ಪೂಚಂತೆಯ ‘ಡೇರ್​ಡೆವಿಲ್ ಮುಸ್ತಾಫಾ’ ಸಿನಿಮಾ ಆದ ಕತೆ: ಈ ಸಿನಿಮಾಕ್ಕೆ ನೂರು ಜನ ನಿರ್ಮಾಪಕರು!

Daredevil Mustafa: ಪೂರ್ಣಚಂದ್ರ ತೇಜಸ್ವಿಯವರ ಜನಪ್ರಿಯ ಕತೆ ಡೇರ್​ಡೆವಿಲ್ ಮುಸ್ತಾಫಾ ಅದೇ ಹೆಸರಿನಲ್ಲಿ ಸಿನಿಮಾ ಆಗಿದೆ. ಈ ಸಿನಿಮಾಕ್ಕೆ 100 ಮಂದಿ ನಿರ್ಮಾಪಕರು. ಮೇ 19 ರಂದು ಬಿಡುಗಡೆ ಆಗಲಿರುವ ಈ ಸಿನಿಮಾದ ನಿರ್ದೇಶಕ ಶಶಾಂಕ ಸೋಗಾಲ ಡೇರ್​ಡೆವಿಲ್ ಮುಸ್ತಾಫಾ ಸಿನಿಮಾ ಆದ ಕತೆಯನ್ನು ವಿವರಿಸಿದ್ದಾರೆ.

ಪೂಚಂತೆಯ 'ಡೇರ್​ಡೆವಿಲ್ ಮುಸ್ತಾಫಾ' ಸಿನಿಮಾ ಆದ ಕತೆ: ಈ ಸಿನಿಮಾಕ್ಕೆ ನೂರು ಜನ ನಿರ್ಮಾಪಕರು!
ಡೇರ್​ಡೆವಿಲ್ ಮುಸ್ತಾಫಾ
Follow us
ಮಂಜುನಾಥ ಸಿ.
|

Updated on:May 06, 2023 | 8:44 PM

ಜನಪ್ರಿಯ ಲೇಖಕ ಪೂರ್ಣಚಂದ್ರ ತೇಜಸ್ವಿ (Poornachandra Tejaswi) ರಚಿಸಿರುವ ಡೇರ್​ಡೆವಿಲ್ ಮುಸ್ತಾಫಾ (Daredevil Musthafa) ಕತೆ ಅದೇ ಹೆಸರಿನಲ್ಲಿ ಸಿನಿಮಾ ಆಗಿದೆ. ಶಶಾಂಕ ಸೋಗಾಲ (Shashank Soghal) ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳೇ ಹಣ ಹೂಡಿ, ನಿರ್ಮಿಸಿರುವ ಈ ಸಿನಿಮಾ ಮೇ 19 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ನಿರ್ದೇಶಕ ಶಶಾಂಕ ಸೋಗಾಲ ಟಿವಿ9 ಜೊತೆ ಮಾತನಾಡಿದ್ದಾರೆ.

ಸಾಹಿತ್ಯ ಕೃತಿಯೊಂದು ಸಿನಿಮಾ ಆದಾಗೆಲ್ಲ, ‘ಮೂಲ ಕೃತಿಯೇ ಚೆನ್ನಾಗಿತ್ತು’ ಎಂಬ ಟೀಕೆಗಳು ಕೇಳಿ ಬರುತ್ತವೆ, ಹಾಗಿದ್ದರೂ ನೀವು ಧೈರ್ಯ ಮಾಡಲು ಕಾರಣ?

ಯಾವುದೇ ಕೃತಿಯನ್ನು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ತರುವಾಗ ಯಥಾವತ್ತು ತರಲಾಗದು. ಪ್ರತಿ ಮಾಧ್ಯಮಕ್ಕೂ ಅದರದ್ದೇ ಆದ ಮಿತಿಗಳಿರುತ್ತವೆ. ಅದರಿಂದಾಗಿ ಕೆಲ ಬದಲಾವಣೆಗಳು ಮಾಡಲೇ ಬೇಕಾಗುತ್ತದೆ. ಅಲ್ಲದೆ, ಕತೆ ಓದುವಾಗ ಓದುಗ ತನ್ನ ವ್ಯಕ್ತಿತ್ವ, ಹಿನ್ನೆಲೆಗಳ ಆಧಾರದಲ್ಲಿ ಕತೆಯ ಸನ್ನಿವೇಶಗಳನ್ನು ಮನಸ್ಸಿನಲ್ಲಿ ಒಂದು ರೀತಿಯಲ್ಲಿ ಚಿತ್ರಿಸಿಕೊಂಡಿರುತ್ತಾನೆ. ಕಾಲೇಜು ಕತೆಯೊಂದನ್ನ ಓದುವಾಗ, ಓದುಗ ತನ್ನ ಕಾಲೇಜು ನೆನಪು ಮಾಡಿಕೊಂಡಿರುತ್ತಾನೆ. ಅದೇ ಕತೆ ಸಿನಿಮಾ ಆದಾಗ ತಾನು ಊಹಿಸಿದ ದೃಶ್ಯದಂತಿಲ್ಲವಲ್ಲ ಎಂದು ಓದುಗನಿಗೆ ಅನ್ನಿಸಬಹುದು. ಅದು ಸಹಜ. ಆದರೆ ನಾವು ಸಿನಿಮಾ ಮಾಡುವಾಗ ಕತೆಗಾರನ ಆಶಯಕ್ಕೆ ಧಕ್ಕೆ ತರದೆ ಸಿನಿಮಾ ಮಾಡುವ ನಿರ್ಧಾರ ಮಾಡಿ, ಅಂತೆಯೇ ಸಿನಿಮಾ ಮಾಡಿದ್ದೇವೆ. ತೇಜಸ್ವಿಯವರ ಸಹಜ ಹ್ಯೂಮರ್ ಅನ್ನು, ಅಷ್ಟೆ ಸಹಜವಾಗಿ ತೆರೆಗೆ ತರುವ ಪ್ರಯತ್ನ ಮಾಡಿದ್ದೇವೆ. ಇಷ್ಟೂ ಅಲ್ಲದೆ, ತೇಜಸ್ವಿಯವರೇ ಹಿಂದೆ ಹೇಳಿದ್ದಾರೆ, ನನ್ನ ಯಾವುದೇ ಕತೆಯನ್ನು ಸಿನಿಮಾ ಮಾಡಿದರೂ ಜನ ಬೈದೇ ಬೈಯ್ಯುತ್ತಾರೆ ಎಂದು. ಹಾಗಾಗಿ, ವೀಕ್ಷಕರ ಟೀಕೆಗಳಿಗೆ ನಾವು ತಯಾರಾಗಿದ್ದೇವೆ.

ಡೇರ್​ಡೆವಿಲ್ ಮುಸ್ತಾಫಾ ಕತೆಯನ್ನು ಸಿನಿಮಾ ಮಾಡುವ ಸವಾಲು ಹೇಗಿತ್ತು?

ಡೇರ್​ಡೆವಿಲ್ ಮುಸ್ತಾಫಾ, ಒಂದು ಕಿರುಕತೆ. ಅದನ್ನು ಸಿನಿಮಾ ಮಾಡುವುದಕ್ಕೆ ಕೆಲವು ಹೆಚ್ಚುವರಿ ಪಾತ್ರಗಳು, ಸನ್ನಿವೇಶಗಳನ್ನು ಸೇರಿಸಬೇಕಿತ್ತು. ಒಟ್ಟಾರೆ ಸಿನಿಮಾದ ಆಶಯಕ್ಕೆ ಧಕ್ಕೆಯಾಗದಂತೆ ಹಾಗೂ ಮೂಲಕತೆಗೆ ಪ್ರಭಾವಳಿ ಮಾದರಿಯಲ್ಲಿ ಕಿರುಸನ್ನಿವೇಶಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಮೂಲಕತೆಯನ್ನು ಉದ್ದ ಮಾಡಿದ್ದಾರೆ ಎಂದು ಕೆಲವರು ಹೇಳಬಹುದು ಆದರೆ ಹೆಚ್ಚುವರಿ ದೃಶ್ಯಗಳು ಮೂಲಕತೆಯ ಓಗಕ್ಕೆ, ಅಂದಕ್ಕೆ ಒದಗಿಬಂದಿವೆ. ಸಿನಿಮಾವನ್ನು ಈಗಾಗಲೇ ನೋಡಿದವರು ಸಹ ಇದನ್ನೇ ಹೇಳಿದ್ದಾರೆ.

ಸಾಹಿತ್ಯ ಕೃತಿ ಆಧರಿತ ಸಿನಿಮಾಗಳು ಗಂಭೀರವಾಗಿರುತ್ತವೆ ಎಂಬ ಟೀಕೆಯೂ ಇದೆಯಲ್ಲ?

ಈ ಹಿಂದೆ ಬಂದಿರುವ ಬಹುತೇಕ ಸಾಹಿತ್ಯ ಕೃತಿ ಆಧರಿತ ಸಿನಿಮಾಗಳು ಗಂಭೀರವಾಗಿವೆ. ಆದರೆ ನಮ್ಮ ಸಿನಿಮಾದ ಟ್ರೈಲರ್ ನೋಡಿದರೆ ಆ ದೂರುಗಳೆಲ್ಲ ದೂರಾಗುತ್ತವೆ. ನಾವು ಸಿನಿಮಾದ ಹ್ಯೂಮರ್​ ಮೇಲೆ, ಕತೆಯಲ್ಲಿ ತೇಜಸ್ವಿಯವರು ಕಟ್ಟಿಕೊಟ್ಟಿರುವ ಪರಿಸರದ ಮೇಲೆ ಹೆಚ್ಚು ಗಮನವಹಿಸಿದ್ದೇವೆ. ತೇಜಸ್ವಿಯವರ ಕತೆಗಳಲ್ಲಿ ಸಹಜವಾದ ಹಾಸ್ಯ ಇದ್ದೇ ಇರುತ್ತದೆ. ಅಲ್ಲದೆ ನಾನೂ ಸಹ ಈ ಕತೆಯನ್ನು ಸಿನಿಮಾ ಮಾಡಲು ಆರಿಸಿಕೊಂಡಿದ್ದೇ ಕತೆಯಲ್ಲಿನ ಹ್ಯೂಮರ್ ಕಾರಣಕ್ಕೆ. ಸಿನಿಮಾ ಪ್ರಾರಂಭವಾಗಿ ಮುಗಿಯುವವರೆಗೂ ಹಲವು ಹಾಸ್ಯ ದೃಶ್ಯಗಳಿವೆ. ಸಿನಿಮಾ ನೋಡುವವರ ಮುಖದಲ್ಲಿ ಸದಾ ಕಿರುನಗೆ ಇದ್ದೇ ಇರುತ್ತದೆ. ಸಾಹಿತ್ಯ ಕೃತಿಯ ಸಿನಿಮಾ ಆದರೂ ಇದು ಗಂಭೀರ ಸಿನಿಮಾ ಅಲ್ಲ. ತೇಜಸ್ವಿಯವರು ಸಾಮಾನ್ಯ ಜನರ ಬರಹಗಾರ, ಸ್ವತಃ ಅವರೂ ಸಹ ಆರ್ಟ್​ಹೌಸ್ ಸಿನಿಮಾಗಳಿಂದ ತುಸು ದೂರವೇ ಇದ್ದವರು. ಹಾಗಾಗಿ ನಾವೂ ಸಹ ಸಾಮಾನ್ಯ ಜನರಿಗಾಗಿಯೇ ಸಿನಿಮಾ ಮಾಡಿದ್ದೇವೆ.

ಮಿಲೇನಿಯಲ್​ಗಳಿಗೆ ತೇಜಸ್ವಿಯವರ ಪರಿಚಯ ಇದೆಯೇ? ತೇಜಸ್ವಿಯವರ ಕತೆ ಆಧರಿತ ಸಿನಿಮಾ ಎಂಬ ಕಾರಣಕ್ಕೆ ಅವರು ಚಿತ್ರಮಂದಿರಕ್ಕೆ ಬರುತ್ತಾರೆಯೇ?

ತೇಜಸ್ವಿಯವರ ಪರಿಚಯ ಇಲ್ಲದವರು ಕಡಿಮೆ. ಹೊಸ ತಲೆಮಾರಿನ ಯುವಕರ ಪಠ್ಯಪುಸ್ತಕಗಳ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಅವರಿಗೆ ತೇಜಸ್ವಿ ಅವರ ಪಾಠಗಳಿರಬಹುದೇನೋ. ಆದರೆ ತೇಜಸ್ವಿ ಓದುಗರ ಸಂಖ್ಯೆಯಂತೂ ಕಡಿಮೆಯಿಲ್ಲ. ಸಾಹಿತ್ಯ ಕೃತಿಗಳ ಓದುಗರಲ್ಲದ ಆದರೆ ಸಿನಿಮಾ ಪ್ರೇಮಿಗಳಾದ ಮಿಲೇನಿಯಲ್​​ಗಳಿಗೆ ತೇಜಸ್ವಿ ಅವರನ್ನು ಪರಿಚಯಿಸುವ ಅಪ್ರಯತ್ನಪೂರ್ವಕ ಕಾರ್ಯವೂ ಈ ಸಿನಿಮಾದಿಂದ ಆಗಬಹುದೇನೋ ಎಂಬುದು ನನ್ನ ಅಭಿಪ್ರಾಯ. ‘ತೇಜಸ್ವಿಯವರನ್ನು ಜನರಿಗೆ ತಲುಪಿಸುವ ಪ್ರಯತ್ನವೇ ನಮ್ಮ ಸಿನಿಮಾ’ ಎಂದು ನಾನು ಹೇಳಲಾರೆ. ತೇಜಸ್ವಿಯವರ ಕತೆಗಳು, ಅವರ ವ್ಯಕ್ತಿತ್ವವೇ ಆ ಕೆಲಸವನ್ನು ಯಶಸ್ವಿಯಾಗಿ ಮಾಡತ್ತಾ ಬಂದಿವೆ. ಆದರೆ ತೇಜಸ್ವಿಯವರ ಬಗ್ಗೆ ಗೊತ್ತಿಲ್ಲದವರು ಸಹ ಇದೊಂದು ‘ಕಾಲೇಜು’ ಸಿನಿಮಾ ಎಂಬ ಕಾರಣಕ್ಕೆ ಸಿನಿಮಾಕ್ಕೆ ಬರುವ ಸಾಧ್ಯತೆ ಇದೆ. ಇದೀಗ ಡಾ.ಬ್ರೋ ಅವರನ್ನು ನಮ್ಮ ಸಿನಿಮಾಕ್ಕೆ ತೊಡಗಿಸಿಕೊಂಡ ಬಳಿಕ ಅವರ ಅಭಿಮಾನಿಗಳೂ ಈ ಸಿನಿಮಾದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಹೀಗೆ ತೇಜಸ್ವಿಯವರ ಬಗ್ಗೆ ತಿಳಿಯದ ವ್ಯಕ್ತಿಗಳಿಗೂ, ಸಾಹಿತ್ಯದ ಓದುಗರಲ್ಲದವರಿಗೂ ನಮ್ಮ ಸಿನಿಮಾ ತಲುಪುತ್ತಿದೆ. ಆ ಮೂಲಕ ಅವರಿಗೆ ತೇಜಸ್ವಿಯವರ ಪರಿಚಯ ಆಗಲಿದೆ.

ಈ ಸಿನಿಮಾಕ್ಕೆ ನೂರು ಜನ ನಿರ್ಮಾಪಕರಿದ್ದಾರಂತಲ್ಲ?

ಹೌದು, ಡೇರ್​ಡೆವಿಲ್ ಮುಸ್ತಾಫಾ ಸಿನಿಮಾಕ್ಕೆ 100 ಮಂದಿ ನಿರ್ಮಾಪಕರು. ಅದರಲ್ಲಿ 25 ಕ್ಕೂ ಹೆಚ್ಚು ಮಂದಿ ಸಿನಿಮಾದ ವಿವಿಧ ವಿಭಾಗಗಳಲ್ಲಿ ಕೆಲಸ ಸಹ ಮಾಡಿದ್ದಾರೆ. ಮೂರು ವರ್ಷಗಳ ಹಿಂದೆ ಪೂರ್ಣಚಂದ್ರ ತೇಜಸ್ವಿಯವರ ಕತೆ ಆಧರಿಸಿದ ಸಿನಿಮಾ ಮಾಡುತ್ತಿರುವುದಾಗಿ ಇದಕ್ಕೆ ನಿರ್ಮಾಪಕರ ಅಗತ್ಯವಿರುವುದಾಗಿ ಫೇಸ್​ಬುಕ್ ಪೋಸ್ಟ್ ಹಾಕಿದ್ದೆ. ಪೋಸ್ಟ್ ಹಾಕಿದ ದಿನವೇ ಸುಮಾರು 200 ಜನ ನನಗೆ ಮೆಸೇಜ್ ಮಾಡಿ ಮಾಹಿತಿ ಕೇಳಿದ್ದರು. ಅದಾದ ಒಂದು ವಾರದೊಳಗೆ 75 ಮಂದಿ ಜನ ಸಿನಿಮಾಕ್ಕೆ ಹಣ ತೊಡಿಗಿಸುವುದಾಗಿ ಖಾತ್ರಿಪಡಿಸಿದರು. ಒಟ್ಟಾರೆ ತೇಜಸ್ವಿ ಅಭಿಮಾನಿಗಳೇ ಸೇರಿ ಮಾಡುತ್ತಿರುವ ಸಿನಿಮಾ ಇದು. ಪ್ರಪಂಚದ ಮೊತ್ತ ಮೊದಲ ಫ್ಯಾನ್ಸ್ ಪಂಡೆಂಡ್ ಸಿನಿಮಾ ನಮ್ಮ ಡೇರ್​ಡೆವಿಲ್ ಮುಸ್ತಾಫಾ.

ಮೊದಲಿಗೆ ಯಾವುದಾದರೂ ಪ್ರೊಡಕ್ಷನ್ ಹೌಸ್​ಗಳನ್ನು ಸಂಪರ್ಕ ಮಾಡಿದ್ರಾ?

ಫೇಸ್​ಬುಕ್ ಪೋಸ್ಟ್ ಹಾಕುವ ಮೊದಲು ಹಲವು ನಿರ್ಮಾಪಕರಿಗೆ ಕತೆ ಹೇಳಿದ್ದೆ. ಕೆಲವು ದೊಡ್ಡ ನಿರ್ಮಾಪಕರಿಗೂ ಕತೆ ಹೇಳಿದ್ದೆ. ಎಲ್ಲರಿಗೂ ಕತೆ ಇಷ್ಟವಾಯಿತು, ತೇಜಸ್ವಿ ಅವರೆಂದರೂ ಇಷ್ಟ ಎಂದರು. ಆದರೆ ಹೊಸಬರ ಸಿನಿಮಾಕ್ಕೆ ಬಂಡವಾಳ ಹೂಡಲು ಅವರಿಗೆ ಅವರದ್ದೇ ಆದ ಸಮಸ್ಯೆಗಳಿದ್ದವು. ಕೆಆರ್​ಜಿಯ ಕಾರ್ತಿಕ್ ಗೌಡ ಅವರಿಗೂ ಕತೆ ಹೇಳಿದ್ದೆ. ಅವರಿಗೂ ಆಸಕ್ತಿ ಇತ್ತು ಆದರೆ ಮಾರುಕಟ್ಟೆ ಸಮಸ್ಯೆಗಳಿಂದ ಅವರು ಬಂಡವಾಳ ಹೂಡಲಾಗಲಿಲ್ಲ. ಇನ್ನು ಕೆಲವರು, ‘ಹೊಸಬರ ಸಿನಿಮಾ ತಾನೇ 50 ಲಕ್ಷದಲ್ಲಿ ಸಿನಿಮಾ ಮುಗಿಸಿ, 80 ಲಕ್ಷದಲ್ಲಿ ಸಿನಿಮಾ ಮುಗಿಸಿ’ ಎಂದರು. ಆದರೆ ನಮ್ಮ ಕ್ಯಾನ್​ವಾಸ್ ದೊಡ್ಡದಾಗಿತ್ತು. ಕಡಿಮೆ ಬಜೆಟ್​ನಲ್ಲಿ ಮಾಡಿದರೆ ಪೂಚಂತೆಯವರ ಆ ಪ್ರಪಂಚವನ್ನು ಅಂದುಕೊಂಡ ರೀತಿಯಲ್ಲಿ ಕಟ್ಟಿಕೊಡಲು ಆಗುತ್ತಿರಲಿಲ್ಲ. ಹಾಗಾಗಿ ನಾನು ಒಪ್ಪಿಕೊಂಡಿರಲಿಲ್ಲ. ಕೊನೆಗೆ ತೇಜಸ್ವಿಯವರ ಅಭಿಮಾನಿಗಳೇ ಸಿನಿಮಾಕ್ಕೆ ಬಂಡವಾಳ ಹೂಡುವಂತಾಯಿತು.

ಡೇರ್​ಡೆವಿಲ್ ಮುಸ್ತಾಫಾ ಕತೆಯನ್ನು ಹಲವರು ಓದಿದ್ದಾರೆ, ಅಂದಮೇಲೆ ಅದೇ ಕತೆಯನ್ನು ಸಿನಿಮಾ ಆಗಿ ಯಾಕೆ ನೋಡಬೇಕು?

‘ಮಾಲ್ಗುಡಿ ಡೇಸ್’ ಸರಣಿ, ‘ಬೆಟ್ಟದ ಹೂವು’ ಇಂಥಹಾ ಸಿನಿಮಾಗಳನ್ನು ನೋಡಿದಾಗ ಒಂದು ರೀತಿಯ ಅನೂಹ್ಯ ಅನುಭವವಾಗುತ್ತಲ್ಲ. ಆ ರೀತಿಯ ಅನುಭವ ಮತ್ತೆ ಪಡೆಯಲು ನಮ್ಮ ಡೇರ್​ಡೆವಿಲ್ ಮುಸ್ತಾಫಾ ಸಿನಿಮಾ ನೋಡಬೇಕು. ಪೂರ್ಣಚಂದ್ರ ತೇಜಸ್ವಿಯವರು ಸೃಷ್ಟಿಸಿರುವ ಪ್ರಪಂಚವನ್ನು ಓದಿಯಷ್ಟೆ ಜನರಿಗೆ ಗೊತ್ತು ಆದರೆ ಅದರ ದೃಶ್ಯ ರೂಪ, ಪೂಚಂತೆ ಪ್ರಪಂಚದ ತಾಜಾತನವನ್ನು ಅನುಭವಿಸಲು ನಮ್ಮ ಸಿನಿಮಾವನ್ನು ಚಿತ್ರಮಂದಿರದಲ್ಲಿ ಎದುರುಗೊಳ್ಳಬೇಕು. ಮಲೆನಾಡಿನ ಅನುಭವವನ್ನು ನಮ್ಮ ಚಿತ್ರಕ್ಕೆ ನಾವು ನೀಡಿದ್ದೇವೆ, ಎಷ್ಟೋ ಶಬ್ದ, ಧ್ವನಿಗಳನ್ನು ಮಲೆನಾಡಿನ ಮೂಲೆಗಳಿಗೆ ಹೋಗಿ ರೆಕಾರ್ಡ್ ಮಾಡಿಕೊಂಡು ಬಂದು ಸಿನಿಮಾಕ್ಕೆ ಅಳವಡಿಸಿದ್ದೇವೆ. ಮೇಲಾಗಿ, ಇದು ಹೊಸಬರೇ ಮಾಡಿರುವ ಹೊಸ ಸಿನಿಮಾ. ಇಷ್ಟು ದೊಡ್ಡ ಸಂಖ್ಯೆಯ ಹೊಸಬರೇ ಸೇರಿ ಮಾಡಿದ ಸಿನಿಮಾ ಇತ್ತೀಚೆಗೆ ಅಪರೂಪ. ಹೊಸಬರ ಪ್ರತಿಭೆಗಳನ್ನು ನೋಡಲು, ಆಸ್ವಾದಿಸಲು ನಮ್ಮ ಸಿನಿಮಾ ನೋಡಬೇಕು. ಡೇರ್​ಡೆವಿಲ್ ಸಿನಿಮಾ ಮೇ 19ರಂದು ಬೆಂಗಳೂರಿನ ಹಲವು ಚಿತ್ರಮಂದಿರ, ಮಲ್ಟಿಪ್ಲೆಕ್ಸ್​ಗಳನ್ನು ಸೇರಿದಂತೆ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬಿಡುಗಡೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:04 pm, Sat, 6 May 23