ್ತಿದೆ. ರಾಜ್ಕುಮಾರ್ ಸಮಾಧಾನ ಮಾಡಿದರು. ನಿಮ್ಮಲ್ಲಿ ಸತ್ಯ ಇರೋದ್ರಿಂದ ರಾಜ್ಕುಮಾರ್ ಬದುಕಿದ್ದಾನೆ. ಇಲ್ಲದಿದ್ದರೆ ಇಡೀ ಚಿತ್ರರಂಗದಲ್ಲಿ ನಡೆಯದೇ ಇರೋ ಅನಾಹುತ ಇಲ್ಲಿ ನಡೆದು ಹೋಗುತ್ತಿತ್ತು ಎಂದು ರಾಜ್ಕುಮಾರ್ ನನಗೆ ಧೈರ್ಯ ತುಂಬಿದ್ದರು’ ಎಂದು ವಿವರಿಸಿದ್ದರು ಎಂಪಿ ಶಂಕರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.