ನಟಿ ನಿಶ್ವಿಕಾ ನಾಯ್ಡು (Nishvika Naidu) ಅವರು ಸೂಪರ್ ಡ್ಯಾನ್ಸರ್ ಅನ್ನೋದರಲ್ಲಿ ಅನುಮಾನವೇ ಇಲ್ಲ. ಈಗ ಅವರು ‘ಗರಡಿ’ ಸಿನಿಮಾದ ವಿಶೇಷ ಹಾಡಿನಲ್ಲಿ ಬಿಂದಾಸ್ ಆಗಿ ಕುಣಿದಿದ್ದಾರೆ. ಯೋಗರಾಜ್ ಭಟ್ (Yogaraj Bhat) ಬರೆದ ‘ಹೊಡಿರೆಲೆ ಹಲಗಿ..’ ಹಾಡು ಇಂದು (ಜೂನ್ 14) ಬಿಡುಗಡೆ ಆಗಿದೆ. ಈ ಲಿರಿಕಲ್ ವಿಡಿಯೋದಲ್ಲಿ ಒಂದಷ್ಟು ಡ್ಯಾನ್ಸ್ ಸ್ಟೆಪ್ಗಳ ಝಲಕ್ ತೋರಿಸಲಾಗಿದೆ. ಜೊತೆಗೆ ಮೇಕಿಂಗ್ ವಿಡಿಯೋ ಕೂಡ ಇದರಲ್ಲಿ ಇದೆ. ಎ. ಹರ್ಷ ಅವರ ನೃತ್ಯ ನಿರ್ದೇಶನದಲ್ಲಿ ನಿಶ್ವಿಕಾ ನಾಯ್ಡು ಅವರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅವರ ಕುಣಿತ ನೋಡಿ ಪಡ್ಡೆಗಳಿಗೆ ಕಿಕ್ ಏರುವಂತಿದೆ. ವಿ. ಹರಿಕೃಷ್ಣ ಅವರ ಸಂಗೀತ ನಿರ್ದೇಶನದಲ್ಲಿ ‘ಹೊಡಿರೆಲೆ ಹಲಗಿ..’ ಸಾಂಗ್ (Hodirele Halagi Song) ಮೂಡಿಬಂದಿದೆ. ಮೇಘನಾ ಹಳಿಯಾಳ್ ಅವರು ಈ ಗೀತೆಗೆ ಧ್ವನಿ ನೀಡಿದ್ದಾರೆ. ‘ಸರೆಗಮಾ ಕನ್ನಡ’ ಮೂಲಕ ಈ ಹಾಡು ಬಿಡುಗಡೆ ಆಗಿದೆ.
ಯೋಗರಾಜ್ ಭಟ್ ಅವರು ಏನೇ ಮಾಡಿದರೂ ಅದು ಡಿಫರೆಂಟ್ ಆಗಿ ಇರುತ್ತದೆ. ಮತ್ತಾರೂ ಊಹಿಸಲಾಗದಂತಹ ಪದಪುಂಜಗಳ ಮೂಲಕ ಅವರು ಸಾಹಿತ್ಯ ರಚಿಸುತ್ತಾರೆ. ‘ಹೊಡಿರೆಲೆ ಹಲಗಿ..’ ಸಾಂಗ್ ಕೂಡ ಅದೇ ಶೈಲಿಯಲ್ಲಿ ಮೂಡಿಬಂದಿದೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಯೋಗರಾಜ್ ಭಟ್ ಅವರು ಈ ಸಾಂಗ್ ಬರೆದಿದ್ದಾರೆ. ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅವರು ಹಾಕಿದ ವಿಶೇಷವಾದ ಸೆಟ್ಗಳಲ್ಲಿ ಇಡೀ ಹಾಡನ್ನು ಚಿತ್ರೀಕರಿಸಲಾಗಿದೆ.
‘ಸೌಮ್ಯ ಫಿಲ್ಮ್ಸ್’ ಮತ್ತು ‘ಕೌರವ ಪ್ರೊಡಕ್ಷನ್ ಹೌಸ್’ ಮೂಲಕ ‘ಗರಡಿ’ ಸಿನಿಮಾ ಸಿದ್ಧವಾಗುತ್ತಿದೆ. ಬಿಸಿ ಪಾಟೀಲ್ ಅವರ ಪತ್ನಿ ವನಜಾ ಪಾಟೀಲ್ ಈ ಚಿತ್ರದ ನಿರ್ಮಾಪಕರು. ಸೂರ್ಯ, ಬಿಸಿ ಪಾಟೀಲ್, ಸೋನಲ್ ಮಾಂಥೆರೋ, ಧರ್ಮಣ್ಣ ಕಡೂರು, ಪೃಥ್ವಿ ಶಾಮನೂರು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಿಶ್ವಿಕಾ ನಾಯ್ಡು ಅವರನ್ನು ಡ್ಯಾನ್ಸಿಂಗ್ ಡಾನ್ ಎಂದು ಚಿತ್ರತಂಡದವರು ಹೊಗಳಿದ್ದಾರೆ. ‘ನಿಶ್ವಿಕಾ ಅವರು ಅದ್ಭುತ ನೃತ್ಯಗಾರ್ತಿ’ ಎಂದು ಯೋಗರಾಜ್ ಭಟ್ ಹೇಳಿದ್ದಾರೆ.
ಇದನ್ನೂ ಓದಿ: ನಟಿ ನಿಶ್ವಿಕಾ ನಾಯ್ಡು ಹೊಸ ಲುಕ್ ಹೇಗಿದೆ ನೋಡಿ
‘ನಾನು 7ನೇ ತರಗತಿಯಲ್ಲಿ ಇದ್ದಾಗ ಒಂದು ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದೆ. ಆ ಶೋಗೆ ಗೆಸ್ಟ್ ಆಗಿ ಬಿ.ಸಿ. ಪಾಟೀಲ್ ಬಂದಿದ್ದರು. ಇದೇ ಥರ ಟ್ಯಾಲೆಂಟ್ ಮುಂದುವರಿಸಿದ್ರೆ ನೀನು ಹೀರೋಯಿನ್ ಆಗುತ್ತೀಯ ಅಂತ ಅವರು ಅಂದು ನನಗೆ ಹೇಳಿದ್ದರು. ಇಂದು ಅವರ ಸಂಸ್ಥೆಯ ಸಿನಿಮಾದಲ್ಲಿ ನಾನು ಒಂದು ಸಾಂಗ್ಗೆ ಡ್ಯಾನ್ಸ್ ಮಾಡಿದ್ದು ಖುಷಿ ಆಯ್ತು. ನನಗೆ ಡ್ಯಾನ್ಸ್ ಎಂದರೆ ತುಂಬ ಇಷ್ಟ. ನನಗೆ ಬೇಕಾದಂತಹ ಸೂಕ್ತ ಅವಕಾಶ ಇದಾಗಿತ್ತು. ಈ ಸಾಂಗ್ ಯಾವಾಗ ರಿಲೀಸ್ ಆಗತ್ತೋ ಅಂಥ ನಾನು ಕಾಯುತ್ತಿದ್ದೆ. ಯೋಗರಾಜ್ ಭಟ್ ಅವರ ಜೊತೆ ನಾನು ಮೂರು ಸಿನಿಮಾ ಮಾಡಿದ್ದೇನೆ’ ಎಂದು ಸಾಂಗ್ ರಿಲೀಸ್ ಕಾರ್ಯಕ್ರಮದ ವೇದಿಕೆಯಲ್ಲಿ ನಿಶ್ವಿಕಾ ನಾಯ್ಡು ಹೇಳಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:06 pm, Wed, 14 June 23