Veeragase: ‘ಹೆಡ್​ ಬುಷ್​’ ವಿವಾದ ಅಂತ್ಯ: ಕರಗ ಕುರಿತ ಡೈಲಾಗ್​ ಮ್ಯೂಟ್​; ಕ್ಷಮೆ ಕೇಳಿದ ಡಾಲಿ ಧನಂಜಯ್​

| Updated By: ಮದನ್​ ಕುಮಾರ್​

Updated on: Oct 27, 2022 | 5:02 PM

Head Bush | Daali Dhananjay: ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದಿಂದ ಡಾಲಿ ಧನಂಜಯ್​ ನಟನೆಯ ‘ಹೆಡ್​ ಬುಷ್​’ ಚಿತ್ರಕ್ಕೆ ವಿವಾದ ಸುತ್ತಿಕೊಂಡಿತ್ತು. ಈಗ ವಿವಾದಕ್ಕೆ ಅಂತ್ಯ ಹಾಡಲಾಗಿದೆ.

Veeragase: ‘ಹೆಡ್​ ಬುಷ್​’ ವಿವಾದ ಅಂತ್ಯ: ಕರಗ ಕುರಿತ ಡೈಲಾಗ್​ ಮ್ಯೂಟ್​; ಕ್ಷಮೆ ಕೇಳಿದ ಡಾಲಿ ಧನಂಜಯ್​
ಡಾಲಿ ಧನಂಜಯ್
Follow us on

ಹಲವು ಕಾರಣಗಳಿಂದಾಗಿ ‘ಹೆಡ್​ ಬುಷ್​’ (Head Bush) ಚಿತ್ರವು ವಿವಾದದ ಕೇಂದ್ರ ಬಿಂದು ಆಗಿತ್ತು. ಈ ಸಿನಿಮಾದಲ್ಲಿ ಕರಗಕ್ಕೆ ಸಂಬಂಧಿಸಿದ ದೃಶ್ಯಗಳು ಆಕ್ಷೇಪಾರ್ಹವಾಗಿವೆ ಹಾಗೂ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಎದುರಾಗಿತ್ತು. ಅನೇಕ ಸಂಘಟನೆಗಳು ಚಿತ್ರತಂಡದ ವಿರುದ್ಧ ತಿರುಗಿ ಬಿದ್ದಿದ್ದವು. ಪೊಲೀಸ್​ ಠಾಣೆಯಲ್ಲಿ ದೂರು ಕೂಡ ದಾಖಲಾಗುವ ಹಂತಕ್ಕೆ ವಿವಾದ ಹುಟ್ಟಿಕೊಂಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ಸೇರಿ ಪರಿಹಾರ ಕಂಡುಕೊಳ್ಳಲಾಗಿದೆ. ಕರಗದ (Karaga) ದೃಶ್ಯದಲ್ಲಿ ಬರುವ ಡೈಲಾಗ್​ ಅನ್ನು ಮ್ಯೂಟ್​ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಈ ಬಗ್ಗೆ ಡಾಲಿ ಧನಂಜಯ್​ (Daali Dhananjay) ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಡಾನ್​ ಜಯರಾಜ್​ ಅವರ ಜೀವನದ ಕಥೆಯನ್ನು ಆಧರಿಸಿ ‘ಹೆಡ್​ ಬುಷ್​’ ಸಿನಿಮಾ ಮೂಡಿಬಂದಿದೆ. ಅಕ್ಟೋಬರ್​ 21ರಂದು ಈ ಚಿತ್ರ ಬಿಡುಗಡೆ ಆಯಿತು. ಜನರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಅದರ ಜೊತೆಗೆ ವಿವಾದವೂ ಹುಟ್ಟಿಕೊಂಡಿತು. ವೀರಗಾಸೆ ಕಲಾವಿದರ ಮೇಲೆ ಹಲ್ಲೆ ಮಾಡುವಂತಹ ದೃಶ್ಯಗಳು ಈ ಚಿತ್ರದಲ್ಲಿ ಇವೆ ಎಂಬ ಕಾರಣಕ್ಕೆ ಕೆಲವರು ಈ ಸಿನಿಮಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

‘ತಪ್ಪಾಗಿದ್ರೆ ನಾನು ಕ್ಷಮೆ ಕೇಳುತ್ತೇನೆ. ಚಿತ್ರದಲ್ಲಿ ಕರಗದ ಬಗ್ಗೆ ಇರುವ ಡೈಲಾಗ್​ಗೆ ಮ್ಯೂಟ್​​ ಹಾಕುತ್ತೇವೆ. ವೀರಗಾಸೆ ಕಲಾವಿದರಿಗೂ ನೋವಾಗಿದ್ರೆ ಕ್ಷಮೆ ಇರಲಿ. ಇದನ್ನು ಇಲ್ಲಿಗೆ ನಿಲ್ಲಿಸೋಣ. ಮತ್ತೆ ಕೆಲಸ ಮಾಡೋಣ’ ಎಂದು ಡಾಲಿ ಧನಂಜಯ್ ಹೇಳಿದ್ದಾರೆ. ಆ ಮೂಲಕ ವಿವಾದಕ್ಕೆ ಫುಲ್​ ಸ್ಟಾಪ್​ ಹಾಕುವ ನಿರ್ಧಾರಕ್ಕೆ ಬರಲಾಗಿದೆ. ವಿವಾದ ಭುಗಿಲೆದ್ದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಎರಡು ಬಣಗಳಾಗಿದ್ದವು. ಕೆಲವರು ವಿರೋಧ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಡಾಲಿ ಧನಂಜಯ್​ ಪರವಾಗಿ ವಾದ ಮಂಡಿಸಿದ್ದರು.

ಇದನ್ನೂ ಓದಿ
‘ಹೆಡ್​ ಬುಷ್​’ ಚಿತ್ರದ ವೀರಗಾಸೆ ವಿವಾದ: ಧನಂಜಯ್ ಸುದ್ದಿಗೋಷ್ಠಿಯ ಲೈವ್ ನೋಡಿ
ಮೂರು ದಿನಕ್ಕೆ ಬಂಗಾರದ ಬೆಳೆ ತೆಗೆದ ‘ಹೆಡ್​ ಬುಷ್​’ ಸಿನಿಮಾ; ಇಲ್ಲಿದೆ ಕಲೆಕ್ಷನ್ ವಿವರ
Head Bush: ಡಾಲಿ ಧನಂಜಯ್​ ಮೇಲೆ ಹೂಮಳೆ ಸುರಿಸಿದ ಫ್ಯಾನ್ಸ್​; ಚಿತ್ರದುರ್ಗದಲ್ಲಿ ‘ಹೆಡ್​ ಬುಷ್​’ ತಂಡಕ್ಕೆ ಭರ್ಜರಿ ಸ್ವಾಗತ
Head Bush: ಸೈಕಲ್​ ಏರಿ ಅಪ್ಪು ಸಮಾಧಿಗೆ ಬಂದ ಡಾಲಿ ಧನಂಜಯ್; ‘ಹೆಡ್​ ಬುಷ್​’ ಚಿತ್ರಕ್ಕೆ ಡಿಫರೆಂಟ್​ ಪ್ರಚಾರ

WeStandWithDhananjay ಎಂದು ಹ್ಯಾಶ್​ ಟ್ಯಾಗ್​ ಟ್ರೆಂಡ್​ ಆಗಿತ್ತು. ಈ ಹಿಂದೆ ಡಾಲಿ ಧನಂಜಯ್​ ಹೇಳಿದ್ದ ‘ಬಡವರ ಮನೆ ಮಕ್ಕಳು ಬೆಳೀಬೇಕು ಕಣ್ರಯ್ಯ’ ಎಂಬ ಮಾತು ಸಖತ್​ ವೈರಲ್​ ಆಯಿತು. ಈ ಬಗ್ಗೆಯೂ ಧನಂಜಯ್ ಪ್ರತಿಕ್ರಿಯಿಸಿದ್ದಾರೆ. ‘ನನಗೆ ತುಂಬಾ ಜನ ಪ್ರೀತಿ ತೋರಿಸಿದ್ದಾರೆ. ಹೀಗಾಗಿ ನಾನು ಬಡವನಲ್ಲ. ಜನರ ಪ್ರೀತಿ ಪಡೆದ ದೊಡ್ಡ ಶ್ರೀಮಂತ’ ಎಂದು ಅವರು ಹೇಳಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.