ಕನ್ನಡಿಗರ ಜಾಗೃತಿ ಪ್ರಜ್ಞೆ ಪೂರ್ಣಚಂದ್ರ ತೇಜಸ್ವಿ (Poornachandra Tejaswi) ಬರೆದಿರುವ ಡೇರ್ಡೆವಿಲ್ ಮುಸ್ತಾಫಾ (Daredevil Mustafa) ಕಿರುಕತೆ ಅದೇ ಹೆಸರಿನಲ್ಲಿ ಸಿನಿಮಾ ಆಗಿ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಉತ್ತಮ ಆರಂಭ ದೊರೆತಿದೆ. ಸಿನಿಮಾ ಸೆಲೆಬ್ರಿಟಿಗಳು, ಸಾಹಿತ್ಯಾಸಕ್ತರು, ತೇಜಸ್ವಿ ಅಭಿಮಾನಿಗಳು, ಸಾಮಾನ್ಯ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಣ್ಣ ಕತೆಯನ್ನು ಅದ್ಭುತವಾಗಿ ನಿರ್ದೇಶಕ ಶಶಾಂಕ್ ಸೋಗಾಲ ತೆರೆಗೆ ತಂದಿದ್ದಾರೆ. ಪೂರ್ಣಚಂದ್ರ ತೇಜಸ್ವಿಯವರ ಇನ್ನೂ ಕೆಲವು ಕತೆಗಳು ಸಿನಿಮಾ ಆಗಿವೆ. ಯಾವ ಕತೆಗಳು? ಸಿನಿಮಾ ನೋಡಲು ಎಲ್ಲಿ ಸಿಗುತ್ತವೆ? ಇಲ್ಲಿದೆ ಮಾಹಿತಿ.
ತೇಜಸ್ವಿಯರ ಕತೆಗಳಲ್ಲಿ ಮೊದಲು ಸಿನಿಮಾ ಆಗಿದ್ದು ಅವರ ಜನಪ್ರಿಯ ಕತೆ ಅಬಚೂರಿನ ಪೋಸ್ಟಾಫೀಸು. ಅದೇ ಹೆಸರಿನಲ್ಲಿ ಎಲ್ ಲಕ್ಷ್ಮಿನಾರಾಯಣ ಎಂಬುವರು ಕತೆಯನ್ನು ತೆರೆಗೆ ತಂದಿದ್ದರು. ಸಿನಿಮಾ ಬಿಡುಗಡೆ ಆಗಿದ್ದು 1973 ರಲ್ಲಿ. ಸಿನಿಮಾದಲ್ಲಿ ಗಿರಿಜಾ ಲೋಕೇಶ್, ರಮೇಶ್ ಭಟ್, ನಾಣಿ ಇನ್ನೂ ಹಲವರು ನಟಿಸಿದ್ದರು. ಸಿನಿಮಾಕ್ಕೆ ಸಂಗೀತ ನೀಡಿದ್ದಿದ್ದು ವಿಜಯ್ ಭಾಸ್ಕರ್. ಈ ಸಿನಿಮಾಕ್ಕೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳೆರಡೂ ಲಭ್ಯವಾಗಿತ್ತು. ಸಿನಿಮಾ ಈಗ ಯೂಟ್ಯೂಬ್ನಲ್ಲಿ ಉಚಿತ ವೀಕ್ಷಣೆಗೆ ಲಭ್ಯವಿದೆ.
ಬಡವರ ವಿರೋಧಿ ಆಡಳಿತ ಯಂತ್ರ, ವ್ಯವಸ್ಥೆಯನ್ನು ಕಟ್ಟಿಕೊಡುವ ತೇಜಸ್ವಿಯವರ ತಬರನ ಕತೆಯನ್ನು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಸಿನಿಮಾ ಮಾಡಿದ್ದರು. ತಬರ ಶೆಟ್ಟಿ ಪಾತ್ರದಲ್ಲಿ ಚಾರುಹಾಸನ್ ಅದ್ಭುತವಾಗಿ ನಟಿಸಿದ್ದ ಈ ಸಿನಿಮಾ 1987 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಬರುವ ಜೊತೆಗೆ ಚಾರುಹಾಸನ್ಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಯೂ ಬಂದಿತ್ತು. ಆ ವರ್ಷದ ರಾಜ್ಯಪ್ರಶಸ್ತಿಯಲ್ಲಿಯೂ ಹಲವು ವಿಭಾಗಗಳಲ್ಲಿ ಈ ಸಿನಿಮಾ ಪ್ರಶಸ್ತಿ ಗಳಿಸಿಕೊಂಡಿತ್ತು. ಈ ಸಿನಿಮಾ ಸಹ ಯೂಟ್ಯೂಬ್ನಲ್ಲಿ ಉಚಿತ ವೀಕ್ಷಣೆಗೆ ಲಭ್ಯವಿದೆ.
ಗಿರೀಶ್ ಕಾಸರವಳ್ಳಿಯವರೇ ಚಿತ್ರಕತೆ ಬರೆದ ತೇಜಸ್ವಿಯವರ ಕತೆ ಕುಬಿ ಮತ್ತು ಇಯಾಲವನ್ನು ಸದಾನಂದ ಸುವರ್ಣ ನಿರ್ದೇಶನ ಮಾಡಿದ್ದರು. ಸಿನಿಮಾ ಬಿಡುಗಡೆ ಆಗಿದ್ದು 1992 ರಲ್ಲಿ. ಈ ಸಿನಿಮಾದಲ್ಲಿಯೂ ಚಾರುಹಾಸನ್ ಪ್ರಮುಖ ಪಾತ್ರವಾದ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಿಂದಿಯ ಜನಪ್ರಿಯ ನಟ ರಘುಬೀರ್ ಯಾದವ್ ಕಾಂಪೌಡರ್ ಪಾತ್ರದಲ್ಲಿ ನಟಿಸಿದ್ದರು. ರಾಜ್ಯ ಪ್ರಶಸ್ತಿಯ ಜೊತೆಗೆ ಫಿಲಂಫೇರ್ ಪ್ರಶಸ್ತಿಯೂ ಲಭಿಸಿತ್ತು.
ತೇಜಸ್ವಿಯವರ ಜನಪ್ರಿಯ ಕತೆ ಕಿರಗೂರಿನ ಗಯ್ಯಾಳಿಗಳು ಅನ್ನು ಅದೇ ಹೆಸರಿನಲ್ಲಿ ನಿರ್ದೇಶಕಿ ಸುಮನಾ ಕಿತ್ತೂರು ತೆರೆಗೆ ತಂದಿದ್ದಾರೆ. ಬಹುತಾರಾ ಗಣದ ಈ ಸಿನಿಮಾದಲ್ಲಿ ಶ್ವೇತಾ ಶ್ರೀವಾತ್ಸವ್, ಸುಕೃತಾ ವಾಗ್ಲೆ, ಕಾರುಣ್ಯಾ ರಾಮ್, ಲೂಸ್ ಮಾದ ಯೋಗಿ, ಕಿಶೋರ್, ಅಚ್ಯುತ್ ಕುಮಾರ್, ಗಿರಿಜಾ ಲೋಕೇಶ್, ಶರತ್ ಲೋಹಿತಾಶ್ವ ಇನ್ನೂ ಹಲವರು ನಟಿಸಿದ್ದರು. 2016 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಪ್ರಸ್ತುತ ವೂಟ್ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.
ತೇಜಸ್ವಿಯವರ ಸಣ್ಣ ಕತೆ ಡೇರ್ಡೆವಿಲ್ ಮುಸ್ತಾಫಾ ಅನ್ನು ಶಶಾಂಕ ಸೋಗಾಲ ತೆರೆಗೆ ತಂದಿದ್ದಾರೆ 2023 ರ ಮೇ 19 ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ತೇಜಸ್ವಿಯವರ ಓದುಗರೇ ಸೇರಿಕೊಂಡು ನಿರ್ಮಾಣ ಮಾಡಿರುವ ಸಿನಿಮಾ ಇದಾಗಿದ್ದು, ಪ್ರಸ್ತುತ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಮಾತ್ರ ವೀಕ್ಷಣೆಗೆ ಲಭ್ಯವಿದೆ.
ತೇಜಸ್ವಿ ಅವರ ಚಿದಂಬರ ರಹಸ್ಯ ಕತೆ ಸಿನಿಮಾ ಆಗಿಲ್ಲವಾದರೂ ಅದನ್ನು ಟೆಲಿ ಧಾರಾವಾಹಿಯಲ್ಲಿ ಚಂದನದಲ್ಲಿ ಪ್ರಸಾರ ಮಾಡಲಾಗಿತ್ತು. ಇದರ ಜೊತೆಗೆ ತೇಜಸ್ವಿಯವರ ಜುಗಾರಿ ಕ್ರಾಸ್ ಕತೆಯನ್ನು ಸಿನಿಮಾ ಮಾಡಲು ಹಲವರು ಯತ್ನಿಸಿದರಾದರೂ ಅದಿನ್ನೂ ಸಿನಿಮಾ ಆಗಿಲ್ಲ. ಕರ್ವಾಲೋ ಕತೆಯನ್ನು ಸಹ ಸಿನಿಮಾ ಮಾಡುವ ಮಾತುಗಳು ಕೇಳಿ ಬಂದಿದ್ದವು ಆದರೆ ಅದೂ ಸಹ ಸಾಧ್ಯವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ