
ನಟ ಶಿವರಾಜ್ಕುಮಾರ್ (Shivarajkumar) ಅವರ ಅಭಿಮಾನಿಗಳ ವಲಯದಲ್ಲಿ ಈಗ ‘ಬಿಗ್ ಡ್ಯಾಡಿ’ (Big Daddy) ಬಗ್ಗೆಯೇ ಮಾತುಕಥೆ ನಡೆಯುತ್ತಿದೆ. ಯಾರು ಈ ಬಿಗ್ ಡ್ಯಾಡಿ? ಏನಿದರ ಕಥೆ ಎಂದು ಫ್ಯಾನ್ಸ್ ತಲೆ ಕೆರೆದುಕೊಳ್ಳುತ್ತಿದ್ದಾರೆ. ಆ ಎಲ್ಲ ಪ್ರಶ್ನೆಗಳಿಗೆ ಜುಲೈ 12ರಂದು ಉತ್ತರ ಸಿಗಲಿದೆ. ಹೌದು, ಶಿವರಾಜ್ಕುಮಾರ್ ನಟಿಸುತ್ತಿರುವ ‘ಘೋಸ್ಟ್’ (Ghost Movie) ಸಿನಿಮಾದಿಂದ ‘ಬಿಗ್ ಡ್ಯಾಡಿ’ ಟೀಸರ್ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಹೊಸ ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸುವ ಕೆಲಸ ಮಾಡಲಾಗಿದೆ. ಇಂದು (ಜುಲೈ 9) ನಿರ್ದೇಶಕ ಶ್ರೀನಿ (ಎಂ.ಜಿ. ಶ್ರೀನಿವಾಸ್) ಅವರು ಒಂದು ಪೋಸ್ಟರ್ ಹಂಚಿಕೊಂಡಿದ್ದಾರೆ. ಅದರಲ್ಲಿ ಶಿವರಾಜ್ಕುಮಾರ್ ಅವರ ಲುಕ್ ಗಮನ ಸೆಳೆಯುತ್ತಿದೆ.
ಜುಲೈ 12ರಂದು ಶಿವರಾಜ್ಕುಮಾರ್ ಅವರ ಜನ್ಮದಿನ. ಪ್ರತಿ ವರ್ಷದಂತೆ ಈ ಬಾರಿ ಕೂಡ ಅಭಿಮಾನಿಗಳು ಅದ್ದೂರಿಯಾಗಿ ಬರ್ತ್ಡೇ ಆಚರಿಸಲು ಕಾದಿದ್ದಾರೆ. ಅವರ ಸಂಭ್ರಮವನ್ನು ಹೆಚ್ಚು ಮಾಡಲು ‘ಘೋಸ್ಟ್’ ಸಿನಿಮಾ ತಂಡದಿಂದ ‘ಬಿಗ್ ಡ್ಯಾಡಿ’ ವಿಡಿಯೋ ರಿಲೀಸ್ ಆಗಲಿದೆ. ಅಂದು ಬೆಳಗ್ಗೆ 11.45ಕ್ಕೆ ‘ಬಿಗ್ ಡ್ಯಾಡಿ’ ಪರಿಚಯ ಆಗಲಿದೆ. ಅದರ ಝಲಕ್ ತೋರಿಸಲು ಈಗ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಈ ಪೋಸ್ಟರ್ನಲ್ಲಿ ಶಿವರಾಜ್ಕುಮಾರ್ ಅವರು ರೈಫಲ್ ಹಿಡಿದು ನಿಂತಿದ್ದಾರೆ. ಈ ಸಿನಿಮಾ ಸಖತ್ ಮಾಸ್ ಆಗಿರಲಿದೆ ಎಂಬುದಕ್ಕೆ ಸುಳಿವು ಸಿಕ್ಕಿದೆ. ಇಂದು (ಜುಲೈ 9) ನಿರ್ದೇಶಕ ಎಂ.ಜಿ. ಶ್ರೀನಿವಾಸ್ ಅವರ ಜನ್ಮದಿನ. ಈ ಸಂದರ್ಭದಲ್ಲೇ ಪೊಸ್ಟರ್ ಬಿಡುಗಡೆ ಆಗಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕನ್ನಡ ಚಿತ್ರರಂಗದಲ್ಲಿ ಶ್ರೀನಿ ಅವರು ನಟನಾಗಿ, ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ‘ಘೋಸ್ಟ್’ ಚಿತ್ರದಲ್ಲಿ ಅವರು ಶಿವರಾಜ್ಕುಮಾರ್ ಜೊತೆ ಕೈ ಜೋಡಿಸಿರುವುದರಿಂದ ಹೈಪ್ ಹೆಚ್ಚಾಗಿದೆ.
‘ಘೋಸ್ಟ್’ ಸಿನಿಮಾವನ್ನು ಸಂದೇಶ್ ಎನ್. ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ಸಂದೇಶ್ ಪ್ರೊಡಕ್ಷನ್ಸ್’ ಸಂಸ್ಥೆ ಮೂಲಕ ಅದ್ದೂರಿ ಬಜೆಟ್ನಲ್ಲಿ ಈ ಚಿತ್ರ ಸಿದ್ಧವಾಗುತ್ತಿದೆ. ಅಭಿಮಾನಿಗಳು ಈ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶಿವರಾಜ್ಕುಮಾರ್ ಜೊತೆ ಜಯರಾಂ, ಅನುಪಮ್ ಖೇರ್, ಸತ್ಯಪ್ರಕಾಶ್, ದತ್ತಣ್ಣ, ಅಭಿಜಿತ್, ಪ್ರಶಾಂತ್ ನಾರಾಯಣನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.