‘ಲವ್ ಮಾಕ್ಟೇಲ್​ನಲ್ಲಿ ನನಗೆ ಬಾಡಿ ಶೇಮಿಂಗ್ ಆಗಿದೆ, ಆ ಪಾತ್ರ ಮಾಡಿ ತಪ್ಪು ಮಾಡಿದೆ’; ಗೀತಾ ಭಾರತಿ ಭಟ್

ನಟಿ ಗೀತಾ ಭಾರತಿ ಭಟ್ ಅವರು 'ಲವ್ ಮಾಕ್ಟೇಲ್' ಚಿತ್ರದಲ್ಲಿ ತಾವು ಅನುಭವಿಸಿದ ಬಾಡಿ ಶೇಮಿಂಗ್ ಬಗ್ಗೆ ನೋವು ವ್ಯಕ್ತಪಡಿಸಿದ್ದಾರೆ. ಆ ಪಾತ್ರದಲ್ಲಿನ ಸಂಭಾಷಣೆಗಳಿಂದ ತಮಗೆ ತುಂಬಾ ಬೇಸರವಾಗಿದ್ದು, ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದಕ್ಕೆ ವಿಷಾದವಿದೆ ಎಂದಿದ್ದಾರೆ. ಚಿತ್ರ ಯಶಸ್ವಿಯಾದರೂ, ಇಂತಹ ಪಾತ್ರ ಮಾಡಬಾರದಿತ್ತು ಎಂದು ಈಗಲೂ ಅನಿಸುತ್ತದೆ ಎಂದು ಗೀತಾ ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

‘ಲವ್ ಮಾಕ್ಟೇಲ್​ನಲ್ಲಿ ನನಗೆ ಬಾಡಿ ಶೇಮಿಂಗ್ ಆಗಿದೆ, ಆ ಪಾತ್ರ ಮಾಡಿ ತಪ್ಪು ಮಾಡಿದೆ’; ಗೀತಾ ಭಾರತಿ ಭಟ್
ಗೀತಾ ಭಾರತಿ ಭಟ್

Updated on: Nov 29, 2025 | 3:12 PM

ಗೀತಾ ಭಾರತಿ ಭಟ್ (Geetha Bharathi Bhat) ಅವರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಬಿಗ್ ಬಾಸ್​​ನಲ್ಲೂ ಸ್ಪರ್ಧಿಸಿದ್ದರು. ಅವರು ಜೀವನದಲ್ಲಿ ಅನೇಕ ಬಾರಿ ಬಾಡಿ ಶೇಮಿಂಗ್ ಅನುಭವಿಸಿದ್ದಾರೆ. ಅವರಿಗೆ ಸಿನಿಮಾದಲ್ಲೇ ಬಾಡಿ ಶೇಮಿಂಗ್ ಮಾಡಲಾಗಿದೆಯಂತೆ. ಈ ಬಗ್ಗೆ ಅವರು ಸಂದರ್ಶನದಲ್ಲಿ ಆರೋಪ ಹೊರಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಅವರಿಗೆ ಈ ರೀತಿಯ ಅವಮಾನ ಆಗಿದೆ.

‘ಲವ್ ಮಾಕ್ಟೇಲ್’ ಸಿನಿಮಾ 2020ರಲ್ಲಿ ರಿಲೀಸ್ ಆಯಿತು. ಕೊವಿಡ್ ಲಾಕ್​ಡೌನ್ ಆರಂಭಕ್ಕೂ ಕೆಲವೇ ವಾರ ಮೊದಲು ಈ ಚಿತ್ರ ತೆರೆಗೆ ಬಂತು. ಈ ಸಿನಿಮಾ ಸೋಲುವ ಹಂತದಲ್ಲಿ ಇತ್ತು. ಸುದೀಪ್ ಮಾಡಿದ ಒಂದು ಟ್ವೀಟ್​ನಿಂದ ಚಿತ್ರಕ್ಕೆ ಬಲ ಸಿಕ್ಕಿತು. ಆ ಬಳಿಕ ಸಿನಿಮಾ ಸೂಪರ್ ಹಿಟ್ ಆಯಿತು. ಹಾಸ್ಯ ಹಾಗೂ ಭಾವನಾತ್ಮಕ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗಿತ್ತು. ಗೀತಾ ಭಾರತಿ ಭಟ್ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ‘ಹೂವಿನ ರೀತಿ ಇದ್ದರು, ಹೂಕೋಸಿನ ರೀತಿ ಆಗಿದ್ದಾಳೆ’ ಎಂದು ಗೀತಾಗೆ ಹೇಳಲಾಗುತ್ತದೆ. ಈ ಡೈಲಾಗ್ ಅವರಿಗೆ ಬೇಸರ ಮೂಡಿಸಿದೆ.

ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ‘ನನ್ನನ್ನು ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ. ಬಾಡಿಶೇಮಿಂಗ್ ಆಗಿದೆ. ಲವ್ ಮಾಕ್ಟೇಲ್ ಸಿನಿಮಾದಲ್ಲಿ ಈ ಡೈಲಾಗ್ ಇದೆ. ದೊಡ್ಡ ಸ್ಕ್ರೀನ್​ನಲ್ಲಿ ನೋಡಿದಾಗ ನನಗೆ ತುಂಬಾ ಬೇಸರವಾಯಿತು. ಸಿನಿಮಾ ಒಳ್ಳೆಯ ಸಕ್ಸಸ್ ಕಾಣಿಸಿತು. ಸಿನಿಮಾ ಯಶಸ್ಸು ಕಂಡಿದ್ದಕ್ಕೆ ಖುಷಿ ಇದೆ. ಆ ಪಾತ್ರ ಏಕೆ ಮಾಡಬೇಕಿತ್ತು ಎಂದು ಈಗಲೂ ಅನಿಸುತ್ತದೆ. ನನ್ನ ರೀತಿ ಇರೋ ಅನಕೇರಿಗೆ ನಾನು ಕೆಟ್ಟ ಮೆಸೇಜ್ ಕೊಟ್ನಾ? ಬಾಡಿ ಶೇಮಿಂಗ್ ಮಾಡಲು ನಾನೇ ಅನುಮತಿ ಕೊಟ್ಟೆ ಎಂದನಿಸುತ್ತದೆ’ ಎಂದಿದ್ದಾರೆ ಅವರು.

‘ನನಗೆ ಈ ರೀತಿ ಆಗುತ್ತದೆ ಎಂದು ಗೊತ್ತಿಲ್ಲ. ನಾನು ಅಲ್ಲಿದ್ದಾಗ ಡೈಲಾಗ್ ಚೆನ್ನಾಗಿಯೇ ಇತ್ತು. ಆದರೆ, ನಾನು ಅಲ್ಲಿಂದ ಎಗ್ಸಿಟ್ ಆದಮೇಲೆ ಆ ಡೈಲಾಗ್ ಬರುತ್ತದೆ. ತೆರೆಮೇಲೆ ನೋಡಿದಾಗ ತುಂಬಾ ಬೇಸರ ಆಯಿತು. ನನ್ನ ಎದುರು ಸಿನಿಮಾ ನೋಡುತ್ತಿರುವವರು ಬೇಸರ ಮಾಡಿಕೊಂಡರು. ಕೆಲವೊಂದು ತಪ್ಪುಗಳನ್ನು ನಾನು ಮಾಡಿದ್ದೇನೆ. ಕೆಲ ಪಾತ್ರಗಳನ್ನು ತಪ್ಪಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಆ ರೀತಿ ಮೆಸೇಜ್ ಕೊಡೋದು ತಪ್ಪು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಬ್ಲೌಸ್​ ಬಗ್ಗೆ ಸಿನಿಮಾ ಅಂದ್ರೆ ಅಸಹ್ಯ ಅಲ್ಲ’; ‘ರವಿಕೆ ಪ್ರಸಂಗ’ ಚಿತ್ರದ ಬಗ್ಗೆ ಗೀತಾ ಭಾರತಿ ಭಟ್​ ಮಾತು

‘ಆ ಪಾತ್ರದಿಂದ ನಾನು ತುಂಬಾನೇ ಫೇಮಸ್ ಆದೆ. ಆದರೆ, ಆ ರೀತಿಯ ಖ್ಯಾತಿ ಯಾರಿಗೆ ಬೇಕು? ಲವ್ ಮಾಕ್ಟೇಲ್​ನಲ್ಲಿ ಚೆನ್ನಾಗಿ ಮಾಡಿದ್ರಿ ಎಂದು ಹೇಳುತ್ತಾರೆ. ಏಕೆ ಆ ಪಾತ್ರ ಮಾಡಿದ್ದೇನೆ ಎಂದು ಈಗಲೂ ಅನಿಸುತ್ತದೆ’ ಎನ್ನುತ್ತಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.